An exile and thirsty deer stand by turbulent water looking toward distant Jerusalem worship

ಕೀರ್ತನೆಗಳು 42

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 42 ಆತ್ಮಿಕ ಹಂಬಲವನ್ನು ಒಣ ನಾಡಿನಲ್ಲಿ ಜಿಂಕೆಯ ಬಾಯಾರಿಕೆಗೆ ಹೋಲಿಸುತ್ತದೆ. ಕಣ್ಣೀರು, ನಿಂದೆಗಳು, ನೆನಪಿಸಿಕೊಂಡ ಹಬ್ಬಗಳು, ಗರ್ಜಿಸುವ ಜಲಪಾತಗಳು ಮತ್ತು ಒಳಗಿನ ಕಳವಳಕ್ಕೆ ಮತ್ತೆ ನಿರೀಕ್ಷಿಸಿ ಸ್ತುತಿಸುವಂತೆ ಆತ್ಮಕ್ಕೆ ನೀಡುವ ಕರೆಯಿಂದ ಪದೇ ಪದೇ ಉತ್ತರಿಸಲಾಗುತ್ತದೆ.
ಹಂಬಲದೇಶಭ್ರಷ್ಟತೆಪ್ರಲಾಪನಿರೀಕ್ಷೆ
1ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವುದೋ, ಹಾಗೆಯೇ ನನ್ನ ಪ್ರಾಣವು ನಿಮ್ಮನ್ನು ಬಯಸುತ್ತದೆ.
2ದೇವರಿಗೋಸ್ಕರ ಹೌದು ಜೀವವುಳ್ಳ ದೇವರಿಗೋಸ್ಕರ ನನ್ನ ಪ್ರಾಣವು ದಾಹಗೊಳ್ಳುತ್ತದೆ. ನಾನು ಯಾವಾಗ ಹೋಗಿ ದೇವರ ಮುಂದೆ ಕಾಣಿಸಿಕೊಳ್ಳಲಿ?
3“ನಿನ್ನ ದೇವರು ಎಲ್ಲಿ?” ಎಂದು ಜನರು, ದಿನವೆಲ್ಲಾ ನನ್ನನ್ನು ಕೇಳುವುದರಿಂದ ಹಗಲುರಾತ್ರಿ ನನ್ನ ಕಣ್ಣೀರೇ ನನಗೆ ಆಹಾರವಾಗಿದೆ.
4ಜನಸಮೂಹದೊಂದಿಗೆ ನಾನು ಉತ್ಸಾಹದಿಂದಲೂ ಸ್ತೋತ್ರದಿಂದಲೂ ಹಬ್ಬವನ್ನಾಚರಿಸಲು ದೇವರ ಆಲಯಕ್ಕೆ ಹೋಗಿದ್ದನ್ನು ನೆನಪಿಸಿಕೊಳ್ಳುತ್ತಾ ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು.
5ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ? ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ? ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ. ಹೌದು, ನಾನು ದೇವರನ್ನೇ ಕೊಂಡಾಡುತ್ತಿರುವೆನು.
6ನನ್ನ ದೇವರೇ, ನನ್ನ ಪ್ರಾಣವು ನನ್ನಲ್ಲಿ ಕುಗ್ಗಿಹೋಗಿದೆ; ಆದ್ದರಿಂದ ಯೊರ್ದನ್ ನಾಡಿನಿಂದಲೂ ಹೆರ್ಮೋನ್ ಬೆಟ್ಟಗಳಿಂದಲೂ ಮಿಸಾರ್ ಬೆಟ್ಟದಿಂದಲೂ ನಿಮ್ಮನ್ನು ಜ್ಞಾಪಕಮಾಡಿಕೊಳ್ಳುತ್ತೇನೆ.
7ನಿಮ್ಮ ಜಲಪಾತಗಳ ಶಬ್ದವು ಒಂದು ಪ್ರವಾಹವು ಮತ್ತೊಂದು ಪ್ರವಾಹಕ್ಕೆ ಕರೆಯುವಂತಿದೆ. ಅದರಂತೆಯೇ ನಿಮ್ಮ ಎಲ್ಲಾ ಅಲೆಗಳೂ ತೆರೆಗಳೂ ನನ್ನ ಮೇಲೆ ಹಾದು ಹೋದಂತಿವೆ.
8ಆದರೂ ಹಗಲಿನಲ್ಲಿ ಯೆಹೋವ ದೇವರು ತಮ್ಮ ಪ್ರೀತಿಯನ್ನು ಆಜ್ಞಾಪಿಸುವರು. ರಾತ್ರಿಯಲ್ಲಿ ದೇವರ ಹಾಡನ್ನು ಹಾಡುವೆನು. ನನ್ನ ಜೀವವಾಗಿರುವ ದೇವರಿಗೆ ನಾನು ಪ್ರಾರ್ಥನೆ ಮಾಡುವೆನು.
9“ದೇವರೇ, ಏಕೆ ನನ್ನನ್ನು ಮರೆತುಬಿಟ್ಟಿದ್ದೀರಿ? ಏಕೆ ನಾನು ಶತ್ರುವಿನ ಬಾಧೆಪೀಡಿತನಾಗಿ ದುಃಖದಲ್ಲಿ ಸಾಗಬೇಕು?” ಎಂದು ನನ್ನ ಶರಣನಾದ ದೇವರಿಗೆ ಮೊರೆಯಿಡುವೆನು.
10“ನಿನ್ನ ದೇವರು ಎಲ್ಲಿ?” ಎಂದು ದಿನವೆಲ್ಲಾ ನನಗೆ ಹೇಳಿ ನನ್ನ ವೈರಿಗಳು ಅಪಹಾಸ್ಯ ಮಾಡುವುದರಿಂದ ನನ್ನ ಎಲಬುಗಳೆಲ್ಲಾ ಮುರಿದುಹೊದಂತೆ ಇವೆ.
11ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ? ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ? ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ. ಹೌದು, ನಾನು ದೇವರನ್ನೇ ಕೊಂಡಾಡುತ್ತಿರುವೆನು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.