
ಕೀರ್ತನೆಗಳು 63
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 63 ಒಣ ಅರಣ್ಯದಲ್ಲಿನ ದೇಹದ ಬಾಯಾರಿಕೆಯನ್ನು ದೇವರಿಗಾಗಿ ತೀವ್ರ ಹಂಬಲವಾಗಿ ಪರಿವರ್ತಿಸುತ್ತದೆ. ನೆನಪಿಸಿಕೊಂಡ ಪವಿತ್ರಸ್ಥಳದ ಮಹಿಮೆ, ಮಧ್ಯರಾತ್ರಿಯ ಧ್ಯಾನ ಮತ್ತು ಆಸರೆ ನೀಡುವ ಆರೈಕೆಯು ಆರಾಧಕನನ್ನು ಸಮೃದ್ಧಿಗಿಂತ ಆಳವಾಗಿ ತೃಪ್ತಿಪಡಿಸಿ ಆನಂದದ ಸ್ತುತಿಯನ್ನು ಎಬ್ಬಿಸುತ್ತವೆ.
ಹಂಬಲಆರಾಧನೆತೃಪ್ತಿರಕ್ಷಣೆ
1ದೇವರೇ, ನನ್ನ ದೇವರು ನೀವೇ, ನಿಮ್ಮನ್ನು ಕುತೂಹಲದಿಂದ ಹುಡುಕುತ್ತಿದ್ದೇನೆ. ನಾನು ನಿಮಗಾಗಿ ದಾಹಗೊಂಡಿದ್ದೇನೆ. ನೀರಿಲ್ಲದೆ ಭೂಮಿಯಲ್ಲಿದ್ದವನು ಹೇಗೆ ನೀರಿಗಾಗಿ ಹಾತೊರೆವಂತೆ ನನ್ನ ಇಡೀ ಸರ್ವಸ್ವವೂ ನಿಮಗಾಗಿ ದಾಹಗೊಂಡಿರುತ್ತದೆ. ನಾನು ನಿಮ್ಮನ್ನೇ ಅಪೇಕ್ಷಿಸುತ್ತಿದ್ದೇನೆ.
2ನಾನು ನಿಮ್ಮ ಶಕ್ತಿಯನ್ನೂ ನಿಮ್ಮ ಮಹಿಮೆಯನ್ನೂ ಪರಿಶುದ್ಧ ಸ್ಥಳದಲ್ಲಿ ಕಂಡಿದ್ದೇನೆ. ಹೌದು, ನಾನು ನಿಮ್ಮನ್ನೇ ದೃಷ್ಟಿಸಿದ್ದೇನೆ.
3ನಿಮ್ಮ ಪ್ರೀತಿಯು ಜೀವಕ್ಕಿಂತ ಶ್ರೇಷ್ಠವಾದದ್ದು. ನನ್ನ ತುಟಿ ನಿಮ್ಮನ್ನು ಮಹಿಮೆಪಡಿಸುವುದು.
4ನಾನು ಜೀವಿಸುವ ಕಾಲವೆಲ್ಲಾ ನಿಮ್ಮನ್ನೇ ಸ್ತುತಿಸುವೆನು. ನಿಮ್ಮ ಹೆಸರಿನಲ್ಲಿ ನಾನು ನನ್ನ ಕೈ ಮುಗಿಯುವೆನು.
5ಮೃಷ್ಟ ಭೋಜನದಿಂದಲೋ ಎಂಬಂತೆ ನಾನು ನಿಮ್ಮಲ್ಲಿ ಸಂತೃಪ್ತನಾಗಿದ್ದೇನೆ. ಉತ್ಸಾಹದ ತುಟಿಗಳಿಂದ ನನ್ನ ಬಾಯಿಯು ನಿಮ್ಮನ್ನು ಸ್ತುತಿಸುವುದು.
6ನನ್ನ ಹಾಸಿಗೆಯ ಮೇಲೆ ನಿಮ್ಮನ್ನು ಸ್ಮರಿಸುವಾಗ ರಾತ್ರಿಯ ಜಾವಗಳಲ್ಲಿ ನಿಮ್ಮನ್ನು ಧ್ಯಾನಿಸುತ್ತಿರುವೆನು.
7ಏಕೆಂದರೆ ನೀವೇ ನನಗೆ ಸಹಾಯಕರಾಗಿದ್ದೀರಿ. ನಿಮ್ಮ ರೆಕ್ಕೆಗಳ ನೆರಳಿನಲ್ಲಿ ಹಾಡುತ್ತಿರುವೆನು.
8ನನ್ನ ಪ್ರಾಣವು ನಿಮ್ಮನ್ನು ಆತುಕೊಂಡಿದೆ. ನಿಮ್ಮ ಬಲಗೈ ನನಗೆ ಬೆಂಬಲವಾಗಿದೆ.
9ನನ್ನ ಪ್ರಾಣಕ್ಕೆ ಕೇಡು ಬಯಸುವವರು ತಾವೇ ನಾಶವಾಗುವರು ಅವರು ಭೂಮಿಯ ಆಳಕ್ಕೆ ಹೋಗುವರು.
10ಖಡ್ಗದಿಂದ ಅವರು ಬೀಳುವರು. ನರಿಗಳಿಗೆ ಆಹಾರವಾಗುವರು.
11ಆದರೆ ಅರಸನು ದೇವರಲ್ಲಿ ಸಂತೋಷಿಸುವನು. ದೇವರ ಪ್ರತಿಜ್ಞೆ ಹೊಂದಿದವರು ದೇವರನ್ನು ಮಹಿಮೆಪಡಿಸುವರು. ಆದರೆ ಸುಳ್ಳಾಡುವವರ ಬಾಯಿ ಮುಚ್ಚಿಹೋಗುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.