Weary believers comforting and sheltering one another as light breaks through receding storm clouds

2 ಥೆಸಲೋನಿಕದವರಿಗೆ 1

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಥೆಸಲೋನಿಕದವರ ಬೆಳೆಯುತ್ತಿರುವ ನಂಬಿಕೆ, ಹೆಚ್ಚುತ್ತಿರುವ ಪ್ರೀತಿ ಮತ್ತು ಹಿಂಸೆಯ ನಡುವಿನ ಸಹನೆಗಾಗಿ ಪೌಲನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾನೆ. ದೇವರ ನ್ಯಾಯವಾದ ತೀರ್ಪು ಮತ್ತು ಭವಿಷ್ಯದ ಉಪಶಮನದ ಭರವಸೆ ನೀಡಿ, ದೇವರು ಅವರನ್ನು ತಮ್ಮ ಕರೆಗೆ ಯೋಗ್ಯರನ್ನಾಗಿ ಮಾಡಿ ಪ್ರತಿಯೊಂದು ನಂಬಿಗಸ್ತ ಸಂಕಲ್ಪವನ್ನು ನೆರವೇರಿಸುವಂತೆ ಪ್ರಾರ್ಥಿಸುತ್ತಾನೆ.
ಸಹನೆಬೆಳೆಯುವ ನಂಬಿಕೆ ಮತ್ತು ಪ್ರೀತಿದೈವಿಕ ನ್ಯಾಯಕರೆ
1ನಮ್ಮ ತಂದೆ ದೇವರಲ್ಲಿಯೂ, ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ, ತಿಮೊಥೆಯರು ಬರೆಯುವುದು:
2ನಮ್ಮ ತಂದೆ ದೇವರಿಂದಲೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಉಂಟಾಗಲಿ.
3ಪ್ರಿಯರೇ, ನಾವು ಯಾವಾಗಲೂ ನಿಮಗಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಬದ್ಧರಾಗಿದ್ದೇವೆ. ಹಾಗೆ ಮಾಡುವುದು ಯೋಗ್ಯ. ಏಕೆಂದರೆ ನಿಮ್ಮ ವಿಶ್ವಾಸವು ಹೆಚ್ಚೆಚ್ಚಾಗಿ ಅಭಿವೃದ್ಧಿಯಾಗುತ್ತಾ ಇದೆ ಮತ್ತು ಪರಸ್ಪರ ನಿಮ್ಮೆಲ್ಲರಲ್ಲಿ ಪ್ರೀತಿಯೂ ಹೆಚ್ಚುತ್ತಿದೆ.
4ಹೀಗಿರುವುದರಿಂದ, ನೀವು ಸಹಿಸುತ್ತಿರುವ ನಿಮ್ಮ ಎಲ್ಲಾ ಹಿಂಸೆಗಳಲ್ಲಿಯೂ ಸಂಕಟಗಳಲ್ಲಿಯೂ ನಿಮಗೆ ತೋರಿ ಬಂದ ನಿಮ್ಮ ತಾಳ್ಮೆ, ನಂಬಿಕೆಗಳನ್ನು ನೆನೆಸಿ ನಿಮ್ಮ ವಿಷಯವಾಗಿ ದೇವರ ಸಭೆಗಳಲ್ಲಿ ನಾವೇ ಹೆಮ್ಮೆಪಡುತ್ತೇವೆ.
5ನೀವು ಯಾವ ದೇವರ ರಾಜ್ಯಕ್ಕಾಗಿ ಕಷ್ಟವನ್ನು ಅನುಭವಿಸುತ್ತಿರುವಿರೋ, ಆ ರಾಜ್ಯಕ್ಕಾಗಿ ನೀವು ಯೋಗ್ಯರೆಂದು ಎಣಿಕೆಯಾಗಲು ಇದು ದೇವರ ನೀತಿಯುಳ್ಳ ನ್ಯಾಯತೀರ್ಪಿಗೆ ಸ್ಪಷ್ಟವಾದ ನಿದರ್ಶನವಾಗಿದೆ.
