
ಕೀರ್ತನೆಗಳು 139
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 139 ಮನೆ, ದಾರಿ, ಎತ್ತರ, ಸಮುದ್ರ, ಕತ್ತಲೆ ಮತ್ತು ಆರಂಭಿಕ ರಚನೆಯಾದ್ಯಂತ ಸಂಪೂರ್ಣ ಜ್ಞಾನ ಮತ್ತು ತಪ್ಪಿಸಿಕೊಳ್ಳಲಾಗದ ಸಾನ್ನಿಧ್ಯವನ್ನು ಕಂಡು ವಿಸ್ಮಯಪಡುತ್ತದೆ. ವಿಸ್ಮಯವು ನೈತಿಕ ಆಹ್ವಾನವಾಗುತ್ತದೆ: ಹೃದಯವನ್ನು ಪರಿಶೋಧಿಸಿ ಶಾಶ್ವತ ಮಾರ್ಗದಲ್ಲಿ ನಡೆಸು.
ಸಾನ್ನಿಧ್ಯಜ್ಞಾನಸೃಷ್ಟಿಮಾರ್ಗದರ್ಶನ
1ಯೆಹೋವ ದೇವರೇ, ನೀವು ನನ್ನನ್ನು ಪರಿಶೋಧಿಸಿದ್ದೀರಿ; ನನ್ನನ್ನು ತಿಳಿದುಕೊಂಡಿದ್ದೀರಿ.
2ನಾನು ಕುಳಿತಿರುವುದನ್ನೂ, ಏಳುವುದನ್ನೂ ನೀವು ತಿಳಿದುಕೊಂಡಿದ್ದೀರಿ; ನನ್ನ ಆಲೋಚನೆಗಳನ್ನು ದೂರದಿಂದ ಗ್ರಹಿಸಿಕೊಂಡಿದ್ದೀರಿ.
3ನಾನು ನಡೆಯುವುದನ್ನೂ, ನಾನು ಮಲಗುವುದನ್ನೂ ನೀವು ವಿವೇಚಿಸಿದ್ದೀರಿ; ನನ್ನ ಮಾರ್ಗಗಳೆಲ್ಲಾ ನಿಮಗೆ ಸುಪರಿಚಿತವಾಗಿವೆ.
4ನನ್ನ ನಾಲಿಗೆಯಲ್ಲಿ ಒಂದು ಮಾತು ಆರಂಭಿಸುವುದಕ್ಕಿಂತ ಮುಂಚೆಯೇ ಯೆಹೋವ ದೇವರೇ, ಅದು ನಿಮಗೆ ಪೂರ್ಣವಾಗಿ ತಿಳಿದಿರುತ್ತದೆ.
5ನೀವು ನನ್ನ ಹಿಂದೆಯೂ, ಮುಂದೆಯೂ ಆವರಿಸಿಕೊಂಡು, ನಿಮ್ಮ ಕೈಯನ್ನು ನನ್ನ ಮೇಲೆ ಇಟ್ಟಿದ್ದೀರಿ.
6ಇಂಥ ಅರಿವು ನನಗೆ ಅತ್ಯಂತ ವಿಸ್ಮಯವಾಗಿದೆ, ಅದು ನನಗೆ ನಿಲುಕಲಾರದಷ್ಟು ಉನ್ನತವಾಗಿದೆ.
7ನಾನು ನಿಮ್ಮ ಆತ್ಮದಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗಲಿ? ನಿಮ್ಮ ಸನ್ನಿಧಿಯಿಂದ ತಪ್ಪಿಸಿಕೊಂಡು ನಾನು ಎಲ್ಲಿಗೆ ಹೊರಟು ಹೋಗಲಿ?
8ನಾನು ಆಕಾಶಕ್ಕೆ ಏರಿ ಹೋದರೆ, ನೀವು ಅಲ್ಲಿ ಇದ್ದೀರಿ; ಪಾತಾಳಕ್ಕೆ ಹೋಗಿ ನಿದ್ರಿಸಿದರೂ ನೀವು ಅಲ್ಲಿಯೂ ಇದ್ದೀರಿ.
9ಉದಯದ ರೆಕ್ಕೆಗಳನ್ನು ತೆಗೆದುಕೊಂಡು, ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡಿದರೆ,
10ಅಲ್ಲಿಯೂ ನಿಮ್ಮ ಕೈ ನನ್ನನ್ನು ನಡೆಸುವುದು, ನಿಮ್ಮ ಬಲಗೈ ನನ್ನನ್ನು ಹಿಡಿದಿರುವುದು.
