
ಪರಮಗೀತೆ 3
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ರಾತ್ರಿಯಲ್ಲಿ ತನ್ನ ಪ್ರಿಯನನ್ನು ಕಾಣದ ಸ್ತ್ರೀಯು ಬೀದಿಗಳನ್ನೂ ಚೌಕಗಳನ್ನೂ ಹುಡುಕಿ, ಕಾವಲುಗಾರರನ್ನು ಕೇಳಿ, ಕೊನೆಗೆ ಅವನನ್ನು ಹತ್ತಿರ ಹಿಡಿದುಕೊಳ್ಳುತ್ತಾಳೆ. ನಂತರ ದೃಶ್ಯವು ಸೊಲೊಮೋನನ ಸುಗಂಧಭರಿತ, ಕಾವಲಿನ ಮೆರವಣಿಗೆ, ಸಮೃದ್ಧವಾಗಿ ರಚಿಸಿದ ಪಲ್ಲಕ್ಕಿ, ವಿವಾಹದ ಕಿರೀಟ ಮತ್ತು ಸಾರ್ವಜನಿಕ ಆನಂದದ ಕಡೆಗೆ ತಿರುಗುತ್ತದೆ.
ಹುಡುಕಾಟಪುನರ್ಮಿಲನಭಕ್ತಿವಿವಾಹದ ಮೆರವಣಿಗೆಸಂತೋಷ
1ರಾತ್ರಿಯೆಲ್ಲಾ ನನ್ನ ಹಾಸಿಗೆಯ ಮೇಲಿದ್ದೆನು; ನನ್ನ ಪ್ರಾಣ ಪ್ರಿಯನನ್ನು ಹುಡಕಿದೆನು. ಅವನನ್ನು ಎಷ್ಟು ಹುಡುಕಿದರೂ ಅವನು ಸಿಗಲಿಲ್ಲ.
2ನಾನು ಎದ್ದು, ಪಟ್ಟಣವನ್ನು ಸಂಚರಿಸಿ, ಬೀದಿಗಳಲ್ಲಿಯೂ, ಮಾರ್ಗಗಳಲ್ಲಿಯೂ ನನ್ನ ಪ್ರಾಣ ಪ್ರಿಯನನ್ನು ಹುಡುಕಾಡಿದೆನು. ಅವನನ್ನು ಎಷ್ಟು ಹುಡುಕಿದರೂ ಅವನು ಸಿಗಲೇ ಇಲ್ಲ.
3ನಾನು ಪಟ್ಟಣವನ್ನು ಕಾಯುವ ಕಾವಲುಗಾರರಿಗೆ ಸಿಕ್ಕಿಬಿದ್ದಾಗ, “ನನ್ನ ಪ್ರಾಣ ಪ್ರಿಯನನ್ನು ನೀವು ಕಂಡಿರಾ?” ಎಂದು ವಿಚಾರಿಸಿದೆ.
4ನಾನು ಅವರನ್ನು ಬಿಟ್ಟು ಸ್ವಲ್ಪ ದೂರ ಹೋದ ಮೇಲೆ, ನನ್ನ ಪ್ರಾಣ ಪ್ರಿಯನನ್ನು ಕಂಡುಕೊಂಡೆನು. ನಾನು ಅವನ ಕೈಯನ್ನು ಹಿಡಿದುಕೊಂಡು ನನ್ನ ತಾಯಿಯ ಮನೆಗೆ, ಹೌದು, ನನ್ನ ಹೆತ್ತವಳ ಕೋಣೆಗೆ ಅವನನ್ನು ಬಿಡದೆ ಕರೆದುಕೊಂಡು ಹೋದೆನು.
5ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. ಎಚ್ಚರಿಸಲೂ ಬೇಡಿರಿ ಎಂದು ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
6ರಕ್ತಬೋಳ, ಸಾಂಬ್ರಾಣಿಗಳಿಂದಲೂ ವರ್ತಕರು ಮಾರುವ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮಸ್ತಂಭಗಳಂತೆ ಅಡವಿಯಿಂದ ಬರುವ ಈ ಮೆರವಣೆಗೆ ಯಾರದು?
7ನೋಡಿರಿ! ಇದು ಸೊಲೊಮೋನನ ರಥ. ಇಸ್ರಾಯೇಲಿನ ಪರಾಕ್ರಮಶಾಲಿಗಳಲ್ಲಿ ಅರವತ್ತು ಮಂದಿ ಅದರ ಸುತ್ತಲಿದ್ದಾರೆ.
8ಯುದ್ಧ ನಿಪುಣರಾದ ಅವರೆಲ್ಲರೂ ಖಡ್ಗ ಹಿಡಿದಿದ್ದಾರೆ. ರಾತ್ರಿಯ ಅಪಾಯದ ನಿಮಿತ್ತ ಪ್ರತಿಯೊಬ್ಬರೂ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾರೆ.
9ಅರಸನಾದ ಸೊಲೊಮೋನನು ಲೆಬನೋನಿನ ಮರದಿಂದ ಒಂದು ರಥವನ್ನು ತನಗೆ ಮಾಡಿಸಿಕೊಂಡಿದ್ದನು.
10ಅವನು ಅದರ ಸ್ತಂಭಗಳನ್ನು ಬೆಳ್ಳಿಯಿಂದಲೂ ಅದರ ಕೆಳಗಿನ ಭಾಗವನ್ನು ಬಂಗಾರದಿಂದಲೂ ಅದರ ಹೊದಿಕೆಯನ್ನು ಧೂಮ್ರವರ್ಣದ ವಸ್ತ್ರದಿಂದಲೂ ಮಾಡಿಸಿದ್ದನು. ಯೆರೂಸಲೇಮಿನ ಪುತ್ರಿಯರು ಪ್ರೀತಿಯಿಂದ ಅದನ್ನು ಅಲಂಕರಿಸಿದ್ದರು.
11ಚೀಯೋನಿನ ಪುತ್ರಿಯರೇ, ನೀವು ಹೊರಗೆ ಬನ್ನಿರಿ. ಅರಸನಾದ ಸೊಲೊಮೋನನನ್ನು ನೋಡಿರಿ. ಅವನ ಮದುವೆಯ ದಿನದಂದು, ಅವನ ಹೃದಯ ಸಂತೋಷಗೊಂಡ ದಿನದಲ್ಲಿ, ಅವನ ತಾಯಿ ಅವನಿಗೆ ತೊಡಿಸಿದ ಕಿರೀಟವನ್ನು ಅವನು ಧರಿಸಿರುವುದನ್ನು ಬಂದು ನೋಡಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.