
ಕೀರ್ತನೆಗಳು 8
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 8 ಶಿಶುಗಳ ಸ್ತುತಿಯಿಂದ ಚಂದ್ರ ಮತ್ತು ನಕ್ಷತ್ರಗಳವರೆಗೆ ನೋಡಿ, ಚಿಕ್ಕ ಮಾನವರು ಘನತೆಯನ್ನೂ ಜವಾಬ್ದಾರಿಯನ್ನೂ ಪಡೆಯುವುದನ್ನು ಕಂಡು ವಿಸ್ಮಯಪಡುತ್ತದೆ. ವಿಶಾಲವಾದ ಸೃಷ್ಟಿ ಕ್ರಮದೊಳಗೆ ಗಮನಪೂರ್ವಕ ಆರೈಕೆಯನ್ನು ಮಾನವಕುಲಕ್ಕೆ ಒಪ್ಪಿಸಲಾಗಿದೆ.
ಸೃಷ್ಟಿಮಾನವ ಘನತೆವಿಸ್ಮಯಮೇಲ್ವಿಚಾರಣೆ
1ನಮ್ಮ ಕರ್ತ ಆಗಿರುವ ಯೆಹೋವ ದೇವರೇ, ನಿಮ್ಮ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ವೈಭವವುಳ್ಳದ್ದಾಗಿದೆ! ನೀವು ನಿಮ್ಮ ಮಹಿಮೆಯನ್ನು ಆಕಾಶಗಳಲ್ಲಿ ಸ್ಥಾಪಿಸಿದ್ದೀರಿ.
2ಸಣ್ಣ ಮಕ್ಕಳ ಮತ್ತು ಹಾಲುಣ್ಣುವ ಕೂಸುಗಳ ಸ್ತೋತ್ರದ ಮೂಲಕ ನಿಮ್ಮ ಶತ್ರುಗಳ ವಿರೋಧವಾಗಿ ಭದ್ರಕೋಟೆಯನ್ನು ಸ್ಥಾಪಿಸಿ, ನಿಮ್ಮ ವೈರಿಗಳನ್ನೂ ಮುಯ್ಯಿ ತೀರಿಸುವವರನ್ನೂ ನೀವು ಸುಮ್ಮಗಿರಿಸಿದ್ದೀರಿ.
3ನಿಮ್ಮ ಬೆರಳಿನ ಸೃಷ್ಟಿಯಾದ ಆಕಾಶಮಂಡಲವನ್ನೂ ನೀವು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡಿದಾಗ,
4ನೀವು ಮಾನವರನ್ನು ನೆನಸಲು ಅವರು ಎಷ್ಟರವರು? ಮನುಷ್ಯಪುತ್ರನನ್ನು ಲಕ್ಷ್ಯವಿಡಲು ಅವನು ಯಾರು?
5ನೀವು ಮನುಷ್ಯಪುತ್ರನನ್ನು ದೇವರಿಗಿಂತಲೂ ಸ್ವಲ್ಪ ಕಡಿಮೆ ಮಾಡಿ, ಮಹಿಮೆಯನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿಟ್ಟಿದ್ದೀರಿ.
6ನೀವು ನಿಮ್ಮ ಕೈಕೃತಿಗಳ ಮೇಲೆ ಅವನನ್ನು ಅಧಿಕಾರಿಯನ್ನಾಗಿ ಮಾಡಿ, ಸಮಸ್ತವನ್ನೂ ಅವನ ಪಾದಗಳ ಕೆಳಗೆ ಹಾಕಿದ್ದೀರಿ:
7ಎಲ್ಲಾ ಕುರಿದನಗಳನ್ನೂ ಅಡವಿಯ ಮೃಗಗಳನ್ನೂ
8ಆಕಾಶದ ಪಕ್ಷಿಗಳನ್ನೂ ಸಮುದ್ರದ ಮೀನುಗಳನ್ನೂ ಸಮುದ್ರದ ಹಾದಿಗಳಲ್ಲಿ ಸಂಚರಿಸುವ ಎಲ್ಲ ವಿಧವಾದ ಜೀವಜಂತುಗಳನ್ನೂ ಅವನ ಪಾದಗಳ ಕೆಳಗೆ ಹಾಕಿದ್ದೀರಿ.
9ನಮ್ಮ ಕರ್ತ ಆಗಿರುವ ಯೆಹೋವ ದೇವರೇ, ನಿಮ್ಮ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದಾಗಿದೆ!
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.