
ಕೀರ್ತನೆಗಳು 132
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 132 ದಾವೀದನ ಭಕ್ತಿ, ಮಂಜೂಷದ ವಿಶ್ರಾಂತಿ ಸ್ಥಳ ಮತ್ತು ಚೀಯೋನ್, ಯಾಜಕತ್ವ, ಪೂರೈಕೆ ಮತ್ತು ಶಾಶ್ವತ ಅರಸುತನವನ್ನು ಸೇರಿಸುವ ವಾಗ್ದಾನಗಳನ್ನು ನೆನಪಿಸಿಕೊಳ್ಳುತ್ತದೆ. ಆರಾಧನೆಯ ಮೆರವಣಿಗೆಯು ಆಯ್ಕೆಯಾದ ವಾಸಸ್ಥಳವು ಬಡವರನ್ನೂ ನಂಬಿಗಸ್ತರನ್ನೂ ಆಶೀರ್ವದಿಸುವುದೆಂಬ ಭರವಸೆಯಾಗುತ್ತದೆ.
ಮಂಜೂಷಚೀಯೋನ್ಅರಸುತನಒಡಂಬಡಿಕೆ
1ಯೆಹೋವ ದೇವರೇ, ದಾವೀದನನ್ನೂ ಅವನ ಎಲ್ಲಾ ಶ್ರಮೆಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
2ದಾವೀದನು ಯೆಹೋವ ದೇವರಿಗೆ ಆಣೆ ಇಟ್ಟು, ಪರಾಕ್ರಮಿಯಾದ ಯಾಕೋಬನ ದೇವರಿಗೆ ಹೀಗೆಂದು ಪ್ರಮಾಣ ಮಾಡಿದನು:
3“ಯೆಹೋವ ದೇವರಿಗೆ ಒಂದು ಸ್ಥಳವನ್ನೂ, ಯಾಕೋಬನ ದೇವರಿಗೆ ನಿವಾಸವನ್ನೂ ಕಟ್ಟುವವರೆಗೆ ನಿಶ್ಚಯವಾಗಿ,
4ನಾನು ನನ್ನ ಮನೆ ಸೇರೆನು; ನನ್ನ ಮಂಚವನ್ನು ಏರೆನು.
5ನನ್ನ ಕಣ್ಣುಗಳಿಗೆ ನಿದ್ದೆಯನ್ನು ಕೊಡೆನು, ನನ್ನ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡೆನು.”
6ನಾವು ಎಫ್ರಾತದಲ್ಲಿ ಇದನ್ನು ಕೇಳಿದೆವು; ಯಹಾರ್ ಅಡವಿಯ ಬಯಲುಗಳಲ್ಲಿ ಇದನ್ನು ಕಂಡು ಹೀಗೆಂದು ಕೇಳಿಸಿಕೊಂಡೆವು:
7“ಬನ್ನಿರಿ ನಾವು ದೇವರ ಮಂದಿರಕ್ಕೆ ಹೋಗಿ, ಅವರ ಪಾದಪೀಠದಲ್ಲಿ ಆರಾಧಿಸೋಣ.
8‘ಯೆಹೋವ ದೇವರೇ, ಎದ್ದು ನಿಮ್ಮ ವಿಶ್ರಾಂತಿಯ ಸ್ಥಳಕ್ಕೆ ಬನ್ನಿರಿ; ನೀವೂ, ನಿಮ್ಮ ಶಕ್ತಿಯುತ ಮಂಜೂಷವೂ ಬರಲಿ.
9ನಿಮ್ಮ ಯಾಜಕರು ನೀತಿಯೆಂಬ ವಸ್ತ್ರವನ್ನು ಧರಿಸಿಕೊಳ್ಳಲಿ; ನಿಮ್ಮ ಭಕ್ತರು ಉತ್ಸಾಹಧ್ವನಿ ಮಾಡಲಿ.’ ”
10ನಿಮ್ಮ ಸೇವಕನಾದ ದಾವೀದನ ನಿಮಿತ್ತ, ನಿಮ್ಮ ಅಭಿಷಿಕ್ತನನ್ನು ತಿರಸ್ಕರಿಸಬೇಡಿರಿ.
11ಯೆಹೋವ ದೇವರು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾರೆ; ತಾವು ಹೀಗೆಂದು ಆಣೆಯಿಟ್ಟುಕೊಟ್ಟ ಮಾತನ್ನು ದೇವರು ಬದಲಿಸುವುದಿಲ್ಲ, “ನಿನ್ನ ಸಂತತಿಯವನನ್ನೇ ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು.
12ನಿಮ್ಮ ಮಕ್ಕಳು ನನ್ನ ಶಾಸನಗಳನ್ನೂ ನನ್ನ ಒಡಂಬಡಿಕೆಯನ್ನು ಸನ್ಮಾನಿಸಿ, ಕೈಗೊಂಡರೆ, ಅವರ ಮಕ್ಕಳು ಸಹ ಎಂದೆಂದಿಗೂ ನಿನ್ನ ಸಿಂಹಾಸನದಲ್ಲಿ ಕೂರುವರು.”
13ಏಕೆಂದರೆ, ಯೆಹೋವ ದೇವರು ಚೀಯೋನನ್ನು ಆಯ್ದುಕೊಂಡು ಅದನ್ನು ತಮ್ಮ ವಾಸಕ್ಕಾಗಿ ಅಪೇಕ್ಷಿಸಿ ಹೀಗೆಂದಿದ್ದಾರೆ:
14“ಇದೇ ಎಂದೆಂದಿಗೂ ನನ್ನ ವಿಶ್ರಾಂತಿಯ ಸ್ಥಳವಾಗಿರುವುದು; ಇಲ್ಲೇ ವಾಸಿಸುವೆನು; ಇದನ್ನು ನಾನು ಅಪೇಕ್ಷಿಸಿದ್ದೇನೆ; ಇಲ್ಲಿಯೇ ಸಿಂಹಾಸನಾರೂಢನಾಗಿರುವೆನು.
15ಧಾರಾಳವಾಗಿ ದವಸಧಾನ್ಯಗಳಿರಲೆಂದು ನಾನು ಚೀಯೋನನ್ನು ಆಶೀರ್ವದಿಸುವೆನು; ಇಲ್ಲಿ ವಾಸಿಸುವ ಬಡವರು ಉಂಡು ಸಂತೃಪ್ತಿಯಿಂದಿರುವರು.
16ಇಲ್ಲಿನ ಯಾಜಕರಿಗೆ ರಕ್ಷಣೆಯನ್ನು ಹೊದಿಸುವೆನು; ಚೀಯೋನಿನ ನಂಬಿಗಸ್ತ ಸೇವಕರು ಉತ್ಸಾಹಧ್ವನಿಯಿಂದ ಹಾಡುವರು.
17“ಇಲ್ಲಿ ದಾವೀದನಿಗೆ ಬಲದಾಯಕ ಅರಸನನ್ನು ಚಿಗುರುವಂತೆ ಮಾಡುವೆನು; ನನ್ನ ಅಭಿಷಿಕ್ತನಿಗೆ ದೀಪವನ್ನು ಸಿದ್ಧಮಾಡಿದ್ದೇನೆ.
18ಇಲ್ಲಿ ಆತನ ಶತ್ರುಗಳಿಗೆ ನಾಚಿಕೆಯ ವಸ್ತ್ರವನ್ನು ಹೊದಿಸುವೆನು; ಆದರೆ ಆತನ ತೆರೆಯ ಮೇಲೆ ಕಿರೀಟವು ಶೋಭಿಸುವುದು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.