
ತೀತನಿಗೆ 3
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವರು ತಮ್ಮ ಕಾರ್ಯಗಳಿಂದಲ್ಲ, ಕರುಣೆಯಿಂದ ರಕ್ಷಿಸಿದ್ದರಿಂದ ವಿಶ್ವಾಸಿಗಳು ಅಧಿಕಾರಿಗಳನ್ನು ಗೌರವಿಸಿ, ಜಗಳಗಳನ್ನು ದೂರವಿಟ್ಟು, ಸೌಮ್ಯತೆಯನ್ನು ತೋರಿಸಬೇಕು. ತೀತನು ಒಳ್ಳೆಯ ಕಾರ್ಯಗಳನ್ನು ಒತ್ತಿಹೇಳಿ, ಮೂರ್ಖ ವಿವಾದಗಳನ್ನು ತಿರಸ್ಕರಿಸಿ, ವಿಭಜನೆಯನ್ನು ಸಂಬೋಧಿಸಿ, ಪ್ರಯಾಣಿಸುವ ಸಹಕೆಲಸಗಾರರಿಗೆ ಸಹಾಯ ಮಾಡಬೇಕು.
ಸೌಮ್ಯತೆಕರುಣೆಒಳ್ಳೆಯ ಕಾರ್ಯಗಳುವಿಭಜನೆಯನ್ನು ತಪ್ಪಿಸುವುದು
1ಆಳುವವರಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಸಿದ್ಧರಾಗಿರಬೇಕೆಂತಲೂ ಅವರಿಗೆ ಜ್ಞಾಪಕಮಾಡು.
2ಯಾರ ವಿಷಯವಾಗಿಯೂ ಕೆಟ್ಟದ್ದನ್ನಾಡದೆ, ಎಲ್ಲರೊಂದಿಗೆ ಸಮಾಧಾನವಾಗಿಯೂ ಇತರರನ್ನು ಅರ್ಥಮಾಡಿಕೊಳ್ಳುವವರಾಗಿಯೂ ಯಾವಾಗಲೂ ನಮ್ರರಾಗಿ ಇರಬೇಕೆಂತಲೂ ಅವರಿಗೆ ಜ್ಞಾಪಕಮಾಡು.
3ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸ ಹೋದವರೂ ವಿವಿಧ ಆಶೆಗಳಿಗೂ ಭೋಗಗಳಿಗೂ ದಾಸರಾಗಿದ್ದೆವು. ಕೆಟ್ಟತನ ಹಾಗೂ ಮತ್ಸರಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ದ್ವೇಷಿಸುವವರೂ ಆಗಿದ್ದೆವು.
4ಆದರೆ ನಮಗೆ ರಕ್ಷಕರೂ ದೇವರೂ ಆಗಿರುವ ಕ್ರಿಸ್ತ ಯೇಸುವಿನ ದಯೆಯೂ ಪ್ರೀತಿಯೂ ಮನುಷ್ಯರ ಕಡೆಗೆ ಪ್ರತ್ಯಕ್ಷವಾದಾಗ,
5ಅವರು ನಮ್ಮನ್ನು ರಕ್ಷಿಸಿದರು. ಹೇಗೆಂದರೆ, ನಾವು ಮಾಡಿದ ಪುಣ್ಯ ಕ್ರಿಯೆಗಳಿಂದಲ್ಲ, ಅವರ ಕರುಣೆಗೆ ಅನುಸಾರವಾಗಿ ಆತ್ಮಿಕವಾಗಿ ಹುಟ್ಟುವಂತೆ ಮಾಡಿ, ನಮ್ಮನ್ನು ತೊಳೆದೂ ಪವಿತ್ರಾತ್ಮ ದೇವರು ನೂತನ ಜೀವನವನ್ನು ಕೊಡುವುದರ ಮೂಲಕವೇ ಅವರು ನಮ್ಮನ್ನು ರಕ್ಷಿಸಿದರು.
