Philemon warmly embracing Onesimus at a household doorway while a messenger holds Paul’s sealed letter

ಫಿಲೆಮೋನನಿಗೆ 1

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಫಿಲೆಮೋನನ ಪ್ರೀತಿ ಮತ್ತು ನಂಬಿಕೆಗಾಗಿ ಪೌಲನು ದೇವರಿಗೆ ಕೃತಜ್ಞತೆ ಸಲ್ಲಿಸಿ, ತನಗೆ ಪ್ರಿಯನಾದ ಒನೇಸಿಮನಿಗಾಗಿ ಮನವಿ ಮಾಡುತ್ತಾನೆ. ಆಜ್ಞಾಪಿಸುವ ಬದಲು, ಒನೇಸಿಮನನ್ನು ಪ್ರಿಯ ಸಹೋದರನಾಗಿ ಸ್ವೀಕರಿಸುವಂತೆ ಫಿಲೆಮೋನನನ್ನು ಕೇಳಿ, ಯಾವುದೇ ಸಾಲವನ್ನು ತಾನು ತೀರಿಸುವುದಾಗಿ ಹೇಳುತ್ತಾನೆ.
ಸಮಾಧಾನಒನೇಸಿಮಪ್ರಿಯ ಸಹೋದರತ್ವಸ್ವಯಂಪ್ರೇರಿತ ಪ್ರೀತಿ
1ಸುವಾರ್ತೆಯನ್ನು ಸಾರಿದ್ದರಿಂದ ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ, ನಮಗೆ ಪ್ರಿಯನೂ ಜೊತೆಗೆಲಸದವನೂ ಆಗಿರುವ ಫಿಲೆಮೋನನಿಗೂ
2ಸಹೋದರಿ ಅಪ್ಫಿಯಳಿಗೂ ನಮ್ಮ ಸಹ ಸೈನಿಕನಾದ ಅರ್ಖಿಪ್ಪನಿಗೂ ನಿಮ್ಮ ಮನೆಯಲ್ಲಿ ಸೇರುವ ಸಭೆಯವರಿಗೂ ಬರೆಯುವುದೇನೆಂದರೆ:
3ನಮ್ಮ ತಂದೆಯಾದ ದೇವರಿಂದಲೂ ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಇರಲಿ.
4ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ಜ್ಞಾಪಕಮಾಡಿಕೊಂಡು ನನ್ನ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
5ಏಕೆಂದರೆ, ನಮ್ಮ ಕರ್ತ ಆಗಿರುವ ಯೇಸುವಿನಲ್ಲಿ ನಿನಗಿರುವ ವಿಶ್ವಾಸವನ್ನೂ ಪರಿಶುದ್ಧರೆಲ್ಲರಿಗಾಗಿ ನಿನಗಿರುವ ಪ್ರೀತಿಯನ್ನೂ ಕುರಿತು ನಾನು ಕೇಳಿದ್ದೇನೆ.
6ನಿನ್ನ ವಿಶ್ವಾಸದಲ್ಲಿ ಅನ್ಯೋನ್ಯತೆಯು ನಿನ್ನ ಎಲ್ಲಾ ಒಳ್ಳೆಯದರ ಆಳವಾದ ತಿಳುವಳಿಕೆಯನ್ನು ಕ್ರಿಸ್ತ ಯೇಸುವಿಗಾಗಿ ಪರಿಣಾಮಗೊಳಿಸಿ ಹಂಚುವಂತೆ ನಾನು ಪ್ರಾರ್ಥಿಸುತ್ತೇನೆ.
7ಸಹೋದರನೇ, ನಿನ್ನ ಮೂಲಕ ದೇವಜನರ ಹೃದಯಗಳಿಗೆ ಉತ್ತೇಜನವಾದ್ದರಿಂದ, ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಆನಂದವೂ ಆದರಣೆಯೂ ಉಂಟಾದವು.
8ಆದಕಾರಣ, ನಾನು ಈಗ ನಿನಗೆ ಏನು ಮಾಡಬೇಕೆಂದು ಆಜ್ಞಾಪಿಸುವುದಕ್ಕೆ ಕ್ರಿಸ್ತ ಯೇಸುವಿನಲ್ಲಿ ನನಗೆ ಬಹು ಧೈರ್ಯವಿದ್ದರೂ
9ಹಾಗೆ ಆಜ್ಞಾಪಿಸದೆ, ಈಗ ಕ್ರಿಸ್ತ ಯೇಸುವಿನ ಸೆರೆಯಾಳೂ ಮುದುಕನೂ ಆಗಿರುವ ಪೌಲನೆಂಬ ನಾನು ಪ್ರೀತಿಯ ನಿಮಿತ್ತವೇ ನಿನ್ನನ್ನು ಬೇಡಿಕೊಳ್ಳುತ್ತೇನೆ.
10ನಾನು ಬಂಧಿಯಾಗಿರುವಾಗ ನನ್ನ ಮಗನಂತೆ ಬಂದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಕೇಳಿಕೊಳ್ಳುತ್ತೇನೆ. ಏಕೆಂದರೆ ನಾನು ಸೆರೆಯಲ್ಲಿದ್ದಾಗ ಅವನು ನನಗೆ ಆತ್ಮಿಕ ಮಗನಾದನು.
11ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ.
12ನನಗೆ ಪ್ರಾಣವಾಗಿರುವ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ನಾನು ಕಳುಹಿಸಿ ಕೊಡುತ್ತಿದ್ದೇನೆ.
