
ಕೀರ್ತನೆಗಳು 59
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 59 ದಾವೀದನ ಮನೆಯನ್ನು ಕಾಯುವ ಶಸ್ತ್ರಧಾರಿಗಳನ್ನು, ಅಲೆಯುವ ನಾಯಿಗಳಂತೆ ಸುತ್ತುವ ನಿಂದೆಯನ್ನು ಮತ್ತು ಪ್ರತಿ ಸಂಜೆ ಮರಳುವ ಅಪಾಯವನ್ನು ವರ್ಣಿಸುತ್ತದೆ. ಈ ಪ್ರಾರ್ಥನೆಯು ವೈಯಕ್ತಿಕ ಸೇಡನ್ನು ವಿರೋಧಿಸಿ, ಸಾರ್ವಜನಿಕ ಬಯಲಾಟವನ್ನು ಬಯಸಿ, ಉದಯದಲ್ಲಿ ಸ್ಥಿರ ಆಶ್ರಯದ ಬಗ್ಗೆ ಹಾಡುತ್ತದೆ.
ಕಣ್ಗಾವಲುನಿಂದೆಆಶ್ರಯಸ್ಥಿರ ಪ್ರೀತಿ
1ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸಿರಿ. ನನಗೆ ವಿರೋಧವಾಗಿ ಎದ್ದವರಿಂದ ನನ್ನನ್ನು ರಕ್ಷಿಸಿರಿ
2ಕೆಡುಕನ್ನು ಮಾಡುವವರಿಂದ ನನ್ನನ್ನು ಬಿಡಿಸಿರಿ. ಕೊಲೆಪಾತಕರಿಂದ ನನ್ನನ್ನು ರಕ್ಷಿಸಿರಿ.
3ಇಗೋ, ನನ್ನ ಪ್ರಾಣಕ್ಕೆ ಅವರು ಒಳಸಂಚುಮಾಡುತ್ತಾರೆ. ಕ್ರೂರರು ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ. ಯೆಹೋವ ದೇವರೇ, ನನ್ನಲ್ಲಿ ಅಪರಾಧವಿಲ್ಲ, ನಾನು ಯಾವ ತಪ್ಪೂ ಮಾಡಿಲ್ಲ.
4ನನ್ನಲ್ಲಿ ತಪ್ಪು ಇಲ್ಲದಿದ್ದರೂ ಅವರು ಹಾನಿಮಾಡಲು ಸಿದ್ಧರಾಗಿದ್ದಾರೆ. ನನ್ನ ಅವಸ್ಥೆಯನ್ನು ನೋಡಿರಿ, ನನಗೆ ಸಹಾಯ ಮಾಡುವುದಕ್ಕೆ ಸಿದ್ಧರಾಗಿರಿ.
5ಸರ್ವಶಕ್ತರಾದ ಯೆಹೋವ ದೇವರೇ, ಇಸ್ರಾಯೇಲರ ದೇವರೇ, ನೀವು ಎಲ್ಲಾ ಜನಾಂಗಗಳನ್ನು ನ್ಯಾಯತೀರಿಸುವುದಕ್ಕೆ ಎಚ್ಚರವಾಗಿರಿ. ದುಷ್ಟ ಅಪರಾಧಿಗಳಲ್ಲಿ ಯಾರಿಗೂ ದಯೆಸಿಗದಿರಲಿ.
6ಅವರು ಸಂಜೆಗೆ ಹಿಂದಿರುಗುವರು. ನಾಯಿಯ ಹಾಗೆ ಬೊಗಳುವರು. ಪಟ್ಟಣವನ್ನು ಸುತ್ತುವರು.
7ಇಗೋ, ತಮ್ಮ ಬಾಯಿಂದ ಬೊಗಳುತ್ತಾರೆ. ಅವರ ತುಟಿಗಳಲ್ಲಿ ಖಡ್ಗಗಳು ಇವೆ. ಅವರು, “ನಮ್ಮನ್ನು ಕೇಳುವವರು ಯಾರು?” ಎಂದು ಅಂದುಕೊಳ್ಳುತ್ತಾರೆ.