6ನಿಮ್ಮನ್ನು ಸಂಕಟ ಪಡಿಸುವವರಿಗೆ ದೇವರು ಪ್ರತಿಯಾಗಿ ಸಂಕಟವನ್ನೂ ಮತ್ತು
7ಸಂಕಟ ಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವುದು ದೇವರಿಗೆ ನ್ಯಾಯವಾಗಿದೆ. ನಮಗೆ ಕರ್ತ ಆಗಿರುವ ಯೇಸು ತಮ್ಮ ಶಕ್ತಿಯುತವಾದ ದೂತರೊಂದಿಗೆ ಪರಲೋಕದಿಂದ ಪ್ರಜ್ವಲಿಸುವ ಜ್ವಾಲೆಯಲ್ಲಿ ಪ್ರತ್ಯಕ್ಷರಾಗುವಾಗ ಇದಾಗುವುದು.
8ಅವರು ದೇವರನ್ನು ಅರಿಯದವರಿಗೂ ನಮಗೆ ಕರ್ತ ಆಗಿರುವ ಯೇಸುವಿನ ಸುವಾರ್ತೆಗೆ ಅವಿಧೇಯರಾದವರಿಗೂ ಪ್ರತೀಕಾರ ಮಾಡುವರು.
9ಅಂಥವರು ಕರ್ತ ಯೇಸುವಿನ ಸನ್ನಿಧಿಯಿಂದಲೂ ಅವರ ಮಹಿಮೆಯ ಬಲದಿಂದಲೂ ಬಹಿಷ್ಕೃತರಾಗಿ ನಿತ್ಯನಾಶದ ಶಿಕ್ಷೆಯನ್ನು ಅನುಭವಿಸುವರು.
10ಆ ದಿನದಲ್ಲಿ ಕರ್ತ ಯೇಸು ತಮ್ಮ ಪರಿಶುದ್ಧ ಜನರಲ್ಲಿ ಮಹಿಮೆ ಹೊಂದುವವರಾಗಿಯೂ ನಂಬುವವರೆಲ್ಲರನ್ನು ಆಶ್ಚರ್ಯಪಡಿಸುವವರಾಗಿಯೂ ಬರುವರು. ನಮ್ಮ ಸಾಕ್ಷಿಯನ್ನು ನಂಬಿದ್ದರಿಂದ ನಿಮಗೂ ಇವು ಸಂಭವಿಸುವುವು.
11ನಮ್ಮ ದೇವರು ನೀಡಿರುವ ಕರೆಯುವಿಕೆಗೆ ನಿಮ್ಮನ್ನು ಯೋಗ್ಯರೆಂದು ಎಣಿಸಿ, ಒಳಿತನ್ನು ಮಾಡಲು ನಿಮ್ಮ ಎಲ್ಲಾ ಇಷ್ಟಾರ್ಥವನ್ನೂ ವಿಶ್ವಾಸದಿಂದ ಆಗಿರುವ ನಿಮ್ಮ ಎಲ್ಲಾ ಕಾರ್ಯಗಳನ್ನೂ ದೇವರು ತಮ್ಮ ಶಕ್ತಿಯಿಂದ ಪರಿಪೂರ್ಣಗೊಳಿಸುವಂತೆ ನಾವು ಯಾವಾಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡುತ್ತೇವೆ.
12ನಮ್ಮ ದೇವರ ಹಾಗೂ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯ ಅನುಸಾರವಾಗಿ, ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದಬೇಕು. ಮಾತ್ರವಲ್ಲದೇ ನೀವು ಕೂಡಾ ಅವರಲ್ಲಿ ಮಹಿಮೆ ಹೊಂದಬೇಕು ಎಂದು ಬೇಡಿಕೊಳ್ಳುತ್ತೇವೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.