
ಪರಮಗೀತೆ 4
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಪ್ರಿಯನು ಪಾರಿವಾಳಗಳು, ಮಂದೆಗಳು, ಕೆಂಪು ದಾರ, ಗೋಪುರಗಳು, ಪರ್ವತಗಳು, ಜೇನು ಮತ್ತು ಸುಗಂಧದಿಂದ ತೆಗೆದ ಕಾವ್ಯಚಿತ್ರಗಳ ಮೂಲಕ ತನ್ನ ವಧುವನ್ನು ಹೊಗಳುತ್ತಾನೆ. ಲೆಬನೋನಿನಿಂದ ಅವಳನ್ನು ಆಹ್ವಾನಿಸಿ, ಹಣ್ಣುಗಳು, ಸುಗಂಧದ್ರವ್ಯಗಳು ಮತ್ತು ಜೀವಜಲದಿಂದ ಸಮೃದ್ಧವಾದ ಬೇಲಿ ಹಾಕಿದ ತೋಟವೂ ಮುದ್ರೆ ಹಾಕಿದ ಬುಗ್ಗೆಯೂ ಎಂದು ವರ್ಣಿಸುತ್ತಾನೆ.
ಮೆಚ್ಚುಗೆಸೌಂದರ್ಯಭರವಸೆತೋಟಜೀವಜಲ
1ಇಗೋ, ನನ್ನ ಪ್ರಿಯಳೇ, ನೀನು ಎಷ್ಟು ಸುಂದರಿ! ಆಹಾ, ನೀನು ಎಷ್ಟು ಸುಂದರಿಯು. ನಿನ್ನ ಮುಸುಕಿನೊಳಗಿನ ನಿನ್ನ ಕಣ್ಣುಗಳು ಪಾರಿವಾಳಗಳೇ. ನಿನ್ನ ತಲೆಕೂದಲು ಗಿಲ್ಯಾದಿನ ಪರ್ವತದಿಂದ ಇಳಿದು ಬರುವ ಮೇಕೆ ಮಂದೆಯ ಹಾಗೆ ಇದೆ.
2ನಿನ್ನ ಹಲ್ಲುಗಳ ಹೊಳಪು ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಗೆ ಸಮಾನ. ಅವು ಜೊತೆಯಾಗಿಯೇ ಇರುತ್ತವೆ. ಅವುಗಳಲ್ಲಿ ಒಂದೂ ಒಂಟಿಯಾಗಿರದು.
3ನಿನ್ನ ತುಟಿ ಕೆಂಪು ದಾರದ ಹಾಗೆ ಇವೆ. ನಿನ್ನ ಮಾತು ರಮ್ಯ. ಮುಸುಕಿನೊಳಗಿನ ನಿನ್ನ ಕೆನ್ನೆ ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ.
4ನಿನ್ನ ಕೊರಳು ದಾವೀದನ ಆಯುಧ ಶಾಲೆಗೋಸ್ಕರ ಕಟ್ಟಿಸಲಾದ ಬುರುಜಿನ ಹಾಗೆ ಇದೆ. ಅದರಲ್ಲಿ ಶೂರರ ಸಾವಿರ ಗುರಾಣಿಗಳು ತೂಗುಹಾಕಿ ಇವೆ.
5ನಿನ್ನ ಎರಡು ಸ್ತನಗಳು ನೆಲದಾವರೆಯ ನಡುವೆ ಮೇಯುವ ಹುಲ್ಲೆಯ ಅವಳಿಮರಿಗಳ ಹಾಗಿವೆ.
6ಹೊತ್ತು ಮೂಡುವವರೆಗೂ ನೆರಳು ಓಡಿ ಹೋಗುವವರೆಗೂ ನಾನು ರಕ್ತಬೋಳದ ಪರ್ವತಕ್ಕೂ ಸಾಂಬ್ರಾಣಿಯ ಗುಡ್ಡಕ್ಕೂ ಹೋಗುವೆನು.
7ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿ, ನಿನ್ನಲ್ಲಿ ದೋಷವೇನೂ ಇಲ್ಲ.
