A beloved approaching across spring hills as a woman waits beside lilies and flowering vines

ಪರಮಗೀತೆ 2

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಪ್ರೇಮಿಗಳು ತಾವರೆಗಳು, ಹಣ್ಣು, ನೆರಳು ಮತ್ತು ಪ್ರೀತಿಯ ಔತಣದ ಚಿತ್ರಗಳ ಮೂಲಕ ಒಬ್ಬರಲ್ಲೊಬ್ಬರು ಆನಂದಿಸುತ್ತಾರೆ. ಪ್ರಿಯನು ಬೆಟ್ಟಗಳ ಮೇಲಿಂದ ಬಂದು ವಸಂತದ ನವೀಕರಣಕ್ಕೆ ಅವಳನ್ನು ಕರೆಯುತ್ತಾನೆ. ಬಯಕೆಯು ತನ್ನ ಸರಿಯಾದ ಕಾಲಕ್ಕಾಗಿ ಕಾಯುವಾಗ ಅವರ ಕೋಮಲ ದ್ರಾಕ್ಷಿತೋಟವನ್ನು ಚಿಕ್ಕ ನರಿಗಳಿಂದ ಕಾಪಾಡಬೇಕು.
ವಸಂತಆಹ್ವಾನಪರಸ್ಪರ ಸೇರುವಿಕೆತಾಳ್ಮೆರಕ್ಷಣೆ
1ಶಾರೋನಿನ ಗುಲಾಬಿ ಹೂವೂ, ತಗ್ಗಿನ ತಾವರೆಯೂ ನಾನೇ.
2ಮುಳ್ಳುಪೊದರಿನ ನಡುವೆ ತಾವರೆಯಂತೆ ನನ್ನ ಪ್ರಿಯಳು ಕನ್ಯಾಮಣಿಗಳಲ್ಲಿ ಶ್ರೇಷ್ಠಳು.
3ಅಡವಿಯ ಮರಗಳಲ್ಲಿ ಸೇಬಿನ ಮರದಂತೆ ಯುವಜನರಲ್ಲಿ ನನ್ನ ಪ್ರಿಯನಿದ್ದಾನೆ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತುಕೊಂಡೆನು. ಅವನ ಫಲವು ನನ್ನ ರುಚಿಗೆ ಮಧುರವಾಗಿತ್ತು.
4ಅವನು ಔತಣದ ಮನೆಗೆ ನನ್ನನ್ನು ಕರೆದುಕೊಂಡು ಬಂದನು. ನನ್ನ ಮೇಲೆ ಇರುವ ಅವನ ಧ್ವಜವು ಪ್ರೀತಿಯೇ.
5ದ್ರಾಕ್ಷೆಯಿಂದ ನನ್ನನ್ನು ಬಲಪಡಿಸು. ಸೇಬು ಹಣ್ಣುಗಳಿಂದ ನನ್ನನ್ನು ಚೇತನಗೊಳಿಸು. ಏಕೆಂದರೆ ನಾನು ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ.
6ಅವನ ಎಡಗೈ ನನ್ನ ತಲೆದಿಂಬಾಗಿರಲಿ. ಅವನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ.
7ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. ಎಚ್ಚರಿಸಲೂ ಬೇಡಿರಿ ಎಂದು ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
8ನನ್ನ ಪ್ರಿಯನ ಸ್ವರವು! ಇಗೋ! ಅವನು ಪರ್ವತಗಳ ಮೇಲೆ ಹಾರುತ್ತಾ, ಗುಡ್ಡಗಳ ಮೇಲೆ ಜಿಗಿಯುತ್ತಾ ಬರುತ್ತಿದ್ದಾನೆ.
9ನನ್ನ ಪ್ರಿಯನು ಜಿಂಕೆಯ ಹಾಗೆ ಇದ್ದಾನೆ. ದುಪ್ಪಿಯ ಮರಿಯ ಹಾಗೆಯೂ ಇದ್ದಾನೆ. ಇಗೋ! ಅವನು ನಮ್ಮ ಗೋಡೆಯ ಹಿಂದೆ ನಿಂತಿದ್ದಾನೆ. ಜಾಲಾಂತರಗಳಲ್ಲಿ ತನ್ನನ್ನು ತೋರಿಸಿ, ಕಿಟಿಕಿಗಳಿಂದ ನೋಡುತ್ತಿದ್ದಾನೆ.
10ನನ್ನ ಪ್ರಿಯನು ನನ್ನೊಡನೆ ಮಾತನಾಡಿ ಹೀಗೆಂದನು: “ನನ್ನ ಪ್ರಿಯಳೇ ಎದ್ದು ಬಾ, ನನ್ನ ಸುಂದರಿಯೇ, ಹೊರಟು ಬಾ.
11ಇಗೋ! ಚಳಿಗಾಲ ಕಳೆಯಿತು, ಮಳೆ ನಿಂತುಹೋಯಿತು.
12ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತಿವೆ. ಪಕ್ಷಿಗಳು ಹಾಡುವ ಕಾಲ ಬಂತು. ಪಾರಿವಾಳಗಳ ಸ್ವರ ನಮ್ಮ ಊರಲ್ಲಿ ಕೇಳಿಸುತ್ತಿದೆ.
13ಅಂಜೂರದ ಕಾಯಿಗಳು ಹಣ್ಣಾಗಿವೆ. ದ್ರಾಕ್ಷಿಬಳ್ಳಿಗಳು ಹೂಬಿಟ್ಟಿವೆ. ಅದರ ಪರಿಮಳ ಹರಡುತ್ತಿದೆ. ಎದ್ದು ಬಾ, ನನ್ನ ಪ್ರಿಯಳೇ, ನನ್ನ ಸುಂದರಿಯೇ, ನನ್ನೊಂದಿಗೆ ಬಾ.”
14ಬಂಡೆಯ ಬಿರುಕುಗಳಲ್ಲಿಯೂ ಸಂದುಗಳ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ ಬಾ. ನಿನ್ನ ಮುಖವನ್ನು ನನಗೆ ತೋರಿಸು. ನಿನ್ನ ಸ್ವರವನ್ನು ನನಗೆ ಕೇಳಿಸು. ನಿನ್ನ ಸ್ವರವು ಇಂಪಾಗಿದೆ. ನಿನ್ನ ಮುಖವು ಸುಂದರವಾಗಿಯೂ ಇದೆ.
15ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ ನರಿಮರಿಗಳನ್ನೂ ಹಿಡಿಯಿರಿ. ನಮ್ಮ ದ್ರಾಕ್ಷಿತೋಟಗಳಲ್ಲಿ ಹೂಗಳು ಅರಳಿವೆ.
16ನನ್ನ ಪ್ರಿಯನು ನನ್ನವನೇ, ನಾನು ಅವನವಳೇ. ಅವನು ನೆಲದಾವರೆಗಳ ನಡುವೆ ಮಂದೆಯನ್ನು ಮೇಯಿಸುತ್ತಾನೆ.
17ನನ್ನ ಪ್ರಿಯನೇ, ಹೊತ್ತು ಮೂಡುವ ಮುಂಚೆ ಕತ್ತಲು ಕವಿಯುವ ಮೊದಲು ಹೊರಟು ಬಾ. ಒರಟಾದ ಪರ್ವತಗಳ ಮೇಲಿರುವ ಜಿಂಕೆಯಂತಿರು. ಹೌದು, ಪ್ರಾಯದ ದುಪ್ಪಿಯಂತೆಯೂ ಇರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.