Family and friends support a sick man while a former companion whispers with enemies outside

ಕೀರ್ತನೆಗಳು 41

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 41 ದುರ್ಬಲರನ್ನು ಗಮನಿಸುವವರನ್ನು ಆಶೀರ್ವದಿಸಿ, ನಂತರ ರೋಗ, ಅಪರಾಧಪ್ರಜ್ಞೆ, ವೈರಿಗಳ ಊಹೆ ಮತ್ತು ಆಪ್ತರ ದ್ರೋಹದಿಂದ ಮಾತನಾಡುತ್ತದೆ. ಬಾಧಿತನು ಯಥಾರ್ಥತೆಯು ಎತ್ತಿಹಿಡಿಯಲ್ಪಡುವುದು ಎಂದು ನಂಬುತ್ತಾ ಕರುಣೆಯನ್ನೂ ಪುನಃಸ್ಥಾಪನೆಯನ್ನೂ ಕೇಳುತ್ತಾನೆ.
ಕರುಣೆರೋಗದ್ರೋಹಪುನಃಸ್ಥಾಪನೆ
1ಬಡವರನ್ನು ಪರಾಮರಿಸುವವರು ಧನ್ಯರು; ಕೇಡಿನ ಸಮಯದಲ್ಲಿ ಯೆಹೋವ ದೇವರು ಅವರನ್ನು ತಪ್ಪಿಸುವರು.
2ಯೆಹೋವ ದೇವರು ಅವರನ್ನು ಕಾಪಾಡಿ ಸುರಕ್ಷಿತವಾಗಿಡುವರು; ಅವರು ಭೂಮಿಯಲ್ಲಿ ಧನ್ಯರಾಗಿರುವರು; ದೇವರು ಅವರ ಶತ್ರುಗಳ ಇಚ್ಛೆಗೆ ಅವರನ್ನು ಒಪ್ಪಿಸಿಕೊಡರು.
3ಬಡವರನ್ನು ಪರಾಮರಿಸುವವರನ್ನು ಯೆಹೋವ ದೇವರು ವ್ಯಾಧಿಯ ಮಂಚದಲ್ಲಿ ಬಲಪಡಿಸುವರು; ಅವರ ಅಸ್ವಸ್ಥತೆಯನ್ನು ಯೆಹೋವ ದೇವರು ಹೋಗಲಾಡಿಸಿ ಮರುಸ್ಥಾಪಿಸುವರು.
4“ಯೆಹೋವ ದೇವರೇ, ನನಗೆ ಕರುಣೆ ತೋರಿಸಿ ನನ್ನನ್ನು ಸ್ವಸ್ಥಮಾಡಿರಿ, ಏಕೆಂದರೆ ನಿಮಗೆ ವಿರೋಧವಾಗಿ ಪಾಪಮಾಡಿದ್ದೇನೆ,” ಎಂದು ನಾನು ಹೇಳಿ ಬೇಡುವೆನು.
5“ಅವನು ಸತ್ತು ಅವನ ಹೆಸರು ನಾಶವಾಗುವುದು ಯಾವಾಗ?” ಎಂದು ನನ್ನ ಶತ್ರುಗಳು ನನ್ನ ಕೇಡನ್ನು ಬಯಸಿ ಮಾತನಾಡುತ್ತಾರೆ.
6ನನ್ನನ್ನು ನೋಡುವುದಕ್ಕೆ ಅವರಲ್ಲಿ ಒಬ್ಬನು ಬಂದರೆ, ಕಪಟವಾಗಿ ಮಾತನಾಡುತ್ತಾನೆ. ಅವನ ಹೃದಯ ಕೇಡನ್ನು ಕೂಡಿಟ್ಟುಕೊಳ್ಳುತ್ತಿದೆ. ಅವನು ಹೊರಗೆ ಹೋದ ಮೇಲೆ ಕೇಡನ್ನು ಹಬ್ಬಿಸುತ್ತಾನೆ.
7ನನ್ನ ಶತ್ರುಗಳೆಲ್ಲರೂ ಸೇರಿ ನನ್ನ ಮೇಲೆ ಪಿಸುಗುಟ್ಟುತ್ತಾರೆ; ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತಾರೆ.
8“ಕೆಟ್ಟ ರೋಗವು ಅವನನ್ನು ಹಿಡಿದಿದೆ, ಈಗ ಅವನು ಹಾಸಿಗೆ ಹಿಡಿದಿದ್ದಾನೆ ಎಂದಿಗೂ ಏಳುವುದಿಲ್ಲ,” ಎಂದು ಹೇಳಿಕೊಳ್ಳುತ್ತಾರೆ.
9ನನ್ನ ರೊಟ್ಟಿಯನ್ನು ತಿಂದವನೂ ನಾನು ನಂಬಿದ್ದವನೂ ಆಗಿರುವ ನನ್ನ ಆಪ್ತ ಸ್ನೇಹಿತನು ಸಹ ನನಗೆ ವಿರೋಧವಾಗಿ ತನ್ನ ಕಾಲನ್ನು ಎತ್ತಿದ್ದಾನೆ.
10ಆದರೆ ಯೆಹೋವ ದೇವರೇ, ನೀವು ನನ್ನನ್ನು ಕರುಣಿಸಿ ನಾನು ಏಳುವಂತೆ ಮಾಡಿರಿ. ನಾನು ಅವರಿಗೆ ಮುಯ್ಯಿಗೆ ಮುಯ್ಯಿತೀರಿಸುವೆನು.
11ನನ್ನ ಶತ್ರು ನನ್ನ ಮೇಲೆ ಜಯ ಹೊಂದದೆ ಇರುವುದರಿಂದಲೇ, ನೀವು ನನ್ನನ್ನು ಮೆಚ್ಚಿದ್ದೀರಿ ಎಂದು ನಾನು ತಿಳಿದುಕೊಳ್ಳುವೆ.
12ಆದರೆ ನೀವು ನನ್ನ ಪ್ರಾಮಾಣಿಕತೆಯ ಕಾರಣ ನನ್ನನ್ನು ಎತ್ತಿ ಹಿಡಿದಿರುವಿರಿ; ನೀವು ನನ್ನನ್ನು ನಿತ್ಯವಾಗಿ ನಿಮ್ಮ ಸಮ್ಮುಖದಲ್ಲಿ ಇರಿಸುವಿರಿ.
13ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರಿಗೆ, ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಆಮೆನ್.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.