8ಬಾ, ವಧುವೇ, ಲೆಬನೋನಿನಿಂದ ಬಾ, ಲೆಬನೋನಿನಿಂದ ನನ್ನೊಡನೆ ಬಾ. ಅಮಾನದ ಶಿಖರಗಳಿಂದ, ಸೆನೀರ್, ಹೆರ್ಮೋನ್ ಶಿಖರಗಳಿಂದ, ಸಿಂಹದ ಗವಿಗಳಿಂದ, ಚಿರತೆಗಳ ಪರ್ವತಗಳಿಂದ ಇಳಿದು ಬಾ.
9ನನ್ನ ಹೃದಯವನ್ನು ನೀನು ಸೆಳಕೊಂಡಿರುವೆ. ನನ್ನ ಪ್ರಿಯಳೇ, ನನ್ನ ವಧುವೇ, ನೀನು ನಿನ್ನ ಒಂದೇ ಕಿರುನೋಟದಿಂದಲೂ, ನಿನ್ನ ಕೊರಳಿನ ಒಂದೇ ಕಂಠ ಹಾರದಿಂದಲೂ, ನನ್ನ ಹೃದಯವನ್ನು ಸೆಳಕೊಂಡಿರುವೆ.
10ನನ್ನ ಪ್ರಿಯಳೇ, ವಧುವೇ! ನಿನ್ನ ಪ್ರೀತಿಯು ಎಷ್ಟೋ ಚೆಂದ. ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ಎಲ್ಲಾ ಸುಗಂಧಗಳಿಗಿಂತ ನಿನ್ನ ತೈಲದ ಸುವಾಸನೆಯು ಎಷ್ಟೋ ಉತ್ತಮ!
11ನನ್ನ ವಧುವೇ, ನಿನ್ನ ತುಟಿಗಳಿಂದ ಜೇನು ಸುರಿಯುತ್ತಿದೆ. ಹಾಲೂ, ಜೇನೂ ನಿನ್ನ ನಾಲಿಗೆ ಅಡಿಯಲ್ಲಿವೆ. ನಿನ್ನ ವಸ್ತ್ರಗಳ ಸುವಾಸನೆಯು ಲೆಬನೋನಿನ ಸುಗಂಧದಂತಿದೆ.
12ನನ್ನ ಪ್ರಿಯಳೇ, ನನ್ನ ವಧುವೇ, ನೀನು ಭದ್ರ ತೋಟವೂ ಬೇಲಿಯೊಳಗಿನ ಬುಗ್ಗೆಯೂ ಮುದ್ರಿಸಿದ ಬಾವಿಯೂ ಆಗಿರುವೆ.
13ನಿನ್ನ ತೋಟದಲ್ಲಿ ದಾಳಿಂಬೆ ವನವೂ ಫಲಕೊಡುವ ಉತ್ತಮ ಗಿಡಗಳೂ ಕರ್ಪೂರವೂ ಜಟಾಮಾಂಸಿಯೂ ಇವೆ.
14ಜಟಾಮಾಂಸಿ ಅಷ್ಟೇ ಅಲ್ಲದೆ ಕೇಸರಿಯೂ ಬಜೆಯೂ ದಾಲ್ಚಿನ್ನಿಯೂ ಸಕಲ ಸಾಂಬ್ರಾಣಿ ಗಿಡಮೂಲಿಕೆಗಳೂ ರಕ್ತಬೋಳವೂ ಅಗರೂ ಸಕಲವಿಧ ಶ್ರೇಷ್ಠ ಸುಗಂಧ ದ್ರವ್ಯಗಳೂ ಬೆಳೆದಿವೆ.
15ನೀನು ತೋಟದ ಬುಗ್ಗೆಯೂ ಉಕ್ಕಿಬರುವ ಒರತೆಯೂ ಲೆಬನೋನಿನಿಂದ ಹರಿಯುವ ಹೊಳೆಯೂ ಆಗಿರುವೆ.
16ಉತ್ತರಗಾಳಿಯೇ, ಬೀಸು, ದಕ್ಷಿಣ ಗಾಳಿಯೇ ಬಾ ನನ್ನ ತೋಟದ ಮೇಲೆ ಬೀಸು. ಸುಗಂಧ ಸುವಾಸನೆ ಹರಡಲಿ. ನನ್ನ ಪ್ರಿಯನು ತನ್ನ ತೋಟಕ್ಕೆ ಬಂದು ಉತ್ತಮ ಫಲಗಳನ್ನು ರುಚಿಸಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.