A family rests safely in a rocky shelter as an eagle circles above distant lightning, lion, and serpent

ಕೀರ್ತನೆಗಳು 91

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 91 ಭೀತಿ, ರೋಗ, ಸಂಘರ್ಷ ಮತ್ತು ಅಪಾಯಕಾರಿ ಮಾರ್ಗಗಳ ನಡುವೆ ಆಪ್ತ ಆಸರೆ, ನಂಬಿಗಸ್ತ ಆಶ್ರಯ ಮತ್ತು ಧೈರ್ಯವನ್ನು ವರ್ಣಿಸುತ್ತದೆ. ಭರವಸೆಯು ಅಪಾಯವನ್ನು ನಿರಾಕರಿಸುವುದಿಲ್ಲ; ಅದು ವಾಗ್ದಾನ ಮಾಡಿದ ಸಾನ್ನಿಧ್ಯ, ರಕ್ಷಣೆ, ಕಾವಲು ಮತ್ತು ಉತ್ತರಿಸಲ್ಪಟ್ಟ ಪ್ರಾರ್ಥನೆಯಲ್ಲಿ ವಿಶ್ರಮಿಸುತ್ತದೆ.
ಆಶ್ರಯರಕ್ಷಣೆಭರವಸೆಧೈರ್ಯ
1ಮಹೋನ್ನತ ದೇವರ ಆಶ್ರಯದಲ್ಲಿ ವಾಸಿಸುವವರು ಸರ್ವಶಕ್ತರ ನೆರಳಿನಲ್ಲಿ ವಿಶ್ರಮಿಸುವರು.
2“ನನ್ನ ಆಶ್ರಯವೂ, ನನ್ನ ಕೋಟೆಯೂ, ನಾನು ಭರವಸೆ ಇಡುವ ನನ್ನ ದೇವರೂ ಎಂದು ನಾನು ಯೆಹೋವ ದೇವರಿಗೆ ಹೇಳುವೆನು.”
3ನಿಶ್ಚಯವಾಗಿ ದೇವರು ನಿಮ್ಮನ್ನು ಬೇಡನ ಉರುಲಿನಿಂದ ರಕ್ಷಿಸುವರು. ಮರಣಾಂತಿಕವಾದ ಸಾಂಕ್ರಾಮಿಕ ರೋಗದಿಂದಲೂ ಬಿಡಿಸುವರು.
4ತಮ್ಮ ರೆಕ್ಕೆಗಳಿಂದ ನಿಮ್ಮನ್ನು ಹೊದಿಸುವರು. ದೇವರ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿರಿ. ದೇವರ ಸತ್ಯತೆಯು ನಿಮ್ಮ ಖೇಡ್ಯವೂ ಕೋಟೆಯೂ ಆಗಿರುವುದು.
5ರಾತ್ರಿಯ ಭಯಂಕರತೆಗೆ ನೀನು ಅಂಜಬೇಕಾಗಿಲ್ಲ, ಹಗಲಿನಲ್ಲಿ ಹಾರುವ ಬಾಣಕ್ಕೂ ಹೆದರಬೇಕಾಗಿರುವುದಿಲ್ಲ.
6ಅಂಧಕಾರದಲ್ಲಿ ಬೆನ್ನಟ್ಟಿ ಬರುವ ವಿಪತ್ತಿಗೆ ಕಳವಳಪಡದಿರುವೆ. ಮಧ್ಯಾಹ್ನದಲ್ಲಿ ಹಾಳುಮಾಡುವ ವ್ಯಾಧಿಗೂ ನೀನು ಭಯಪಡದಿರುವೆ.
7ನಿಮ್ಮ ಪಕ್ಕದಲ್ಲಿ ಸಾವಿರ ಜನರು ಬಿದ್ದರೂ ನಿಮ್ಮ ಬಲಗಡೆಯಲ್ಲಿ ಹತ್ತು ಸಾವಿರ ಜನರು ಬಿದ್ದಾಗ್ಯೂ, ನಿಮ್ಮ ಸಮೀಪಕ್ಕೆ ಅದು ಬರುವುದಿಲ್ಲ.
8ನಿನ್ನ ಕಣ್ಣುಗಳಿಂದ ಮಾತ್ರ ನೀನು ಗಮನಿಸುವೆ. ದುಷ್ಟರಿಗೆ ಪ್ರತಿದಂಡನೆ ಆಗುವುದನ್ನು ಸಹ ನೀನು ಕಾಣುವೆ.
9“ಮಹೋನ್ನತ ದೇವರು ನಮ್ಮ ಆಶ್ರಯ,” ಎಂದು ಹೇಳುವದಾದರೆ, ಯೆಹೋವ ದೇವರು ನಿಮ್ಮ ನಿವಾಸವಾಗಿ ಮಾಡಿಕೊಂಡರೆ,
10ಯಾವ ಕೇಡೂ ನಿಮ್ಮನ್ನು ಮುಟ್ಟದು, ಯಾವ ವಿಪತ್ತು ನಿಮ್ಮನ್ನು ಸಮೀಪಿಸುವುದಿಲ್ಲ.
11ಏಕೆಂದರೆ ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವುದಕ್ಕೆ ದೇವರು ತಮ್ಮ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವರು.
12ನಿಮ್ಮ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು.
13ಸಿಂಹದ ಮೇಲೆಯೂ ಸರ್ಪದ ಮೇಲೆಯೂ ನಡೆಯುವೆ. ಪ್ರಾಯದ ಸಿಂಹವನ್ನೂ ಘಟಸರ್ಪವನ್ನೂ ತುಳಿದುಬಿಡುವೆ.
14“ಆತನು ನನ್ನನ್ನು ಪ್ರೀತಿಸುವುದರಿಂದ ಆತನನ್ನು ಸಂರಕ್ಷಿಸುವೆನು. ಆತನು ನನ್ನ ನಾಮವನ್ನು ಸ್ವೀಕರಿಸಿದ್ದರಿಂದ ಆತನನ್ನು ಕಾಪಾಡುವೆನು.
15ಆತನು ನನ್ನನ್ನು ಕರೆಯುವನು ನಾನು ಆತನಿಗೆ ಉತ್ತರಕೊಡುವೆನು. ಇಕ್ಕಟ್ಟಿನಲ್ಲಿ ನಾನು ಆತನ ಸಂಗಡ ಇದ್ದು, ಆತನನ್ನು ಘನಪಡಿಸುವೆನು.
16ದೀರ್ಘಾಯುಷ್ಯದಿಂದ ಆತನನ್ನು ತೃಪ್ತಿಪಡಿಸಿ, ನನ್ನ ರಕ್ಷಣೆಯನ್ನು ಆತನಿಗೆ ತೋರಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.