
ಕೀರ್ತನೆಗಳು 28
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 28 ಉತ್ತರವಿಲ್ಲದ ಮೌನಕ್ಕೆ ಭಯಪಟ್ಟು, ಮೋಸಗಾರ ದುಷ್ಟರ ಗತಿಯನ್ನು ಹಂಚಿಕೊಳ್ಳದಂತೆ ಕೇಳುತ್ತದೆ. ಬಲ, ರಕ್ಷಣೆ ಮತ್ತು ಇಡೀ ಜನರಿಗಾಗಿ ಕುರುಬನಂಥ ಆರೈಕೆ ಖಚಿತವಾದಾಗ ಬೇಡಿಕೆಯು ಕೃತಜ್ಞತೆಗೆ ತಿರುಗುತ್ತದೆ.
ವಿಜ್ಞಾಪನೆಬಲರಕ್ಷಣೆಸ್ತುತಿ
1ಯೆಹೋವ ದೇವರೇ, ನೀವು ನನಗೆ ಸಂರಕ್ಷಿಸುವ ಬಂಡೆಯಾಗಿದ್ದೀರಿ. ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ಮೌನವಾಗಿರಬೇಡಿರಿ; ನೀವು ಸುಮ್ಮನಿದ್ದರೆ ನಾನು ಸಮಾಧಿಯಲ್ಲಿದ್ದವನಿಗೆ ಸಮಾನನಾಗುವೆನು.
2ನಾನು ನಿಮಗೆ ಮೊರೆಯಿಡುವಾಗ, ನನ್ನ ಕೈಗಳನ್ನು ನಿಮ್ಮ ಮಹಾಪರಿಶುದ್ಧ ಸ್ಥಳದ ಕಡೆಗೆ ಎತ್ತುವಾಗ ನನ್ನ ವಿಜ್ಞಾಪನೆಯನ್ನು ಲಾಲಿಸಿರಿ.
3ದುಷ್ಟರ ಸಂಗಡವೂ ಅಪರಾಧ ಮಾಡುವವರ ಸಂಗಡವೂ ನನ್ನನ್ನು ಎಳೆಯಬೇಡಿರಿ; ಅವರು ತಮ್ಮ ನೆರೆಯವರೊಂದಿಗೆ ಸಮಾಧಾನವಾಗಿ ಮಾತನಾಡುತ್ತಾರೆ; ಆದರೆ ಕೇಡು ಅವರ ಹೃದಯದಲ್ಲಿ ಇದೆ.
4ಅವರ ಕೃತ್ಯಗಳ ಪ್ರಕಾರವಾಗಿಯೂ, ಅವರ ಕೆಟ್ಟತನಗಳ ಪ್ರಕಾರವಾಗಿಯೂ ಅವರಿಗೆ ಪ್ರತಿಫಲಕೊಡಿರಿ; ಅವರ ಕೈಕೃತ್ಯಗಳ ಪ್ರಕಾರವಾಗಿ ಅವರಿಗೆ ಕೊಡಿರಿ, ಅರ್ಹತೆಗೆ ತಕ್ಕಂತೆಯೇ ಅವರಿಗೆ ಬರಮಾಡಿರಿ.
5ಅವರು ಯೆಹೋವ ದೇವರ ಕೃತ್ಯಗಳನ್ನೂ, ಅವರ ಕೈಗಳ ಕೆಲಸವನ್ನೂ ಲಕ್ಷಿಸುವುದಿಲ್ಲ; ಆದ್ದರಿಂದ ದೇವರು ಅವರನ್ನು ವೃದ್ಧಿಗೊಳಿಸದೆ ದಂಡಿಸುವರು.
6ಯೆಹೋವ ದೇವರಿಗೆ ಸ್ತುತಿಯುಂಟಾಗಲಿ; ಕರುಣೆಗಾಗಿ ನನ್ನ ಮೊರೆಯನ್ನು ಅವರು ಕೇಳಿದ್ದಾರೆ.
7ಯೆಹೋವ ದೇವರು ನನ್ನ ಬಲವೂ, ನನ್ನ ಗುರಾಣಿಯೂ ಆಗಿದ್ದಾರೆ; ನನ್ನ ಹೃದಯವು ಅವರಲ್ಲಿ ಭರವಸೆ ಇಟ್ಟದ್ದರಿಂದ ನಾನು ಸಹಾಯ ಹೊಂದಿದೆನು; ನನ್ನ ಹೃದಯವು ಬಹಳವಾಗಿ ಉತ್ಸಾಹಪಡುವುದು; ನನ್ನ ಕೀರ್ತನೆಯಿಂದ ಅವರನ್ನು ಕೊಂಡಾಡುವೆನು.
8ಯೆಹೋವ ದೇವರು ತಮ್ಮ ಜನರಿಗೆ ಬಲವಾಗಿದ್ದಾರೆ; ತಮ್ಮ ಅಭಿಷಿಕ್ತನಿಗೆ ರಕ್ಷಣೆಯ ಕೋಟೆ ಆಗಿದ್ದಾರೆ.
9ನಿಮ್ಮ ಜನರನ್ನು ರಕ್ಷಿಸಿರಿ; ನಿಮ್ಮ ವಾರಸುದಾರರನ್ನು ಆಶೀರ್ವದಿಸಿರಿ; ನೀವು ಅವರ ಕುರುಬ ಆಗಿದ್ದು; ಅವರನ್ನು ಯಾವಾಗಲೂ ಮುನ್ನಡೆಸಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.