
ಪರಮಗೀತೆ 7
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಪ್ರಿಯನು ಕುಶಲಕರ್ಮ, ಹೊಲಗಳು, ಗೋಪುರಗಳು, ಖರ್ಜೂರದ ಮರಗಳು, ಹಣ್ಣು ಮತ್ತು ದ್ರಾಕ್ಷಾರಸದ ಚಿತ್ರಗಳಿಂದ ಸ್ತ್ರೀಯ ಸೌಂದರ್ಯವನ್ನು ಕೊಂಡಾಡುತ್ತಾನೆ. ತಾನು ಅವನಿಗೆ ಸೇರಿದವಳೆಂದು ಅವಳು ಭರವಸೆಯಿಂದ ದೃಢಪಡಿಸಿ ಅವನ ಬಯಕೆಯನ್ನು ಸ್ವೀಕರಿಸುತ್ತಾಳೆ. ಒಟ್ಟಾಗಿ ಅವರು ಪ್ರೀತಿಯನ್ನು ಹಂಚಿಕೊಳ್ಳುವ ಸ್ಥಳವಾಗಿ ಹಳ್ಳಿಗಾಡು, ಗ್ರಾಮಗಳು, ದ್ರಾಕ್ಷಿತೋಟಗಳು ಮತ್ತು ಹೂವುಗಳನ್ನು ಆರಿಸಿಕೊಳ್ಳುತ್ತಾರೆ.
ಪರಸ್ಪರ ಬಯಕೆಸೌಂದರ್ಯಸೇರುವಿಕೆಫಲಭರಿತತೆಹಂಚಿಕೊಂಡ ಪ್ರಯಾಣ
1ಓ ರಾಜಪುತ್ರಿಯೇ! ಕೆರಗಳನ್ನು ಮೆಟ್ಟಿರುವ ನಿನ್ನ ಪಾದಗಳು ಎಷ್ಟು ಸುಂದರವಾಗಿವೆ! ನಿನ್ನ ಅಂದದ ಕಾಲುಗಳು ಶಿಲ್ಪಿಯ ಕೈಕೆಲಸದ ಆಭರಣಗಳಂತಿವೆ.
2ನಿನ್ನ ಹೊಕ್ಕಳು ಮಿಶ್ರಪಾನಕ ತುಂಬಿದ ದುಂಡು ಬಟ್ಟಲಿನ ಹಾಗಿದೆ. ನಿನ್ನ ಹೊಟ್ಟೆ ನೆಲದಾವರೆಗಳಿಂದ ಸುತ್ತಿಕೊಂಡಿರುವ ಹೂವುಗಳು ಸುತ್ತಿಕೊಂಡಿರುವ ಗೋಧಿಯ ರಾಶಿಯಾಗಿದೆ.
3ನಿನ್ನ ಸ್ತನಗಳೆರಡೂ ಹುಲ್ಲೆಯ ಅವಳಿಮರಿಗಳ ಹಾಗಿವೆ.
4ನಿನ್ನ ಕೊರಳು ದಂತದ ಗೋಪುರ. ನಿನ್ನ ಕಣ್ಣುಗಳು ಬತ್ ರಬ್ಬೀಮ್ ಬಾಗಿಲ ಬಳಿಯಲ್ಲಿರುವ ಹೆಷ್ಬೋನಿನ ಕೊಳಗಳು. ನಿನ್ನ ಮೂಗು, ದಮಸ್ಕದ ಕಡೆಗಿರುವ ಲೆಬನೋನಿನ ಗೋಪುರದ ಹಾಗಿದೆ.
5ನಿನ್ನ ತಲೆಯು ಕರ್ಮೆಲ್ ಬೆಟ್ಟದಂತೆ ವೈಭವ. ನಿನ್ನ ತಲೆಕೂದಲು ಧೂಮ್ರ ಬಣ್ಣದ ಹಾಗೆ ಇದೆ. ಹೆಣೆದ ಆ ಜಡೆಯಿಂದ ಅರಸನಿಗೂ ಆಕರ್ಷಣ.
6ನನ್ನ ಪ್ರೇಮವೇ, ನೀನು ನಿನ್ನ ಹರ್ಷದಿಂದ ಎಷ್ಟೋ ಸುಂದರಿಯೂ ಎಷ್ಟೋ ಮನೋಹರಳೂ ಆಗಿರುವೆ.
7ನಿನ್ನ ನೀಳ ಆಕಾರವು ಖರ್ಜೂರ ಮರದಂತಿದೆ. ನಿನ್ನ ಸ್ತನಗಳು ಅದರ ಗೊಂಚಲುಗಳು.
8ನಾನು, “ಆ ಖರ್ಜೂರದ ಮರವನ್ನು ಹತ್ತಿ ಅದರ ಗರಿಗಳನ್ನು ಹಿಡಿಯುವೆ,” ಎಂದುಕೊಂಡೆನು. ನಿನ್ನ ಸ್ತನಗಳು ದ್ರಾಕ್ಷಿ ಗೊಂಚಲುಗಳಂತಿರಲಿ, ನಿನ್ನ ಉಸಿರು ಸೇಬು ಹಣ್ಣಿನ ಪರಿಮಳದಂತೆಯೂ ಇರಲಿ.
9ನಿನ್ನ ಬಾಯಿಯ ಮುದ್ದುಗಳು ಉತ್ತಮ ದ್ರಾಕ್ಷಾರಸದ ಹಾಗಿರಲಿ. ಪ್ರಿಯತಮೆ ನನ್ನ ಪ್ರಿಯಕರನ ತುಟಿ, ಹಲ್ಲುಗಳಲ್ಲಿ ದ್ರಾಕ್ಷಾರಸವು ನೇರವಾಗಿ ಹರಿದು ಇಂಪಾಗಿ ರುಚಿಸಲಿ.
10ನಾನು ನನ್ನ ಪ್ರಿಯನವಳು. ಅವನ ಆಸೆಯು ನನ್ನ ಕಡೆಗಿರುವುದು.
11ನನ್ನ ಪ್ರಿಯನೇ, ಬಾ ಹೋಗೋಣ. ನಾವು ಗ್ರಾಮಗಳಲ್ಲಿ ವಸತಿಯಾಗಿರೋಣ ಬಾ.
12ನಾವು ಬೆಳಗ್ಗೆ ಹೊರಟು, ದ್ರಾಕ್ಷಿ ತೋಟಗಳಿಗೆ ಹೋಗೋಣ ಬಾ. ದ್ರಾಕ್ಷಿ ಚಿಗುರಿದೆಯೋ, ಅದರ ಹೂ ಅರಳಿದೆಯೋ ದಾಳಿಂಬೆ ಹೂಬಿಟ್ಟಿದೆಯೋ ನೋಡೋಣ ಬಾ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಅರ್ಪಿಸುವೆನು.
13ನನ್ನ ಪ್ರಿಯನೇ, ಕಾಮಜನಕ ವೃಕ್ಷಗಳು ಪರಿಮಳ ಬೀರುತ್ತಿವೆ. ನಮ್ಮ ಬಾಗಿಲ ಬಳಿಯಲ್ಲಿ ನಿನಗೋಸ್ಕರ ನಾನು ರುಚಿಯುಳ್ಳ ಮಾಗಿದ ಹೊಸ ಹಣ್ಣುಗಳನ್ನು ಸಿದ್ಧಪಡಿಸಿದ್ದೇನೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.