
ಕೀರ್ತನೆಗಳು 66
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 66 ಮಹತ್ತಾದ ವಿಮೋಚನೆಗೆ ಸಾಕ್ಷಿಯಾಗುವಂತೆ ಇಡೀ ಭೂಮಿಯನ್ನು ಕರೆಯುತ್ತದೆ. ಸಮುದಾಯವು ನೀರನ್ನು ದಾಟಿದ್ದನ್ನು, ಶುದ್ಧೀಕರಿಸುವ ಬೆಂಕಿಯನ್ನೂ ಒತ್ತುವ ಭಾರಗಳನ್ನೂ ಸಹಿಸಿದ್ದನ್ನು, ನಂತರ ಸಮೃದ್ಧಿಗೆ ಪ್ರವೇಶಿಸಿದ್ದನ್ನು ನೆನಪಿಸಿಕೊಳ್ಳುತ್ತದೆ; ಒಬ್ಬ ವ್ಯಕ್ತಿಯು ಹರಕೆಗಳಿಂದಲೂ ಉತ್ತರಿಸಲ್ಪಟ್ಟ ಪ್ರಾರ್ಥನೆಯ ವೈಯಕ್ತಿಕ ಸಾಕ್ಷಿಯಿಂದಲೂ ಸ್ತುತಿಯನ್ನು ಪೂರ್ಣಗೊಳಿಸುತ್ತಾನೆ.
ವಿಮೋಚನೆಪರೀಕ್ಷೆಸಾಕ್ಷಿಸ್ತುತಿ
1ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹಧ್ವನಿ ಮಾಡಿರಿ.
2ದೇವರ ಹೆಸರಿನ ಮಹಿಮೆಯನ್ನು ಕೊಂಡಾಡಿರಿ. ದೇವರ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.
3ನೀವು ದೇವರಿಗೆ, “ನಿಮ್ಮ ಕೃತ್ಯಗಳು ಅತಿಶಯವಾದವುಗಳಾಗಿವೆ. ನಿಮ್ಮ ಶತ್ರುಗಳು ನಿಮ್ಮೆದುರಿನಲ್ಲಿ ಮುದುರಿ ಬೀಳುವಷ್ಟು ನಿಮ್ಮ ಶಕ್ತಿ ದೊಡ್ಡದಾಗಿದೆ.
4ಭೂಮಿಯೆಲ್ಲಾ ನಿಮ್ಮನ್ನು ಆರಾಧಿಸುವುದು. ನಿಮ್ಮನ್ನು ಕೀರ್ತಿಸುತ್ತಾ ಲೋಕವು ನಿಮ್ಮ ನಾಮವನ್ನು ಕೀರ್ತಿಸುತ್ತಿರುವುದು,” ಎಂದು ಹೇಳಿರಿ.
5ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ. ಮಾನವರ ಪರವಾಗಿ ಮಾಡಿರುವ ದೇವರ ಕಾರ್ಯಗಳು ಅತಿಶಯವಾಗಿವೆ.
6ದೇವರು ಸಮುದ್ರವನ್ನು ಒಣ ಭೂಮಿಯನ್ನಾಗಿ ಮಾಡಿದರು. ಜನರು ಕಾಲಿನಿಂದ ನದಿಯನ್ನು ದಾಟಿದರು. ಬನ್ನಿರಿ, ದೇವರಲ್ಲಿ ಆನಂದಿಸೋಣ.
7ದೇವರು ತಮ್ಮ ಶಕ್ತಿಯಿಂದ ಎಂದೆಂದಿಗೂ ಆಳುವವರಾಗಿದ್ದಾರೆ. ದೇವರ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ದೇವರಿಗೆ ವಿರೋಧವಾಗಿ ದಂಗೆಕೋರರು ಏಳದಿರಲಿ.
8ಸಮಸ್ತ ಜನರೇ, ನೀವು ನಮ್ಮ ದೇವರನ್ನು ಸ್ತುತಿಸಿರಿ. ದೇವರನ್ನು ಸ್ತುತಿಸುವ ಶಬ್ದವು ಕೇಳಿಸಲಿ.
