A falsely accused fugitive watches elders weigh testimony beside an abandoned bow and pit

ಕೀರ್ತನೆಗಳು 7

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 7 ಬೆನ್ನಟ್ಟುವಿಕೆಯಿಂದ ರಕ್ಷಣೆಯನ್ನು ಕೇಳುತ್ತಲೇ ಪ್ರಾಮಾಣಿಕ ಆತ್ಮಪರೀಕ್ಷೆಗೂ ಆಹ್ವಾನಿಸುತ್ತದೆ. ನ್ಯಾಯವು ತನ್ನ ಮಾಡುವವನ ಮೇಲೆಯೇ ಹಿಂತಿರುಗುವ ಹಿಂಸೆಯನ್ನು ಬಯಲುಮಾಡಿ, ನಿರಪರಾಧಿಗಳಿಗೆ ಸುರಕ್ಷಿತ ಆಶ್ರಯಕ್ಕೂ ಕೃತಜ್ಞತೆಯ ಸ್ತುತಿಗೂ ಕಾರಣ ನೀಡುತ್ತದೆ.
ನ್ಯಾಯಆಶ್ರಯನಿರಪರಾಧಿತ್ವಆತ್ಮಪರೀಕ್ಷೆ
1ನನ್ನ ಯೆಹೋವ ದೇವರೇ, ನಿಮ್ಮನ್ನೇ ಆಶ್ರಯಿಸಿದ್ದೇನೆ; ನನ್ನನ್ನು ಬೆನ್ನಟ್ಟಿದ ಎಲ್ಲರಿಂದಲೂ ನನ್ನನ್ನು ರಕ್ಷಿಸಿ ಕಾಪಾಡಿರಿ,
2ಇಲ್ಲದಿದ್ದರೆ, ನನ್ನನ್ನು ಸಿಂಹದಂತೆ ಅವರು ಹರಿದುಬಿಡುವರು ರಕ್ಷಿಸಲು ಯಾರೂ ಇಲ್ಲವೆಂದು ನನ್ನನ್ನು ನಾಶಮಾಡಿಬಿಡುವರು.
3ನನ್ನ ಯೆಹೋವ ದೇವರೇ, ನಾನು ಅನ್ಯಾಯ ಮಾಡಿದ್ದರೆ, ನನ್ನ ಕೈಗಳಲ್ಲಿ ಅಪರಾಧವಿದ್ದರೆ,
4ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡುಮಾಡಿದ್ದರೆ, ಕಾರಣವಿಲ್ಲದೆ ನನ್ನ ವೈರಿಯಿಂದ ಏನನ್ನಾದರೂ ಸುಲಿದುಕೊಂಡಿದ್ದರೆ,
5ಆಗ ನನ್ನ ವೈರಿಯು ಬೆನ್ನಟ್ಟಿ ನನ್ನನ್ನು ಹಿಡಿದುಕೊಳ್ಳಲಿ. ನನ್ನ ಜೀವವನ್ನು ನೆಲಕ್ಕೆ ಹಾಕಿ ತುಳಿದು ಬಿಡಲಿ ಮತ್ತು ನನ್ನ ಮಾನವನ್ನು ಮಣ್ಣು ಪಾಲಾಗುವಂತೆ ಮಾಡಲಿ.
6ಯೆಹೋವ ದೇವರೇ, ನೀವು ಕೋಪದಿಂದ ಎದ್ದೇಳಿರಿ; ನನ್ನ ವೈರಿಗಳ ಕ್ರೋಧಕ್ಕೆ ವಿರೋಧವಾಗಿ ಎಚ್ಚರಗೊಳ್ಳಿರಿ. ನನ್ನ ದೇವರೇ, ನ್ಯಾಯಕ್ಕೆ ನಿಮ್ಮ ತೀರ್ಪನ್ನು ನೀಡಲು ಎದ್ದೇಳಿರಿ.
7ರಾಷ್ಟ್ರಗಳು ನಿಮ್ಮ ಸುತ್ತಲು ಬಂದು ಸೇರಲಿ, ಉನ್ನತದಿಂದ ನೀವು ಅವರ ಮೇಲೆ ಸಿಂಹಾಸನದಲ್ಲಿದ್ದು ಆಳಿರಿ.
8ಯೆಹೋವ ದೇವರು ಜನಗಳಿಗೆ ನ್ಯಾಯತೀರಿಸಲಿ. ಮಹೋನ್ನತರಾದ ಯೆಹೋವ ದೇವರೇ, ನನ್ನ ನೀತಿಯ ಪ್ರಕಾರವೂ, ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸಿರಿ.
9ದುಷ್ಟರ ಕೆಟ್ಟತನವು ಅಂತ್ಯವಾಗುವಂತೆಯೂ ನೀತಿವಂತರ ಭದ್ರತೆಯು ನಿಶ್ಚಯವಾಗುವಂತೆಯೂ ಮಾಡಿರಿ. ನೀತಿಯುಳ್ಳ ದೇವರೇ, ನೀವು ಹೃದಯವನ್ನೂ ಮನಸ್ಸನ್ನೂ ಪರಿಶೋಧಿಸುವವರಾಗಿದ್ದೀರಿ.
10ಮಹೋನ್ನತರಾದ ದೇವರು ನನ್ನ ಗುರಾಣಿಯಾಗಿದ್ದಾರೆ, ಅವರು ಯಥಾರ್ಥ ಹೃದಯವುಳ್ಳವರನ್ನು ರಕ್ಷಿಸುತ್ತಾರೆ.
11ದೇವರು ನೀತಿಯುಳ್ಳ ನ್ಯಾಯಾಧಿಪತಿಯಾಗಿದ್ದಾರೆ. ದೇವರು ದುಷ್ಟನ ಮೇಲೆ ಸದಾ ರೋಷವುಳ್ಳವರಾಗಿದ್ದಾರೆ.
12ಅಂಥವರು ತಿರುಗಿಕೊಳ್ಳದಿದ್ದರೆ ದೇವರು ತಮ್ಮ ಖಡ್ಗ ಮಸೆಯುವರು; ತಮ್ಮ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡುವರು.
13ಅಂಥವರಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿದ್ದಾರೆ; ತಮ್ಮ ಅಗ್ನಿಬಾಣಗಳನ್ನು ಸಿದ್ಧಮಾಡುತ್ತಾರೆ.
14ಅಂಥವರು ದುಷ್ಟತನವನ್ನು ಗರ್ಭಧರಿಸಿ, ಸೇಡನ್ನು ಗರ್ಭದಲ್ಲಿಟ್ಟುಕೊಂಡು ಸುಳ್ಳನ್ನು ಹೆರುವರು.
15ಅಂಥವರು ಕುಣಿಯನ್ನು ಅಗೆದಿದ್ದಾರೆ. ಆದರೆ ತಾವು ಅಗೆದ ಕುಣಿಯೊಳಗೆ ತಾವೇ ಬೀಳುವರು.
16ಅಂಥವರ ಕೇಡು ಅವರ ಮೇಲೆಯೇ ತಿರುಗುವುದು; ಅವರ ತಲೆಯ ಮೇಲೆ ಅವರ ಬಲಾತ್ಕಾರವೇ ಇಳಿಯುವುದು.
17ನಾನು ಯೆಹೋವ ದೇವರನ್ನು ಕೊಂಡಾಡುವೆನು; ಏಕೆಂದರೆ, ಅವರು ನೀತಿಯುಳ್ಳವರು. ಮಹೋನ್ನತರಾದ ಯೆಹೋವ ದೇವರ ಹೆಸರನ್ನು ಕೀರ್ತನೆ ಮಾಡುವೆನು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.