6ನಮಗೆ ರಕ್ಷಕರಾದ ಕ್ರಿಸ್ತ ಯೇಸುವಿನ ಮೂಲಕ ದೇವರು ಪವಿತ್ರಾತ್ಮ ದೇವರನ್ನು ನಮ್ಮ ಮೇಲೆ ಸಮೃದ್ಧವಾಗಿ ಸುರಿಸಿದರು.
7ನಾವು ಅವರ ಕೃಪೆಯಿಂದ ನೀತಿವಂತರೆಂದು ನಿರ್ಣಯ ಹೊಂದಿ, ನಿತ್ಯಜೀವದ ನಿರೀಕ್ಷೆಗೆ ಅನುಸಾರವಾಗಿ ಬಾಧ್ಯರಾಗುವಂತೆ ಮಾಡಿದರು.
8ಇದು ನಂಬತಕ್ಕ ಮಾತಾಗಿದೆ. ದೇವರನ್ನು ನಂಬಿದವರು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರುವಂತೆ ನೀನು ಇವುಗಳ ವಿಷಯವಾಗಿ ಪ್ರಾಮುಖ್ಯತೆಯನ್ನು ಕೊಡಬೇಕೆಂದು ಅಪೇಕ್ಷಿಸುತ್ತೇನೆ. ಇವು ಮನುಷ್ಯರಿಗೆ ಹಿತಕರವೂ ಪ್ರಯೋಜನಕರವೂ ಆಗಿವೆ.
9ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ನಿಯಮದ ವಿಷಯವಾಗಿರುವ ವಾಗ್ವಾದಗಳಿಗೂ ದೂರವಾಗಿರು. ಏಕೆಂದರೆ ಅವು ನಿಷ್ಪ್ರಯೋಜನವಾದವುಗಳೂ ವ್ಯರ್ಥವಾದವುಗಳೂ ಆಗಿವೆ.
10ಭೇದ ಹುಟ್ಟಿಸುವವರನ್ನು ಒಂದೆರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟುಬಿಡು. ಅಂಥವರ ಸಹವಾಸ ಮಾಡದಿರು.
11ಅಂಥವರು ಸನ್ಮಾರ್ಗ ತಪ್ಪಿದವರೂ ತಮ್ಮನ್ನು ತಾವೇ ಖಂಡಿಸಿಕೊಳ್ಳುವವರಾಗಿ ಪಾಪಮಾಡುವವರೂ ಆಗಿದ್ದಾರೆಂದು ನಿಶ್ಚಯವಾಗಿ ತಿಳಿದುಕೊ.
12ನಾನು ಅರ್ತೆಮನನ್ನಾಗಲಿ, ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದಾಗ ನೀನು ನಿಕೊಪೊಲಿಯಲ್ಲಿ ನನ್ನ ಹತ್ತಿರ ಬರುವುದಕ್ಕೆ ಪ್ರಯತ್ನ ಮಾಡು. ಅಲ್ಲಿಯೇ ಚಳಿಗಾಲವನ್ನು ಕಳೆಯಬೇಕೆಂದು ನಾನು ತೀರ್ಮಾನಿಸಿದ್ದೇನೆ.
13ನಿಯಮ ಪಂಡಿತನಾದ ಜೇನನನ್ನೂ ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಸಾಗಕಳುಹಿಸು. ಅವರಿಗೇನೂ ಕೊರತೆಯಾಗಬಾರದು.
14ನಮ್ಮವರು ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೂ ಅಗತ್ಯವಾಗಿರುವ ಕೊರತೆಗಳನ್ನು ನೀಗಿಸುವುದಕ್ಕೂ ಕಲಿತುಕೊಳ್ಳಲಿ. ಆಗ ಅವರು ನಿಷ್ಪಲರಾಗದೇ ಇರುವರು.
15ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ವಿಶ್ವಾಸದಲ್ಲಿ ನಮ್ಮನ್ನು ಪ್ರೀತಿಸುವವರಿಗೆ ವಂದನೆಗಳನ್ನು ಹೇಳು. ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ!
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.