
ಕೀರ್ತನೆಗಳು 88
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 88 ಮರಣದ ಸಮೀಪವಿರುವ, ಮುಳುಗಿದ, ಏಕಾಂಗಿಯಾದ ಮತ್ತು ಉತ್ತರವಿಲ್ಲದಂತೆ ತೋರುವವನ ಉಪಶಮನವಿಲ್ಲದ ಪ್ರಲಾಪ. ಕಾಣುವ ಪರಿಹಾರವಿಲ್ಲದಿದ್ದರೂ, ಬಾಧಿತನು ಹಗಲೂ ರಾತ್ರಿಯೂ ದೇವರನ್ನು ಸಂಬೋಧಿಸುತ್ತಲೇ ಇರುತ್ತಾನೆ, ನಿರಂತರ ಪ್ರಾರ್ಥನೆಯನ್ನು ಕೊನೆಯ ಕಾರ್ಯವಾಗಿಸುತ್ತಾನೆ.
ಪ್ರಲಾಪಏಕಾಂಗಿತನಬಾಧೆಪ್ರಾರ್ಥನೆ
1ನನ್ನನ್ನು ರಕ್ಷಿಸುವ ದೇವರಾದ ಯೆಹೋವ ದೇವರೇ, ಹಗಲಿರುಳು ನಿಮ್ಮ ಮುಂದೆ ಮೊರೆಯಿಡುತ್ತೇನೆ.
2ನನ್ನ ಪ್ರಾರ್ಥನೆಯು ನಿಮ್ಮ ಮುಂದೆ ಬರಲಿ. ನನ್ನ ಮೊರೆಗೆ ನಿಮ್ಮ ಕಿವಿಕೊಡಿರಿ.
3ನನ್ನ ಪ್ರಾಣವು ಕಷ್ಟದಿಂದ ತುಂಬಿದೆ; ನನ್ನ ಜೀವವು ಸಮಾಧಿಯ ಸಮೀಪಕ್ಕೆ ಎಳೆಯುತ್ತದೆ.
4ಸಮಾಧಿ ಸೇರುವವರ ಸಂಗಡ ಎಣಿಸಲಾಗಿದ್ದೇನೆ; ನಾನು ಬಲವಿಲ್ಲದ ಪುರುಷನ ಹಾಗಿದ್ದೇನೆ.
5ಹತರಾದವರು ಸಮಾಧಿಯಲ್ಲಿ ಮಲಗಿದಂತೆ ನಾನೂ ಸತ್ತವರೊಂದಿಗೆ ಸೇರಿರುತ್ತೇನೆ. ಅವರನ್ನು ನೀನೆಂದೂ ಜ್ಞಾಪಿಸಿಕೊಳ್ಳುವುದಿಲ್ಲ. ನಿಮ್ಮ ಪರಿಪಾಲನೆಯಿಂದ ದೂರವಾಗಿದ್ದಾರೆ.
6ಅಧೋಲೋಕದಲ್ಲಿಯೂ ಗಾಡಾಂಧಕಾರದಲ್ಲಿಯೂ ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದೀರಿ.
7ನಿಮ್ಮ ಬೇಸರವು ನನ್ನ ಮೇಲೆ ಭಾರವಾಗಿದೆ. ನಿಮ್ಮ ಅಲೆಗಳಿಂದೆಲ್ಲಾ ನನ್ನನ್ನು ಮುಳುಗಿಸಿದ್ದೀರಿ.
8ನನ್ನ ಪರಿಚಿತರನ್ನು ನನ್ನಿಂದ ದೂರಮಾಡಿದ್ದೀರಿ. ನಾನು ಅವರಿಗೆ ಬೇಡವಾಗಿದ್ದೇನೆ. ನಾನು ಬಂಧಿತನಾಗಿದ್ದೇನೆ, ಹೊರಗೆ ಬರಲಾರೆನು.
9ಬಾಧೆಯ ದೆಸೆಯಿಂದ ನನ್ನ ಕಣ್ಣು ಮಂದವಾಗಿ ಹೋಗಿದೆ. ಯೆಹೋವ ದೇವರೇ, ದಿನವೆಲ್ಲಾ ನಿಮ್ಮನ್ನು ಕರೆಯುತ್ತೇನೆ. ನಾನು ನಿಮ್ಮ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ.
10ಸತ್ತವರಿಗೆ ಅದ್ಭುತಗಳನ್ನು ತೋರಿಸುವಿರೋ? ಸತ್ತವರು ಎದ್ದು ನಿಮ್ಮನ್ನು ಕೊಂಡಾಡುವರೋ?
11ಸಮಾಧಿಯಲ್ಲಿ ನಿಮ್ಮ ಪ್ರೀತಿ ಸಾರಲಾಗುವುದೇ? ನಾಶನ ಸ್ಥಳದಲ್ಲಿ ನಿಮ್ಮ ನಂಬಿಗಸ್ತಿಕೆಯು ಹೇಳಲಾಗುವುದೋ?
12ಕತ್ತಲೆಯಲ್ಲಿ ನಿಮ್ಮ ಅದ್ಭುತಗಳೂ ಮರೆತುಹೋಗಿರುವ ದೇಶದಲ್ಲಿ ನಿಮ್ಮ ನೀತಿಯೂ ತಿಳಿಯಲಾಗುವುದೋ?
13ಆದರೆ ನಾನು ಯೆಹೋವ ದೇವರೇ, ನಿಮ್ಮ ಕಡೆಗೆ ಮೊರೆಯಿಡುತ್ತೇನೆ. ಉದಯಕಾಲದಲ್ಲಿ ನನ್ನ ಪ್ರಾರ್ಥನೆಯು ನಿಮ್ಮನ್ನು ಎದುರುಗೊಳ್ಳುವುದು.
14ಯೆಹೋವ ದೇವರೇ, ನೀವೇಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ. ನನಗೆ ನಿಮ್ಮ ಮುಖ ಮರೆಮಾಡುತ್ತೀರಿ?
15ಬಾಲ್ಯದಿಂದಲೂ ನಾನು ಬಾಧಿತನು ಸಾಯುವುದಕ್ಕೆ ಸಿದ್ಧನೂ ಆಗಿದ್ದೇನೆ. ನಿಮ್ಮ ದಂಡನೆಯನ್ನು ನಾನು ತಾಳುತ್ತಾ ಭ್ರಮೆಗೊಳ್ಳುತ್ತೇನೆ.
16ನನ್ನ ಮೇಲೆ ನಿಮ್ಮ ಬೇಸರವು ಆವರಿಸಿದೆ. ನಿಮ್ಮ ದಂಡನೆಗಳು ನನ್ನನ್ನು ಬಾಧಿಸಿರುತ್ತವೆ.
17ಪ್ರವಾಹಗಳ ಹಾಗೆ ಅವು ಬಂದು ನನ್ನನ್ನು ದಿನವೆಲ್ಲಾ ಸುತ್ತಿಕೊಳ್ಳುತ್ತವೆ; ಅವು ಸಂಪೂರ್ಣವಾಗಿ ನನ್ನನ್ನು ಮುತ್ತಿಕೊಳ್ಳುತ್ತವೆ.
18ನನ್ನ ಆಪ್ತಮಿತ್ರರನ್ನು ದೂರ ಮಾಡಿದಿರಿ. ಅಂಧಕಾರವೇ ನನ್ನ ಪರಿಚಯವು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.