A dawn-lit community tending lamps, encouraging an elder, and carrying food to neighbors

1 ಥೆಸಲೋನಿಕದವರಿಗೆ 5

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕರ್ತನ ದಿನವು ಅನಿರೀಕ್ಷಿತವಾಗಿ ಬರುವುದರಿಂದ ವಿಶ್ವಾಸಿಗಳು ಎಚ್ಚರವಾಗಿ, ಸ್ವಸ್ಥಚಿತ್ತರಾಗಿ, ನಂಬಿಗಸ್ತರಾಗಿ, ಪ್ರೀತಿಯುಳ್ಳವರಾಗಿ ಮತ್ತು ನಿರೀಕ್ಷೆಯುಳ್ಳವರಾಗಿ ಇರಬೇಕು. ನಾಯಕರನ್ನು ಗೌರವಿಸಲು, ಶಾಂತಿಯನ್ನು ಹಿಂಬಾಲಿಸಲು, ಬಲಹೀನರನ್ನು ಆಧರಿಸಲು, ಪ್ರಾರ್ಥಿಸಿ ಕೃತಜ್ಞತೆ ಸಲ್ಲಿಸಲು, ಎಲ್ಲವನ್ನೂ ಪರೀಕ್ಷಿಸಲು ಮತ್ತು ಒಳ್ಳೆಯದನ್ನು ಹಿಡಿದುಕೊಳ್ಳಲು ಪೌಲನು ಸಭೆಯನ್ನು ಕರೆಯುತ್ತಾನೆ.
ಎಚ್ಚರಿಕೆನಂಬಿಕೆ, ಪ್ರೀತಿ ಮತ್ತು ನಿರೀಕ್ಷೆಸಮುದಾಯದ ಆರೈಕೆಪ್ರಾರ್ಥನೆ ಮತ್ತು ವಿವೇಚನೆ
1ಪ್ರಿಯರೇ, ಈ ಕಾಲಸಮಯಗಳನ್ನು ಕುರಿತು ನಿಮಗೆ ಬರೆಯುವುದು ಅವಶ್ಯವಿಲ್ಲ.
2ರಾತ್ರಿಯಲ್ಲಿ ಕಳ್ಳನು ಬರುವಂತೆ ಕರ್ತ ಯೇಸುವಿನ ದಿನವು ಬರುವುದೆಂದು ನೀವೇ ಚೆನ್ನಾಗಿ ಬಲ್ಲಿರಿ.
3ಆದರೆ, “ಸಮಾಧಾನ, ಸುರಕ್ಷಿತ,” ಎಂದು ಜನರು ಹೇಳುತ್ತಿರುವಾಗಲೇ, ಅವರ ಮೇಲೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಬರುವಂತೆ ಫಕ್ಕನೆ ಬರುವುದು. ಅವರು ಹೇಗೂ ತಪ್ಪಿಸಿಕೊಳ್ಳಲಾರರು.
4ಆದರೆ ಪ್ರಿಯರೇ, ಆ ದಿನವು ಕಳ್ಳನಂತೆ ನಿಮ್ಮನ್ನು ಆಶ್ಚರ್ಯಪಡಿಸುವುದಕ್ಕೆ ನೀವು ಕತ್ತಲೆಯಲ್ಲಿರುವವರಲ್ಲ.
5ನೀವೆಲ್ಲರೂ ಬೆಳಕಿನ ಮಕ್ಕಳೂ ಹಗಲಿನ ಮಕ್ಕಳೂ ಆಗಿದ್ದೀರಿ. ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ.
6ಆದಕಾರಣ ನಾವು ಇತರರಂತೆ ನಿದ್ರೆ ಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿರೋಣ.
7ನಿದ್ರೆ ಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ. ಅಮಲೇರುವವರು ರಾತ್ರಿಯಲ್ಲಿ ಅಮಲೇರುತ್ತಾರೆ.
8ನಾವಾದರೋ ಹಗಲಿಗೆ ಸೇರಿದವರಾಗಿ ಇರುವುದರಿಂದ ನಂಬಿಕೆ ಹಾಗೂ ಪ್ರೀತಿಯನ್ನು ಕವಚವನ್ನಾಗಿಯೂ ರಕ್ಷಣೆಯ ನಿರೀಕ್ಷೆಯನ್ನು ಶಿರಸ್ತ್ರಾಣವನ್ನಾಗಿಯೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.
9ಏಕೆಂದರೆ ದೇವರು ನಮ್ಮನ್ನು ಕೋಪಾಗ್ನಿಗೆ ನೇಮಿಸದೆ ನಾವು ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿ ರಕ್ಷಣೆಯನ್ನು ಹೊಂದಬೇಕೆಂದೇ ನೇಮಿಸಿದರು.
