
ಪರಮಗೀತೆ 8
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಸ್ತ್ರೀಯು ಬಹಿರಂಗವಾಗಿ ಗೌರವಿಸಬಹುದಾದ ಪ್ರೀತಿಯನ್ನು ಬಯಸಿ, ಹೃದಯದ ಮೇಲೂ ತೋಳಿನ ಮೇಲೂ ಮುದ್ರೆಯಾಗಿ ಇಡಲ್ಪಡಲು ಕೇಳುತ್ತಾಳೆ. ಪ್ರೀತಿಯು ಉಗ್ರವಾದದ್ದು, ಪ್ರವಾಹಗಳಿಂದ ಆರಿಸಲಾಗದ್ದು ಮತ್ತು ಕೊಳ್ಳಲಾಗದ್ದು. ಪ್ರೌಢತೆ ಮತ್ತು ದ್ರಾಕ್ಷಿತೋಟಗಳ ಪ್ರಶ್ನೆಗಳು ವೈಯಕ್ತಿಕ ಸ್ವಾಯತ್ತತೆ, ಗಮನದ ಸಹವಾಸ ಮತ್ತು ಪ್ರಿಯನಿಗೆ ಕೊನೆಯ ಕರೆಯಲ್ಲಿ ಪರಿಹಾರಗೊಳ್ಳುತ್ತವೆ.
ಒಡಂಬಡಿಕೆಯ ಪ್ರೀತಿಬಲನಂಬಿಗಸ್ತಿಕೆಸ್ವಾಯತ್ತತೆಹಂಬಲ
1ನೀನು ನನ್ನ ತಾಯಿಯ ಹಾಲು ಕುಡಿದ ನನ್ನ ಅಣ್ಣನಾಗಿದ್ದರೆ, ಎಷ್ಟೋ ಚೆನ್ನಾಗಿರುತ್ತಿತ್ತು! ನಾನು ನಿನ್ನನ್ನು ಕಂಡು ಹೊರಗೆಯೇ ನಿನಗೆ ಮುದ್ದಿಡುತ್ತಿದ್ದೆ. ಆಗ ಯಾರೂ ನನ್ನನ್ನು ನಿಂದಿಸುತ್ತಿರಲಿಲ್ಲ.
2ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು. ಅಲ್ಲಿ ನೀನು ನನಗೆ ಉಪದೇಶ ಮಾಡಬಹುದಾಗಿತ್ತು. ನಾನು ದ್ರಾಕ್ಷಿ ಮಿಶ್ರಪಾನಕವನ್ನು ಕೊಡುತ್ತಿದ್ದೆನು. ದಾಳಿಂಬೆ ರಸವನ್ನು ನಿನಗೆ ಕುಡಿಸುತ್ತಿದ್ದೆನು.
3ನಿನ್ನ ಎಡಗೈ ನನ್ನ ತಲೆದಿಂಬಾಗಿರಲಿ. ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳಲಿ.
4ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ, ಎಚ್ಚರಿಸಲೂ ಬೇಡಿರಿ ಎಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
5ತನ್ನ ಪ್ರಿಯನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಪ್ರಿಯತಮೆ ಸೇಬುಗಿಡದ ಕೆಳಗೆ ನಿನ್ನನ್ನು ಪ್ರೇರಿಸಿದೆನು. ಅದು ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ ಸ್ಥಳ. ಅಲ್ಲಿ ನಿನ್ನ ತಾಯಿ ಪ್ರಸವವೇದನೆಯಿಂದ ನಿನ್ನನ್ನು ಹಡೆದಳು.
6ನನ್ನನ್ನು ನಿನ್ನ ಹೃದಯದ ಮೇಲೆ ಒಂದು ಮುದ್ರೆಯಾಗಿ ಧರಿಸಿಕೋ. ನಾನು ನಿನ್ನ ಕೈಮೇಲೆ ಒಂದು ಮುದ್ರೆಯಾಗಿರುವೆ. ಪ್ರೀತಿಯು ಮರಣದಷ್ಟು ಬಲವಾಗಿದೆ. ಮತ್ಸರವು ಸಮಾಧಿಯಷ್ಟು ಕ್ರೂರ. ಪ್ರೀತಿಯು ಉರಿಯುವ ಬೆಂಕಿ ಪ್ರಜ್ವಲಿಸುವ ಜ್ವಾಲೆಯ ಹಾಗಿರುವುದು.
7ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು. ಪ್ರವಾಹಗಳು ಸಹ ಪ್ರೀತಿಯನ್ನು ಮುಳುಗಿಸಲಾರವು. ಒಬ್ಬನು ತನ್ನ ಆಸ್ತಿಯನ್ನೆಲ್ಲಾ ಪ್ರೀತಿಗೋಸ್ಕರ ಕೊಟ್ಟರೂ, ಆ ಪ್ರೀತಿಗೆ ಬದಲಾಗಿ ಅಂಥವನಿಗೆ ಸಂಪೂರ್ಣ ನಿಂದೆಯೇ ಸಿಗುವುದು.
8ಪ್ರಾಯಕ್ಕೆ ಬಾರದ ತಂಗಿ ಒಬ್ಬಳು ನಮಗಿದ್ದಾಳೆ. ಅವಳನ್ನು ಮದುವೆಗಾಗಿ ಮಾತಾಡಲು ಯಾರಾದರೂ ಬಂದರೆ, ನಾವೇನು ಮಾಡೋಣ?
9ಅವಳು ಗೋಡೆಯಾದರೆ, ನಾವು ಅವಳ ಮೇಲೆ ಬೆಳ್ಳಿಯ ಗೋಪುರವನ್ನು ಕಟ್ಟುವೆವು. ಅವಳು ಬಾಗಿಲಾದರೆ, ದೇವದಾರು ಹಲಿಗೆಗಳಿಂದ ಅವಳನ್ನು ಭದ್ರಪಡಿಸುವೆವು.
10ನಾನು ಗೋಡೆಯಂಥವಳೇ, ನನ್ನ ಯೌವನವು ಬುರುಜುಗಳು. ಹೀಗೆ ನಾನು ಅವನ ದೃಷ್ಟಿಯಲ್ಲಿ ಸಮಾಧಾನ ಹೊಂದುವೆನು.
11ಸೊಲೊಮೋನನಿಗೆ ಬಾಳ್ ಹಾಮೋನಿನಲ್ಲಿ ಒಂದು ದ್ರಾಕ್ಷಿತೋಟ ಇತ್ತು. ಅವನು ಆ ದ್ರಾಕ್ಷಿತೋಟವನ್ನು ರೈತರಿಗೆ ಗುತ್ತಿಗೆಗೆ ಕೊಟ್ಟನು. ಪ್ರತಿಯೊಬ್ಬ ಗುತ್ತಿಗೆಗಾರನು ಅದರ ಫಲದಿಂದ ಸಾವಿರ ಬೆಳ್ಳಿಯ ನಾಣ್ಯಗಳನ್ನು ತರಬೇಕಾಗಿತ್ತು.
12ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯಗಳು ನಿನಗೇ ಇರಲಿ. ತೋಟದ ಫಲವನ್ನು ಕಾಪಾಡುವವರಿಗೆ ಇನ್ನೂರು ಬೆಳ್ಳಿನಾಣ್ಯಗಳು ಸೇರಲಿ. ಆದರೆ ನನ್ನ ದ್ರಾಕ್ಷಿತೋಟ ನನಗೇ ಇರಲಿ.
13ತೋಟಗಳಲ್ಲಿ ವಾಸವಾಗಿರುವಳೇ, ಸ್ನೇಹಿತರು ನನ್ನ ಸಂಗಡ ಇದ್ದಾರೆ. ನಾನು ನಿನ್ನ ಧ್ವನಿಯನ್ನು ಕೇಳ ಮಾಡು!
14ನನ್ನ ಪ್ರಿಯನೇ, ಸುಗಂಧ ಸಸ್ಯ ಪರ್ವತಗಳ ಮೇಲಿರುವ ಜಿಂಕೆಯಂತೆಯೂ, ಪ್ರಾಯದ ಹುಲ್ಲೆಯಂತೆಯೂ ನೀನು ಬೇಗ ಬಾ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.