
ಕೀರ್ತನೆಗಳು 27
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 27 ಧೈರ್ಯವನ್ನೂ ದುರ್ಬಲತೆಯನ್ನೂ ಒಟ್ಟಿಗೆ ಹಿಡಿದಿಡುತ್ತದೆ. ಬೆಳಕೂ ಬಲವಾದ ಆಶ್ರಯವೂ ಭಯವನ್ನು ಶಾಂತಗೊಳಿಸುತ್ತವೆ, ಮತ್ತು ಆರಾಧನೆಯಲ್ಲಿ ಸೌಂದರ್ಯವನ್ನೂ ಮಾರ್ಗದರ್ಶನವನ್ನೂ ಹುಡುಕುವ ಒಂದೇ ಬಯಕೆಯು ತಿರಸ್ಕಾರ ಮತ್ತು ಬೆದರಿಕೆಯ ಮೂಲಕ ತಾಳ್ಮೆಯ, ಧೈರ್ಯದ, ಸ್ಥಿರ ಕಾಯುವಿಕೆಯನ್ನು ಪೋಷಿಸುತ್ತದೆ.
ಧೈರ್ಯಆರಾಧನೆಮಾರ್ಗದರ್ಶನಕಾಯುವಿಕೆ
1ಯೆಹೋವ ದೇವರು ನನ್ನ ಬೆಳಕೂ ನನ್ನ ರಕ್ಷಣೆಯೂ ಆಗಿದ್ದಾರೆ. ನಾನು ಯಾರಿಗೂ ಭಯಪಡೆನು? ಯೆಹೋವ ದೇವರು ನನ್ನ ಜೀವದ ಭದ್ರಾಶ್ರಯವಾಗಿದ್ದಾರೆ. ನಾನು ಯಾರಿಗೂ ಹೆದರೆನು?
2ದುಷ್ಟರು ನನ್ನನ್ನು ಬೀಳಿಸಬೇಕೆಂದು ನನಗೆ ವಿರೋಧವಾಗಿ ಸಮೀಪಿಸುವಾಗ, ನನ್ನ ವೈರಿಗಳು ತಾವೇ ಎಡವಿಬಿದ್ದರು.
3ನನಗೆ ವಿರೋಧವಾಗಿ ಇಳಿದರೂ ನನ್ನ ಹೃದಯವು ಭಯಪಡದು; ನನ್ನ ಮೇಲೆ ಯುದ್ಧ ಸೈನ್ಯವು ನಡೆದರೂ ನಾನು ಭರವಸೆಯಿಂದಿರುವೆನು.
4ಯೆಹೋವ ದೇವರ ಮನೆಯಲ್ಲಿ ನಾನು ಜೀವಮಾನವೆಲ್ಲಾ ವಾಸಮಾಡುತ್ತಾ, ಅದರ ದಯೆಯನ್ನು ನೋಡುತ್ತಾ ಅವರ ಮಂದಿರದಲ್ಲಿ ಅವರನ್ನೇ ಧ್ಯಾನಿಸುತ್ತಾ ಇರಬೇಕೆಂಬ ಒಂದೇ ವರವನ್ನು ಯೆಹೋವ ದೇವರಿಂದ ಕೇಳಿಕೊಂಡು ಅದನ್ನೇ ಹುಡುಕುತ್ತಿರುವೆನು.
5ಕೇಡಿನ ಸಮಯದಲ್ಲಿ ಯೆಹೋವ ದೇವರು ನನ್ನನ್ನು ತಮ್ಮ ಗುಡಾರದಲ್ಲಿ ಬಚ್ಚಿಡುವರು. ತಮ್ಮ ಪರಿಶುದ್ಧ ಗುಡಾರದಲ್ಲಿ ನನ್ನನ್ನು ಮರೆಮಾಡುವರು. ಎತ್ತರವಾದ ಬಂಡೆಯ ಮೇಲೆ ನನ್ನನ್ನು ನಿಲ್ಲಿಸುವರು.
