An elderly teacher counts days with children as families labor, harvest, age, and rest beneath enduring mountains

ಕೀರ್ತನೆಗಳು 90

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 90 ದೈವಿಕ ನಿತ್ಯತೆಯನ್ನು ಹುಲ್ಲಿನಂತೆಯೂ ಕನಸಿನಂತೆಯೂ ಹಾದುಹೋಗುವ ಮಾನವ ಜೀವನಗಳೊಂದಿಗೆ ಹೋಲಿಸುತ್ತದೆ. ಜ್ಞಾನದ ಪ್ರತಿಕ್ರಿಯೆಯು ಸೀಮಿತ ದಿನಗಳನ್ನು ಎಣಿಸಿ, ಕರುಣೆಯನ್ನು ಬಯಸಿ, ಕಷ್ಟದ ನಡುವೆ ಸಂತೋಷವನ್ನು ಪಡೆದು, ಸಾಮಾನ್ಯ ಮಾನವ ಕೆಲಸವು ಸ್ಥಿರಗೊಳ್ಳಲಿ ಎಂದು ಕೇಳುತ್ತದೆ.
ನಿತ್ಯತೆಮರ್ತ್ಯತೆಜ್ಞಾನಕೆಲಸ
1ಯೆಹೋವ ದೇವರೇ, ತಲತಲಾಂತರಗಳಲ್ಲಿ ನೀವು ನಮ್ಮ ವಾಸಸ್ಥಾನವಾಗಿದ್ದೀರಿ.
2ಬೆಟ್ಟಗಳು ಹುಟ್ಟುವುದಕ್ಕಿಂತ ಮುಂಚೆಯೂ ನೀವು ಲೋಕವನ್ನೂ ನಿರ್ಮಿಸುವುದಕ್ಕಿಂತ ಮುಂಚೆಯೂ ಯುಗಯುಗಾಂತರಕ್ಕೂ ನೀವು ದೇವರಾಗಿದ್ದೀರಿ.
3ನೀವು ಮನುಷ್ಯರನ್ನು ಪುನಃ ಮಣ್ಣಿಗೆ ಸೇರಿಸುತ್ತೀರಿ. “ಮನುಷ್ಯ ಪುತ್ರರೇ , ಮಣ್ಣಿಗೆ ಮರಳಿರಿ,” ಎಂದು ಹೇಳುತ್ತೀರಿ.
4ಸಾವಿರ ವರ್ಷಗಳು ನಿಮ್ಮ ದೃಷ್ಟಿಗೆ ಕಳೆದುಹೋದ ಒಂದು ದಿವಸದ ಹಾಗೆಯೂ ರಾತ್ರಿ ಜಾವದ ಹಾಗೆಯೂ ಇವೆ.
5ನೀವು ಜನರನ್ನು ಮರಣ ನಿದ್ರೆಯ ಪ್ರವಾಹದಂತೆ ಹೋಗಲು ಅನುಮತಿಸುತ್ತೀರಿ. ಅವರು ಬೆಳಿಗ್ಗೆ ಬೆಳೆಯುವ ಹುಲ್ಲಿನ ಹಾಗೆ ಇದ್ದಾರೆ.
6ಅದು ಬೆಳಿಗ್ಗೆ ಅರಳಿ ಬೆಳೆಯುತ್ತದೆ. ಸಂಜೆಯಲ್ಲಿ ಒಣಗಿ ಬಿದ್ದು ಹೋಗುತ್ತದೆ.
7ನಾವು ನಿಮ್ಮ ಬೇಸರದಿಂದ ಬಾಧಿತರಾಗಿದ್ದೇವೆ. ನಿಮ್ಮ ಖಂಡನೆಯಿಂದ ತಲ್ಲಣಿಸುತ್ತೇವೆ.
8ನಮ್ಮ ಅಕ್ರಮಗಳನ್ನು ನಿಮ್ಮ ಮುಂದೆ ಇಟ್ಟಿದ್ದೀರಿ. ನಾವು ಮುಚ್ಚಿಟ್ಟುಕೊಂಡಿರುವ ಪಾಪಗಳು ನಿಮ್ಮ ಸನ್ನಿಧಿಯಲ್ಲಿವೆ.