13ಸುವಾರ್ತೆಯ ನಿಮಿತ್ತ ಸೆರೆಯಲ್ಲಿರುವ ನನಗೆ ಉಪಚಾರ ಮಾಡುವಂತೆ ನಿನಗೆ ಬದಲಾಗಿ ಓನೇಸಿಮನನನ್ನು ನನ್ನ ಬಳಿಯಲ್ಲೇ ಉಳಿಸಿಕೊಳ್ಳಲು ಅಪೇಕ್ಷಿಸಿದ್ದೆನು.
14ಆದರೆ ನಿನ್ನ ಉಪಚಾರವು ಬಲಾತ್ಕಾರದಿಂದಾಗದೆ, ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ, ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವುದಕ್ಕೂ ನನಗೆ ಇಷ್ಟವಿಲ್ಲ.
15ಓನೇಸಿಮನು ಸ್ವಲ್ಪಕಾಲ ನಿನ್ನಿಂದ ಅಗಲಿದ್ದು ಬಹುಶಃ ನೀನು ಅವನನ್ನು ನಿರಂತರವಾಗಿ ಸೇರಿಸಿಕೊಳ್ಳುವುದಕ್ಕಾಗಿಯೇ!
16ಇನ್ನು ಮೇಲೆ ಅವನು ದಾಸನಾಗದೆ, ದಾಸನಿಗಿಂತ ಮೇಲಾಗಿ ಪ್ರಿಯ ಸಹೋದರನಂತಾಗಬೇಕು. ಅವನು ವಿಶೇಷವಾಗಿ ನನಗೆ ಬಹು ಪ್ರಿಯನಾಗಿದ್ದಾನೆ. ಆದರೂ ಓನೇಸಿಮನು ನಿನಗೆ ಮಾನವ ರೀತಿಯಲ್ಲಿಯೂ ಕರ್ತ ಯೇಸುವಿನಲ್ಲಿಯೂ ಒಬ್ಬ ಸಹೋದರನಾಗಿ ಇನ್ನು ಎಷ್ಟೋ ಪ್ರಿಯನಾಗಿರಬೇಕಲ್ಲವೇ.
17ಆದಕಾರಣ ನಾನು ನಿನಗೆ ಅನ್ಯೋನ್ಯತೆವುಳ್ಳವನೆಂದು ನೀನು ಎಣಿಸುವುದಾದರೆ ನನ್ನನ್ನು ಸ್ವೀಕರಿಸಿಕೊಳ್ಳುವ ಪ್ರಕಾರವೇ ಅವನನ್ನು ಸ್ವೀಕರಿಸು.
18ಅವನು ನಿನಗೆ ಏನಾದರೂ ತಪ್ಪು ಮಾಡಿದ್ದರೆ ಅಥವಾ ಅವನು ಸಾಲವೇನಾದರೂ ತೀರಿಸಬೇಕಾಗಿದ್ದರೆ, ಅದನ್ನು ನನ್ನ ಲೆಕ್ಕಕ್ಕೆ ಹಾಕು.
19ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ನನ್ನ ಸ್ವಂತ ಕೈಯಲ್ಲಿ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನು ನಿನ್ನ ಪ್ರಾಣವನ್ನೇ ನನಗೆ ಸಾಲಗಾರನಾಗಿದ್ದೀ ಎಂದು ನಾನು ಬೇರೆ ಹೇಳಬೇಕಾಗಿಲ್ಲ.
20ಸಹೋದರನೇ ಹೌದು, ಕರ್ತ ಯೇಸುವಿನಲ್ಲಿ ನಿನ್ನಿಂದ ನನಗೆ ಈ ಸಹಾಯಮಾಡು; ಅದು ಕ್ರಿಸ್ತ ಯೇಸುವಿನಲ್ಲಿ ನನ್ನ ಹೃದಯವನ್ನು ಉತ್ತೇಜನಗೊಳಿಸಲಿ.
21ನಿನ್ನ ವಿಧೇಯತೆಯಲ್ಲಿ ಭರವಸೆಯುಳ್ಳವನಾಗಿ ನಾನು ನಿನಗೆ ಬರೆದಿದ್ದೇನೆ. ನಾನು ಹೇಳಿದ್ದಕ್ಕಿಂತಲೂ ಹೆಚ್ಚಾಗಿಯೇ ನೀನು ಮಾಡುವೆಯೆಂದು ನನಗೆ ಗೊತ್ತಿದೆ.
22ಇದಲ್ಲದೆ: ನಿಮ್ಮ ಪ್ರಾರ್ಥನೆಯ ದೆಸೆಯಿಂದ ನಾನು ಪುನಃ ನಿಮ್ಮ ಬಳಿಗೆ ಬರುತ್ತೇನೆಂದು ನನಗೆ ನಿರೀಕ್ಷೆ ಇರುವುದು. ಆದಕಾರಣ ನನಗಾಗಿ ಒಂದು ಅತಿಥಿ ಕೊಠಡಿಯನ್ನು ಸಿದ್ಧಮಾಡು.
23ಕ್ರಿಸ್ತ ಯೇಸುವಿಗಾಗಿ ನನ್ನ ಜೊತೆ ಸೆರೆಯಾಳಾಗಿರುವ ಎಪಫ್ರನು ನಿನಗೆ ವಂದನೆ ತಿಳಿಸುತ್ತಾನೆ.
24ನನ್ನ ಜೊತೆಕೆಲಸದವರಾದ ಮಾರ್ಕ, ಅರಿಸ್ತಾರ್ಕ, ದೇಮ ಹಾಗೂ ಲೂಕ ನಿನ್ನನ್ನು ವಂದಿಸುತ್ತಾರೆ.
25ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.