
ಕೀರ್ತನೆಗಳು 64
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 64 ಗುಪ್ತ ಒಳಸಂಚುಗಳಿಂದಲೂ ಬಾಣಗಳಂತೆ ಹರಿತಗೊಳಿಸಿದ ಕ್ರೂರ ಮಾತಿನಿಂದಲೂ ರಕ್ಷಣೆಯನ್ನು ಕೇಳುತ್ತದೆ. ದುಷ್ಟರು ತಮ್ಮ ಬಲೆಗಳು ಕಾಣುವುದಿಲ್ಲ ಎಂದು ಭಾವಿಸುತ್ತಾರೆ, ಆದರೂ ನ್ಯಾಯ ಬಂದಾಗ ಅವರ ಸ್ವಂತ ಮಾತುಗಳೇ ಅವರನ್ನು ಬಯಲಿಗೆ ತರುತ್ತವೆ, ಯಥಾರ್ಥರು ಸಂತೋಷಪಟ್ಟು ಆಶ್ರಯ ಪಡೆಯುತ್ತಾರೆ.
ರಕ್ಷಣೆನ್ಯಾಯಒಳಸಂಚುಆಶ್ರಯ
1ದೇವರೇ, ನನ್ನ ದೂರುಗಳನ್ನು ನಿಮ್ಮ ಮುಂದಿಡುವಾಗ ನನ್ನ ಬಿನ್ನಹವನ್ನು ಕೇಳಿರಿ. ಶತ್ರುವಿನ ಹೆದರಿಕೆಯಿಂದ ನನ್ನ ಜೀವವನ್ನು ಕಾಪಾಡಿರಿ.
2ದುರ್ಮಾರ್ಗಿಗಳ ಗುಪ್ತ ಆಲೋಚನೆಗಳಿಗೂ, ದುಷ್ಟರ ಒಳಸಂಚಿಗೂ ನನ್ನನ್ನು ಮರೆಮಾಡಿರಿ.
3ಅವರು ತಮ್ಮ ನಾಲಿಗೆಯನ್ನು ಖಡ್ಗದಂತೆ ಮಸೆಯುತ್ತಾರೆ.
4ನಿರ್ದೋಷಿಯ ಕಡೆಗೆ ಕಹಿಮಾತುಗಳನ್ನು ಬಾಣದಂತೆ ಗುರಿಯಿಟ್ಟಿದ್ದಾರೆ. ಅಂಜದೆ ಫಕ್ಕನೆ ಅವನ ಕಡೆಗೆ ಎಸೆಯುತ್ತಾರೆ.
5ತಮ್ಮೊಳಗೆ ಕೇಡನ್ನು ಪ್ರೋತ್ಸಾಹ ಮಾಡುತ್ತಾರೆ. ರಹಸ್ಯವಾಗಿ ಬಲೆಗಳನ್ನು ಒಡ್ಡುವುದಕ್ಕೆ ಮಾತನಾಡುತ್ತಾ, “ನಮ್ಮನ್ನು ಕಾಣುವವರು ಯಾರು?” ಎಂದುಕೊಳ್ಳುತ್ತಾರೆ.
6ಅವರು ಅನ್ಯಾಯಗಳನ್ನು ಕಲ್ಪಿಸಿ, “ನಾವು ಒಳ್ಳೇ ಉಪಾಯವನ್ನು ಮಾಡಿದ್ದೇವೆ,” ಅಂದುಕೊಳ್ಳುತ್ತಾರೆ. ನಿಶ್ಚಯವಾಗಿ ಮಾನವರ ಆಂತರ್ಯವೂ ಹೃದಯವೂ ಕುಯುಕ್ತಿಯಿಂದ ಕೂಡಿದೆ.
7ಆದರೆ ದೇವರು ಅವರ ಬಾಣದಿಂದಲೇ, ಫಕ್ಕನೆ ಅವರಿಗೆ ಗಾಯಗಳಾಗುವಂತೆ ಅನುಮತಿಸುವರು.
8ಹೀಗೆ ಅವರು ತಮ್ಮ ನಾಲಿಗೆಯಿಂದ ತಾವೇ ಎಡವಿ ಬೀಳುವಂತೆ ಮಾಡಿಕೊಳ್ಳುವರು. ಅವರನ್ನು ಕಾಣುವವರೆಲ್ಲರೂ ತಲೆಯಾಡಿಸಿ ಅಣಕಿಸುವರು.
9ಎಲ್ಲಾ ಮನುಷ್ಯರೂ ಭಯಪಟ್ಟು ದೇವರ ಕಾರ್ಯಗಳನ್ನು ಸಾರುವರು. ದೇವರು ಮಾಡಿದವುಗಳನ್ನು ಆಲೋಚಿಸಿಕೊಳ್ಳುವರು.
10ನೀತಿವಂತರು ಯೆಹೋವ ದೇವರಲ್ಲಿ ಆನಂದಪಟ್ಟು ದೇವರನ್ನೇ ಆಶ್ರಯಿಸಿಕೊಳ್ಳುವರು. ಸರಳ ಹೃದಯದವರೆಲ್ಲರೂ ದೇವರನ್ನು ಮಹಿಮೆಪಡಿಸುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.