10ನಾವು ಎಚ್ಚರವಾಗಿದ್ದರೂ ನಿದ್ರೆಯಲ್ಲಿದ್ದರೂ ತಮ್ಮ ಜೊತೆಯಲ್ಲಿಯೇ ನಾವು ಜೀವಿಸಬೇಕೆಂದು ಅವರು ನಮಗಾಗಿ ಸತ್ತರು.
11ಆದ್ದರಿಂದ ನೀವು ಈಗ ಮಾಡುತ್ತಿರುವಂತೆಯೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ. ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ.
12ಪ್ರಿಯರೇ, ಯಾರು ನಿಮ್ಮ ನಡುವೆ ಪ್ರಯಾಸಪಟ್ಟು ಕರ್ತ ಯೇಸುವಿನಲ್ಲಿ ನಿಮ್ಮನ್ನು ಪರಾಮರಿಸುವವರಾಗಿದ್ದು ನಿಮಗೆ ಬುದ್ಧಿ ಹೇಳುತ್ತಾರೋ ಅವರನ್ನು ಗೌರವಿಸಿರಿ.
13ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಅತ್ಯಧಿಕವಾಗಿ ಸನ್ಮಾನ ಮಾಡಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ನಿಮ್ಮನಿಮ್ಮೊಳಗೆ ಸಮಾಧಾನದಿಂದಿರಿ.
14ಪ್ರಿಯರೇ, ಶಿಸ್ತು ಇಲ್ಲದವರನ್ನು ಎಚ್ಚರಿಸಿರಿ. ಮನಗುಂದಿದವರನ್ನು ಆದರಿಸಿರಿ. ಬಲಹೀನರಿಗೆ ಆಧಾರವಾಗಿರಿ. ಎಲ್ಲರೊಂದಿಗೂ ತಾಳ್ಮೆಯುಳ್ಳವರಾಗಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.
15ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿಕೊಳ್ಳಿರಿ. ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಳ್ಳುವುದಲ್ಲದೆ ಎಲ್ಲರಿಗೂ ಹಿತವನ್ನು ಮಾಡುವವರಾಗಿರಿ.
16ಯಾವಾಗಲೂ ಆನಂದಿಸಿರಿ.
17ಎಡೆಬಿಡದೆ ಪ್ರಾರ್ಥಿಸಿರಿ.
18ಎಲ್ಲವುಗಳಿಗಾಗಿ ಕೃತಜ್ಞತೆ ಸಲ್ಲಿಸಿರಿ. ಏಕೆಂದರೆ ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ.
19ಪವಿತ್ರಾತ್ಮ ದೇವರ ಸನ್ನಿಧಿಯನ್ನು ನಂದಿಸಬೇಡಿರಿ.
20ಪ್ರವಾದನೆಗಳನ್ನು ಹೀನೈಸಬೇಡಿರಿ.
21ಎಲ್ಲವನ್ನು ಪರಿಶೋಧಿಸಿ ಒಳ್ಳೆಯದನ್ನೇ ಬಿಗಿಯಾಗಿ ಹಿಡಿದುಕೊಳ್ಳಿರಿ.
22ಸಕಲ ವಿಧವಾದ ಕೆಟ್ಟತನಗಳಿಗೆ ದೂರವಾಗಿರಿ.
23ಸಮಾಧಾನದ ದೇವರು ತಾವಾಗಿಯೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರ ಮಾಡಲಿ. ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಪುನರಾಗಮನದಲ್ಲಿ ನಿಮ್ಮ ಆತ್ಮ, ಪ್ರಾಣ, ಶರೀರಗಳು ದೋಷವಿಲ್ಲದೆ ಸಂಪೂರ್ಣವಾಗಿ ಸುರಕ್ಷಿತವಾಗಿರಲಿ.
24ನಿಮ್ಮನ್ನು ಕರೆಯುವ ದೇವರು ನಂಬಿಗಸ್ತರು, ಅವರೇ ಅದನ್ನು ಸಾಧಿಸುವವರೂ ಆಗಿದ್ದಾರೆ.
25ಪ್ರಿಯರೇ, ನಮಗಾಗಿ ಪ್ರಾರ್ಥಿಸಿರಿ.
26ಪವಿತ್ರವಾದ ಮುದ್ದಿಟ್ಟು ದೇವಜನರೆಲ್ಲರನ್ನೂ ವಂದಿಸಿರಿ.
27ಈ ಪತ್ರವನ್ನು ಸಹೋದರ ಸಹೋದರಿಯರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತ ಯೇಸುವಿನ ಹೆಸರಿನಲ್ಲಿ ಆಜ್ಞಾಪಿಸುತ್ತೇನೆ.
28ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೊಂದಿಗಿರಲಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.