
1 ಥೆಸಲೋನಿಕದವರಿಗೆ 1
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಥೆಸಲೋನಿಕದವರ ನಂಬಿಕೆಯ ಕೆಲಸ, ಪ್ರೀತಿಯ ಶ್ರಮ ಮತ್ತು ನಿರೀಕ್ಷೆಯ ಸಹನೆಗಾಗಿ ಪೌಲನು ಕೃತಜ್ಞತೆ ಸಲ್ಲಿಸುತ್ತಾನೆ. ಅವರು ಸಂಕಟದ ನಡುವೆ ಸಂತೋಷದಿಂದ ಸಂದೇಶವನ್ನು ಸ್ವೀಕರಿಸಿ, ಪ್ರದೇಶದಾದ್ಯಂತ ಮಾದರಿಯಾಗಿ, ವಿಗ್ರಹಗಳಿಂದ ತಿರುಗಿ ಜೀವಸ್ವರೂಪನಾದ ದೇವರ ಸೇವೆಗೆ ಬಂದರು.
ನಂಬಿಕೆ, ಪ್ರೀತಿ ಮತ್ತು ನಿರೀಕ್ಷೆಅನುಕರಣೆಸಂಕಟದಲ್ಲಿ ಸಂತೋಷವಿಗ್ರಹಗಳಿಂದ ತಿರುಗುವಿಕೆ
1ತಂದೆ ದೇವರಲ್ಲಿಯೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ, ಪೌಲ, ಸಿಲ್ವಾನ ಹಾಗೂ ತಿಮೊಥೆ ಇವರು ಬರೆಯುವ ಪತ್ರ: ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
2ನಾವು ನಮ್ಮ ಪ್ರಾರ್ಥನೆಗಳಲ್ಲಿ ನಿಮ್ಮನ್ನು ಸ್ಮರಿಸುತ್ತಾ ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
3ನಿಮ್ಮ ವಿಶ್ವಾಸ ಪ್ರಕಟಿಸುವ ಕ್ರಿಯೆಯನ್ನೂ ಪ್ರೀತಿ ಪ್ರೇರಿತ ಪ್ರಯಾಸವನ್ನೂ ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿರುವ ನಿರೀಕ್ಷೆಯ ಸ್ಮರಣೆಯನ್ನೂ ನಾವು ನಮ್ಮ ತಂದೆಯಾದ ದೇವರ ಮುಂದೆ ಎಡಬಿಡದೆ ಜ್ಞಾಪಿಸಿಕೊಳ್ಳುತ್ತೇವೆ.
4ದೇವರು ಪ್ರೀತಿಸುವ ಪ್ರಿಯರೇ, ದೇವರು ತಾವಾಗಿಯೇ ನಿಮ್ಮನ್ನು ಆರಿಸಿಕೊಂಡಿದ್ದಾರೆಂದು ನಾವು ಬಲ್ಲೆವು.
5ಏಕೆಂದರೆ ನಮ್ಮ ಸುವಾರ್ತೆಯು ನಿಮಗೆ ಬರೀ ಮಾತಾಗಿ ಬಾರದೆ, ಶಕ್ತಿಯಲ್ಲಿಯೂ ಪವಿತ್ರಾತ್ಮ ದೇವರ ಸನ್ನಿಧಿಯಲ್ಲಿಯೂ ಬಹು ನಿಶ್ಚಯದಲ್ಲಿಯೂ ಬಂತೆಂಬುದನ್ನು ತಿಳಿದಿದ್ದೇವೆ. ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಮಾಡಿದ ಜೀವನ ಎಂಥದ್ದೆಂದು ನೀವೇ ಬಲ್ಲಿರಿ.
6ನೀವು ಬಹು ಹಿಂಸೆಯಿಂದಲೂ ಪವಿತ್ರಾತ್ಮ ಪ್ರೇರಿತ ಆನಂದದಿಂದಲೂ ವಾಕ್ಯವನ್ನು ಅಂಗೀಕರಿಸಿ ನಮ್ಮನ್ನೂ ಕರ್ತ ಯೇಸುವನ್ನೂ ಅನುಸರಿಸುವವರಾಗಿದ್ದೀರಿ.
7ಹೀಗೆ ಮಕೆದೋನ್ಯ ಹಾಗೂ ಅಖಾಯದ ವಿಶ್ವಾಸಿಗಳೆಲ್ಲರಿಗೂ ನೀವು ಆದರ್ಶರಾದಿರಿ.
8ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯ ಹಾಗೂ ಅಖಾಯದಲ್ಲಿ ಘೋಷಿತವಾದದ್ದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಹರಡಿತು. ಆದ್ದರಿಂದ ಇದನ್ನು ಕುರಿತು ನಾವು ಹೇಳಬೇಕಾದ ಅವಶ್ಯ ಏನೂ ಇಲ್ಲ.
9ಏಕೆಂದರೆ ನೀವು ನಮ್ಮನ್ನು ಹೇಗೆ ಸ್ವೀಕರಿಸಿದ್ದಿರೆಂಬುದನ್ನೂ ನೀವು ಹೇಗೆ ದೇವರಲ್ಲದವುಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಜೀವವುಳ್ಳ ಸತ್ಯದೇವರನ್ನು ಸೇವಿಸುವವರಾದಿರೆಂಬುದನ್ನೂ ಅವರು ತಾವೇ ವಿವರಿಸುತ್ತಾರೆ.
10ಇದಲ್ಲದೆ, ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ತಮ್ಮ ಪುತ್ರರಾಗಿರುವ ಯೇಸು ಮುಂದೆ ಬರುವ ಕೋಪದಿಂದ ನಮ್ಮನ್ನು ಬಿಡಿಸುವವರೂ ಆಗಿದ್ದಾರೆ. ಈ ಯೇಸುವನ್ನೇ ಪರಲೋಕದಿಂದ ಬರುವುದನ್ನು ನೀವು ಎದುರು ನೋಡುತ್ತಿದ್ದೀರಿ ಎಂಬುದನ್ನೂ ಅವರು ನಮಗೆ ವಿವರಿಸಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.