8ಆದರೆ ಯೆಹೋವ ದೇವರೇ, ನೀವು ಅವರನ್ನು ನೋಡಿ ನಗುವಿರಿ. ಇತರ ಜನಾಂಗವೆಲ್ಲ ಅಪಹಾಸ್ಯಕ್ಕಿಡಾಗಲಿ.
9ದೇವರೇ, ನನ್ನ ಬಲವೇ, ನಿಮಗಾಗಿ ಕಾದುಕೊಂಡಿರುವೆನು. ನನ್ನ ದೇವರೇ, ನೀವು ನನ್ನ ಕೋಟೆಯಾಗಿರುವಿರಿ.
10ದೇವರು ಪ್ರಸನ್ನರಾಗಿ ನನ್ನ ಮುಂದೆ ಹೋಗುವರು. ದೇವರು ನನ್ನ ನಿಂದಕರ ಮೇಲೆ ಜಯಿಸುವಂತೆ ಮಾಡುವರು.
11ನಮ್ಮ ಗುರಾಣಿಯಾಗಿರುವ ಯೆಹೋವ ದೇವರೇ, ನನ್ನ ಜನರು ಮರೆಯದ ಹಾಗೆ ಅವರು ಉಳಿದಿರಲಿ. ನಿಮ್ಮ ಪರಾಕ್ರಮದಿಂದ ಅವರನ್ನು ದಂಡಿಸಿರಿ.
12ಅವರ ಬಾಯಿಯ ಪಾಪಕ್ಕೂ, ಅವರ ತುಟಿಗಳ ಮಾತಿಗೂ, ಅವರು ನುಡಿಯುವ ಶಾಪಕ್ಕೂ ಅವರ ಗರ್ವವೇ ಅವರನ್ನು ಹಿಡಿಯಲಿ.
13ಅವರು ದಂಡನೆಗೆ ತುತ್ತಾಗಲಿ. ಅವರು ನಿರ್ನಾಮವಾಗಿಬಿಡಲಿ. ಆಗ ಯಾಕೋಬರನ್ನು ಆಳುವವರು ದೇವರೇ ಎಂಬುದು ಇಡೀ ಲೋಕಕ್ಕೇ ಗೊತ್ತಾಗಲಿ.
14ಅವರು ಸಂಜೆಗೆ ಹಿಂದಿರುಗುವರು. ನಾಯಿಯ ಹಾಗೆ ಬೊಗಳುವರು. ಪಟ್ಟಣವನ್ನು ಸುತ್ತುವರು.
15ಅವರು ಆಹಾರಕ್ಕಾಗಿ ಅಲೆದಾಡುವರು. ತೃಪ್ತಿಯಾಗದಿದ್ದರೆ ಗೊಣಗುಟ್ಟುವರು.
16ಆದರೆ ನಾನು ನಿಮ್ಮ ಬಲವನ್ನು ಕುರಿತು ಹಾಡುವೆನು. ಹೌದು, ಮುಂಜಾನೆ ನಿಮ್ಮ ಪ್ರೀತಿಯ ಕುರಿತು ಹಾಡುವೆನು. ಏಕೆಂದರೆ ನೀವು ನನಗೆ ಭದ್ರಕೋಟೆಯೂ, ನನ್ನ ಇಕ್ಕಟ್ಟಿನಲ್ಲಿ ಆಶ್ರಯವಾಗಿಯೂ ಇದ್ದೀರಿ.
17ನನ್ನ ಬಲವಾಗಿರುವವರೇ, ನಿಮ್ಮನ್ನು ಕೊಂಡಾಡುವೆನು. ಏಕೆಂದರೆ ದೇವರೇ, ನೀವು ನನ್ನ ಭದ್ರಕೋಟೆ ಆಗಿದ್ದೀರಿ. ನೀವು ನಾನು ಭರವಸೆ ಇಡುವ ಕರುಣೆಯುಳ್ಳ ದೇವರೂ ಆಗಿದ್ದೀರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.