9ದೇವರು ನಮ್ಮ ಜೀವನವನ್ನು ಕಾಪಾಡಿ, ನಮ್ಮ ಕಾಲು ಎಡವದಂತೆ ಮಾಡಿದ್ದಾರೆ.
10ದೇವರೇ, ನೀವು ನಮ್ಮನ್ನು ಪರಿಶೋಧಿಸಿದ್ದೀರಿ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶುದ್ಧೀಕರಿಸಿದ್ದೀರಿ.
11ನೀವು ಬಲೆಯೊಳಗೆ ನಮ್ಮನ್ನು ಸಿಕ್ಕಿಸಿದ್ದೀರಿ. ನಮ್ಮ ಬೆನ್ನಿನ ಮೇಲೆ ಭಾರವನ್ನು ಹೊರಿಸಿದ್ದೀರಿ.
12ಮನುಷ್ಯರು ನಮ್ಮ ತಲೆ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀರಿ. ನಾವು ಬೆಂಕಿಯನ್ನೂ ನೀರನ್ನೂ ದಾಟುವಂತೆ ಮಾಡಿದ್ದೀರಿ. ಆದರೆ ನೀವು ನಮ್ಮನ್ನು ಸಮೃದ್ಧಿಯ ಸ್ಥಳದೊಳಗೆ ಬರಮಾಡಿದ್ದೀರಿ.
13ನಾನು ದಹನಬಲಿಯೊಂದಿಗೆ ನಿಮ್ಮ ಆಲಯಕ್ಕೆ ಬರುವೆನು.
14ನನ್ನ ಇಕ್ಕಟ್ಟಿನಲ್ಲಿ ತುಟಿ ಬಿಚ್ಚಿ ನನ್ನ ಬಾಯಿಂದ ನುಡಿದ ನನ್ನ ಹರಕೆಗಳನ್ನು ನಾನು ನಿಮಗೆ ಸಲ್ಲಿಸುವೆನು.
15ಕೊಬ್ಬಿದ ದಹನಬಲಿಗಳನ್ನು ಕಾಣಿಕೆಯಾಗಿ ಟಗರುಗಳನ್ನು; ಹೋತ ಹೋರಿಗಳ ಯಜ್ಞವನ್ನು ಅರ್ಪಿಸುವೆನು.
16ಸಮಸ್ತ ದೇವಭಕ್ತರೇ, ಬಂದು ಕೇಳಿರಿ. ದೇವರು ನನಗೆ ಮಾಡಿದ್ದನ್ನು ನಾನು ನಿಮಗೆ ತಿಳಿಸುವೆನು.
17ನನ್ನ ದೇವರಿಗೆ ಮೊರೆಯಿಟ್ಟೆನು, ನನ್ನ ನಾಲಿಗೆಯಲ್ಲಿ ದೇವರ ಸ್ತೋತ್ರವಿತ್ತು.
18ಪಾಪವನ್ನು ನಾನು ನನ್ನ ಹೃದಯದಲ್ಲಿ ಬೆಳೆಸಿಕೊಂಡಿದ್ದರೆ, ಯೆಹೋವ ದೇವರು ನನ್ನ ಪ್ರಾರ್ಥನೆಯನ್ನು ಕೇಳುತ್ತಿರಲಿಲ್ಲ.
19ಆದರೆ ಈಗ ನಿಜವಾಗಿ ನನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾರೆ.
20ನನ್ನ ಪ್ರಾರ್ಥನೆಯನ್ನು ತಿರಸ್ಕರಿಸದ ದೇವರಿಗೆ ಸ್ತೋತ್ರವಾಗಲಿ. ತಮ್ಮ ಪ್ರೀತಿಯನ್ನು ನನ್ನಿಂದ ತೊಲಗಿಸದೆ ಇರುವೆ. ದೇವರಿಗೆ ಸ್ತೋತ್ರವಾಗಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.