
ಕೀರ್ತನೆಗಳು 92
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಬೆಳಿಗ್ಗೆಯೂ ರಾತ್ರಿಯೂ ಕೃತಜ್ಞತೆ ಸಲ್ಲಿಸುವುದು ಒಳ್ಳೆಯದು ಎಂದು ಕೀರ್ತನೆ 92 ಘೋಷಿಸುತ್ತದೆ. ದುಷ್ಟರು ಅಲ್ಪಕಾಲ ಸಮೃದ್ಧರಾದರೂ, ನೀತಿವಂತರು ಪವಿತ್ರ ಅಂಗಳಗಳಲ್ಲಿ ನೆಟ್ಟ ಖರ್ಜೂರದ ಮರಗಳಂತೆಯೂ ದೇವದಾರುಗಳಂತೆಯೂ ಬೆಳೆದು, ಫಲಭರಿತರಾಗಿ ಉಳಿದು, ಅಚಲ ನ್ಯಾಯವನ್ನು ಸಾರುತ್ತಾರೆ.
ಕೃತಜ್ಞತೆಸಬ್ಬತ್ಸಮೃದ್ಧಿನಂಬಿಗಸ್ತಿಕೆ
1ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವುದು ಒಳ್ಳೆಯದು. ಮಹೋನ್ನತರೇ, ನಿಮ್ಮ ಹೆಸರನ್ನು ಕೀರ್ತಿಸುವುದು ಒಳ್ಳೆಯದು.
2ಬೆಳಿಗ್ಗೆ ನಿಮ್ಮ ಪ್ರೀತಿ ಕರುಣೆಯನ್ನೂ ಪ್ರತಿ ರಾತ್ರಿ ನಿಮ್ಮ ನಂಬಿಕೆಯನ್ನೂ ಸಾರುವುದು ಒಳ್ಳೆಯದು.
3ಹತ್ತು ತಂತಿವಾದ್ಯದಿಂದಲೂ ವೀಣೆಯಿಂದಲೂ ಕಿನ್ನರಿಯ ಘನಸ್ವರದಿಂದಲೂ ಬಾರಿಸುವುದು ಒಳ್ಳೆಯದು.
4ಯೆಹೋವ ದೇವರೇ, ನಿಮ್ಮ ಕ್ರಿಯೆಯಿಂದ ನನ್ನನ್ನು ಸಂತೋಷಪಡಿಸಿದ್ದೀರಿ. ನಿಮ್ಮ ಕೈಕೆಲಸಗಳಲ್ಲಿ ಜಯಧ್ವನಿಗೈಯುತ್ತೇನೆ.
5ಯೆಹೋವ ದೇವರೇ, ನಿಮ್ಮ ಕೃತ್ಯಗಳು ಎಷ್ಟೋ ಮಹತ್ತಾದದ್ದು. ನಿಮ್ಮ ಯೋಚನೆಗಳು ಬಹು ಆಳವಾಗಿವೆ.
6ಇದನ್ನು ಬುದ್ಧಿಹೀನ ಮನುಷ್ಯನು ತಿಳಿದುಕೊಳ್ಳನು. ಮೂರ್ಖನು ಇದನ್ನು ಗ್ರಹಿಸನು.
7ದುಷ್ಟರು ಹುಲ್ಲಿನ ಹಾಗೆ ಚಿಗುರಿದರೂ ಅಕ್ರಮ ಮಾಡುವವರೆಲ್ಲರು ವೃದ್ಧಿ ಆದರೂ ಅವರು ನಿತ್ಯ ದಂಡನೆಗೆ ಗುರಿಯಾಗುವರು.
8ಯೆಹೋವ ದೇವರೇ, ನೀವಾದರೋ ಎಂದೆಂದಿಗೂ ಉನ್ನತರಾಗಿದ್ದೀರಿ.
9ನಿಜವಾಗಿಯೂ ನಿಮ್ಮ ಶತ್ರುಗಳು ಯೆಹೋವ ದೇವರೇ, ನಿಮ್ಮ ಶತ್ರುಗಳು ನಾಶವಾಗುವರು. ಕೇಡು ಮಾಡುವವರೆಲ್ಲರು ಚದರಿಹೋಗುವರು.
10ಆದರೆ ನೀವು ನನ್ನ ಬಲವನ್ನು ಕಾಡುಕೋಣದ ಕೊಂಬಿನ ಹಾಗೆ ಬಲಪಡಿಸುವಿರಿ. ನಾನು ನೂತನ ತೈಲದಿಂದ ಅಭಿಷಿಕ್ತನಾಗುವೆನು.
11ನನ್ನ ಕಣ್ಣು ನನ್ನ ವಿರೋಧಿಗಳ ಸೋಲನ್ನು ದೃಷ್ಟಿಸುವುದು. ನನಗೆ ವಿರೋಧವಾಗಿ ಏಳುವ ದುರ್ಮಾರ್ಗಿಗಳ ವಿಪತ್ತನ್ನು ಕುರಿತು ನಾನು ಕೇಳಿಸಿಕೊಳ್ಳುವೆ.
12ನೀತಿವಂತರು ಖರ್ಜೂರ ಮರದ ಹಾಗೆ ವೃದ್ಧಿಯಾಗುವರು. ಅವರು ಲೆಬನೋನಿನಲ್ಲಿರುವ ದೇವದಾರಿನ ಹಾಗೆ ಬೆಳೆಯುವರು.
13ಅವರು ಯೆಹೋವ ದೇವರ ಆಲಯದಲ್ಲಿ ನೆಟ್ಟ ಸಸಿಗಳಂತಿರುವರು. ನಮ್ಮ ದೇವರ ಅಂಗಳಗಳಲ್ಲಿ ಅವರು ವೃದ್ಧಿ ಆಗುವರು.
14ಮುದಿಪ್ರಾಯದಲ್ಲಿಯೂ ಫಲ ಕೊಡುವರು. ಅವರು ಹಸಿರಾಗಿ ಶೋಭಿಸುವರು.
15“ಯೆಹೋವ ದೇವರು ಯಥಾರ್ಥವಂತರೂ ನನ್ನ ಬಂಡೆಯೂ ಆಗಿದ್ದಾರೆ. ಅವರಲ್ಲಿ ಅನೀತಿ ಇರುವುದಿಲ್ಲ,” ಎಂದು ನೀತಿವಂತರು ಘೋಷಿಸುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.