6ಈಗ ನನ್ನ ತಲೆಯು ನನ್ನ ಸುತ್ತಲಿರುವ ನನ್ನ ಶತ್ರುಗಳ ಮೇಲೆ ಎತ್ತಲಾಗಿರುವುದು, ಆದ್ದರಿಂದ ದೇವರ ಗುಡಾರದಲ್ಲಿ ಉತ್ಸಾಹದಿಂದ ಬಲಿಗಳನ್ನು ಅರ್ಪಿಸುವೆನು; ಯೆಹೋವ ದೇವರಿಗೆ ಹಾಡಿ ಕೊಂಡಾಡುವೆನು.
7ಯೆಹೋವ ದೇವರೇ, ನಾನು ಕೂಗುವ ಸ್ವರವನ್ನು ಕೇಳಿರಿ; ನನ್ನನ್ನು ಕರುಣಿಸಿ ಉತ್ತರವನ್ನು ಕೊಡಿರಿ.
8ನಿಮ್ಮ ಬಗ್ಗೆ ನನ್ನ ಹೃದಯವು ಹೀಗೆ ಹೇಳುತ್ತದೆ: “ದೇವರ ಮುಖವನ್ನು ಹುಡುಕು,” ಆದ್ದರಿಂದ ಯೆಹೋವ ದೇವರೇ, ನಿಮ್ಮ ಮುಖವನ್ನೇ ಹುಡುಕುತ್ತಿರುವೆನು.
9ನಿಮ್ಮ ಮುಖವನ್ನು ನನಗೆ ಮರೆಮಾಡಬೇಡಿರಿ; ನಿಮ್ಮ ಸೇವಕನಾದ ನನ್ನನ್ನು ತಳ್ಳಬೇಡಿರಿ; ನೀವೇ ನನಗೆ ಸಹಾಯಕರಾಗಿದ್ದೀರಿ; ನನ್ನ ರಕ್ಷಕ ಆಗಿರುವ ದೇವರೇ, ನನ್ನನ್ನು ತ್ಯಜಿಸಬೇಡಿರಿ. ನನ್ನನ್ನು ಬಿಟ್ಟುಬಿಡಬೇಡಿರಿ.
10ನನ್ನ ತಂದೆತಾಯಂದಿರು ನನ್ನನ್ನು ಬಿಟ್ಟುಬಿಟ್ಟರೂ, ಯೆಹೋವ ದೇವರು ನನ್ನನ್ನು ಸೇರಿಸಿಕೊಳ್ಳುವರು.
11ಯೆಹೋವ ದೇವರೇ, ನಿಮ್ಮ ಮಾರ್ಗವನ್ನು ನನಗೆ ಬೋಧಿಸಿರಿ; ನನ್ನ ವಿರೋಧಿಗಳ ನಿಮಿತ್ತ ಸಮಹಾದಿಯಲ್ಲಿ ನನ್ನನ್ನು ನಡೆಸಿರಿ.
12ನನ್ನ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡಿರಿ; ಸುಳ್ಳುಸಾಕ್ಷಿಗಳೂ ಕ್ರೂರ ನಿಂದಕರೂ ನನಗೆ ವಿರೋಧವಾಗಿ ಎದ್ದಿದ್ದಾರೆ.
13ಇದೊಂದು ನನ್ನ ಭರವಸೆಯಾಗಿರುವುದು: ನಾನಂತೂ ಯೆಹೋವ ದೇವರ ಒಳಿತನ್ನು ಜೀವಿತರ ದೇಶದಲ್ಲಿ ಕಾಣುವೆನು.
14ಯೆಹೋವ ದೇವರಿಗಾಗಿ ಕಾದಿರು, ಧೈರ್ಯವಾಗಿರು; ಅವರು ನಿನ್ನ ಹೃದಯವನ್ನು ದೃಢಪಡಿಸುವರು; ಯೆಹೋವ ದೇವರಿಗಾಗಿ ಕಾದಿರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.