
ಕೀರ್ತನೆಗಳು 48
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 48 ದೈವಿಕ ಸಾನ್ನಿಧ್ಯ ಮತ್ತು ಸ್ಥಿರ ಪ್ರೀತಿಯ ಮೂಲಕ ಪ್ರಸಿದ್ಧವಾದ ಸುಂದರ, ಸುರಕ್ಷಿತ ಪಟ್ಟಣವಾಗಿ ಚೀಯೋನನ್ನು ಸ್ತುತಿಸುತ್ತದೆ. ಮುಂದಿನ ತಲೆಮಾರುಗಳು ರಕ್ಷಣೆಯನ್ನೂ ಜೀವನಪರ್ಯಂತ ಮಾರ್ಗದರ್ಶನವನ್ನೂ ನೆನಪಿಸಿಕೊಳ್ಳುವಂತೆ ಆರಾಧಕರು ಗೋಪುರಗಳನ್ನೂ ಕೋಟೆಗಳನ್ನೂ ಪರಿಶೀಲಿಸುತ್ತಾರೆ.
ಚೀಯೋನ್ಭದ್ರತೆನೆನಪುಮಾರ್ಗದರ್ಶನ
1ಯೆಹೋವ ದೇವರು ಮಹೋನ್ನತರೂ ನಮ್ಮ ದೇವರು ತಮ್ಮ ಪರಿಶುದ್ಧ ಪರ್ವತ ಪಟ್ಟಣದಲ್ಲಿ ಬಹಳವಾಗಿ ಸ್ತುತಿಗೆ ಪಾತ್ರರಾಗಿದ್ದಾರೆ.
2ಉತ್ತರ ದಿಕ್ಕಿನಲ್ಲಿರುವ ಮಹಾರಾಜರ ಪಟ್ಟಣವಾದ ಚೀಯೋನ್ ಪರ್ವತವು ಸುಂದರವಾಗಿ ಚಾಪೋನಿನ ಶಿಖರದಂತೆ ಇಡೀ ಭೂಮಿಗೆ ಸಂತೋಷಕರವಾದದ್ದಾಗಿದೆ.
3ದೇವರು ಅದರ ಅರಮನೆಗಳಲ್ಲಿ ವಾಸಿಸುತ್ತಾರೆ. ದೇವರು ತಾವೇ ಅದರ ಭದ್ರಕೋಟೆಯಾಗಿದ್ದಾರೆ.
4ಏಕೆಂದರೆ, ಇಗೋ, ಅರಸರು ಕೂಡಿಬಂದರು. ಅವರು ಒಟ್ಟಾಗಿ ದಾಳಿಮಾಡಲು ಬಂದರು.
5ಅವರು ಪಟ್ಟಣವನ್ನು ಕಂಡು, ಬೆರಗಾದರು. ಅವರು ಭಯಪಟ್ಟು ಓಡಿಹೋದರು.
6ಅಲ್ಲಿ ನಡುಕವವೂ ಹೆರುವವಳ ಹಾಗೆ ನೋವೂ ಅವರನ್ನು ಹಿಡಿಯಿತು.
7ಪೂರ್ವದಿಕ್ಕಿನ ಗಾಳಿಯಿಂದ ತಾರ್ಷೀಷ್ ಹಡಗುಗಳನ್ನು ನೀವು ಒಡೆಯುತ್ತೀರಲ್ಲಾ.
8ನಾವು ಹೇಗೆ ಕೇಳಿದೆವೋ ಹಾಗೆಯೇ ಕಣ್ಣಾರೆ ಕಂಡೆವು, ಸೇನಾಧೀಶ್ವರ ಯೆಹೋವ ದೇವರ ಪಟ್ಟಣವಾಗಿರುವ, ನಮ್ಮ ದೇವರ ಪಟ್ಟಣದಲ್ಲಿ ಇದನ್ನು ಕಂಡೆವು: ದೇವರು ಪಟ್ಟಣವನ್ನು ಎಂದೆಂದಿಗೂ ಸ್ಥಿರಪಡಿಸುವರು.
9ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯನ್ನು ನಿಮ್ಮ ಮಂದಿರದಲ್ಲಿ ನಾವು ಸ್ಮರಿಸುತ್ತೇವೆ.
10ದೇವರೇ, ನಿಮ್ಮ ಹೆಸರಿಗೆ ತಕ್ಕಂತೆಯೇ ನಿಮ್ಮ ಸ್ತೋತ್ರವು ಭೂಮಿಯ ಕಟ್ಟಕಡೆಯವರೆಗೂ ಇದೆ; ನಿಮ್ಮ ಬಲಗೈ ನೀತಿಯಿಂದ ತುಂಬಿದೆ.
11ನಿಮ್ಮ ನ್ಯಾಯ ನಿರ್ಣಯಗಳ ನಿಮಿತ್ತ ಚೀಯೋನ್ ಪರ್ವತವು ಸಂತೋಷಪಡಲಿ; ಯೆಹೂದ ಪುತ್ರಿಯರು ಉಲ್ಲಾಸಪಡಲಿ.
12ಚೀಯೋನನ್ನು ಸುತ್ತಿ ಅದರ ಸುತ್ತಲೂ ತಿರುಗಾಡಿ ಅದರ ಗೋಪುರಗಳನ್ನು ಎಣಿಸಿರಿ.
13ಮುಂದಿನ ತಲಾಂತರಕ್ಕೆ ತಿಳಿಸುವುದಕ್ಕೋಸ್ಕರ ಅದರ ಗೋಪುರಗಳನ್ನು ಕಣ್ಣಿಟ್ಟು ನೋಡಿರಿ, ಅದರ ಅರಮನೆಗಳನ್ನು ಲಕ್ಷಿಸಿರಿ.
14ಏಕೆಂದರೆ, ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವರಾಗಿದ್ದಾರೆ; ಅವರು ಅಂತ್ಯದವರೆಗೂ ನಮ್ಮ ಮಾರ್ಗದರ್ಶಿಯಾಗಿರುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.