9ನಮ್ಮ ದಿವಸಗಳೆಲ್ಲಾ ನಿಮ್ಮ ಖಂಡನೆಯಿಂದಲೇ ದಾಟಿಹೋದವು. ನಮ್ಮ ವರ್ಷಗಳನ್ನು ನಿಟ್ಟುಸಿರಿನಲ್ಲಿ ಕಳೆಯುತ್ತಿದ್ದೇವೆ.
10ನಮ್ಮ ಜೀವನದ ದಿನಗಳು ಎಪ್ಪತ್ತು ವರ್ಷ, ಬಲದಿಂದಿದ್ದರೆ ಎಂಬತ್ತು ವರ್ಷ. ಆದಾಗ್ಯೂ ಅವುಗಳ ಉತ್ತಮ ವರ್ಷಗಳು ಕಷ್ಟವೂ ಪ್ರಯಾಸವೂ ಆಗಿವೆ. ನಮ್ಮ ದಿನಗಳು ಬೇಗ ತೀರಿಹೋಗುತ್ತವೆ. ನಾವು ಹಾರಿಹೋಗುತ್ತೇವೆ.
11ನಿಮ್ಮ ಕೋಪದ ಶಕ್ತಿಯನ್ನು ತಿಳಿದವರ‍್ಯಾರು? ನಿಮ್ಮ ಮೇಲಿನ ಭಯಭಕ್ತಿಗೆ ಕಾರಣವಾಗಿರುವ ನಿಮ್ಮ ಖಂಡನೆಯನ್ನು ಗ್ರಹಿಸುವವರ‍್ಯಾರು?
12ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿನಗಳನ್ನು ಲೆಕ್ಕಿಸುವುದಕ್ಕೆ ನಮಗೆ ಕಲಿಸಿಕೊಡಿರಿ.
13ಯೆಹೋವ ದೇವರೇ, ಮನಸ್ಸು ಮಾರ್ಪಡಿಸಿಕೊಳ್ಳಿರಿ. ನೀವು ಎಷ್ಟರವರೆಗೆ ಬೇಸರಗೊಳ್ಳುವಿರಿ? ನಿಮ್ಮ ಸೇವಕರ ವಿಷಯದಲ್ಲಿ ಅನುಕಂಪ ತೋರಿಸಿರಿ.
14ಬೆಳಿಗ್ಗೆ ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನಮ್ಮನ್ನು ತೃಪ್ತಿಪಡಿಸಿರಿ. ಆಗ ನಮ್ಮ ದಿನಗಳೆಲ್ಲಾ ಉತ್ಸಾಹ ಧ್ವನಿಗೈದು ನಿಮ್ಮಲ್ಲಿ ಸಂತೋಷಪಡುವೆವು.
15ನೀವು ನಮ್ಮನ್ನು ಬಾಧಿಸಿದಷ್ಟು ಕಾಲ ಹರ್ಷಗೊಳಿಸಿರಿ. ನಾವು ತೊಂದರೆಯನ್ನು ನೋಡಿದಷ್ಟು ವರ್ಷಗಳು ನಮ್ಮನ್ನು ಸಂತೋಷಪಡಿಸಿರಿ.
16ನಿಮ್ಮ ಸೇವಕರಿಗೆ ನಿಮ್ಮ ಕೃತ್ಯಗಳನ್ನು ಪ್ರಕಟಿಸಿರಿ. ಅವರ ಮಕ್ಕಳಿಗೆ ನಿಮ್ಮ ಪ್ರಭೆಯೂ ತೋರಿ ಬರಲಿ.
17ನಮ್ಮ ದೇವರಾದ ಯೆಹೋವ ದೇವರ ಮೆಚ್ಚುಗೆಯು ನಮ್ಮ ಮೇಲೆ ಇರಲಿ. ನಮ್ಮ ಕೈಗಳ ಕೆಲಸವನ್ನು ಸ್ಥಿರಪಡಿಸಿರಿ. ಹೌದು, ನಮ್ಮ ಕೈಗಳ ಕೆಲಸವನ್ನು ಸ್ಥಾಪಿಸಿರಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.