11“ಕತ್ತಲೆಯು ನನ್ನನ್ನು ಕವಿದುಕೊಳ್ಳಲಿ ಮತ್ತು ಬೆಳಕು ನನ್ನ ಸುತ್ತಲೂ ಇರುಳಾಗಲಿ,” ಎಂದು ನಾನು ಹೇಳಿದರೂ,
12ಕತ್ತಲು ನಿಮಗೆ ಕತ್ತಲಾಗಿರುವುದಿಲ್ಲ; ರಾತ್ರಿಯು ಹಗಲಿನ ಹಾಗೆ ಪ್ರಕಾಶಿಸುವುದು, ಏಕೆಂದರೆ ಕತ್ತಲು ನಿಮಗೆ ಬೆಳಕಿನಂತಿರುವುದು.
13ನನ್ನ ಅಂತರಾತ್ಮವನ್ನು ಉಂಟು ಮಾಡಿದವರು ನೀವೇ; ನನ್ನ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವರು ನೀವೇ.
14ನೀವು ನನ್ನನ್ನು ವಿಚಿತ್ರವಾಗಿಯೂ ವಿಸ್ಮಯವಾಗಿಯೂ ಸೃಷ್ಟಿಸಿದ್ದರಿಂದ ನಾನು ನಿಮ್ಮನ್ನು ಸ್ತುತಿಸುತ್ತೇನೆ; ನಿಮ್ಮ ಕೃತ್ಯಗಳು ಆಶ್ಚರ್ಯಕರವಾಗಿವೆ ಎಂದು, ನಾನು ಪೂರ್ಣವಾಗಿ ತಿಳಿದಿದ್ದೇನೆ.
15ನೀವು ನನ್ನನ್ನು ಮರೆಯಲ್ಲಿ ರೂಪಿಸಿದಾಗಲೂ, ಭೂಗರ್ಭದಲ್ಲಿ ನನ್ನನ್ನು ರಚಿಸಿದಾಗಲೂ ನನ್ನ ಅಸ್ಥಿಪಂಜರವು ನಿಮಗೆ ಮರೆಯಾಗಿರಲಿಲ್ಲ.
16ನಾನು ಇನ್ನೂ ಭ್ರೂಣವಾಗಿರುವಾಗಲೇ ನಿಮ್ಮ ಕಣ್ಣುಗಳು ನನ್ನನ್ನು ನೋಡಿದವು; ನೀವು ನನಗೆ ಅನುಮತಿಸಿರುವ ಪ್ರಥಮ ದಿನದಿಂದ ಕೊನೆಯದಿನದವರೆಗೆ ನನ್ನ ಎಲ್ಲಾ ದಿನಗಳೂ ನಿಮ್ಮ ಪುಸ್ತಕದಲ್ಲಿ ಬರೆಯಲಾಗಿವೆ.
17ದೇವರೇ, ನಿಮ್ಮ ಆಲೋಚನೆಗಳು ನನಗೆ ಎಷ್ಟೋ ಅಮೂಲ್ಯವಾಗಿವೆ! ಅವುಗಳ ಎಣಿಕೆ ನನಗೆ ಎಷ್ಟೋ ಅಸಂಖ್ಯವಾಗಿವೆ!
18ನಾನು ಅವುಗಳನ್ನು ಎಣಿಸಿದರೆ, ಅವು ಮರಳಿಗಿಂತಲೂ ಹೆಚ್ಚಾಗಿವೆ! ನಾನು ಎಚ್ಚರವಾಗುವಾಗ, ನಿಶ್ಚಯವಾಗಿಯೂ ನಿಮ್ಮ ಸಂಗಡ ಇರುವೆನು.
19ದೇವರೇ, ಒಂದು ವೇಳೆ ನೀವು ದುಷ್ಟರೆಲ್ಲರನ್ನು ದಂಡಿಸಿಬಿಟ್ಟರೆ ಎಷ್ಟೋ ಒಳ್ಳೆಯದಾಗಿರುವುದು! ಕೊಲೆಪಾತಕರೇ, ನೀವು ನನ್ನಿಂದ ತೊಲಗಿ ಹೋದರೆ ಎಷ್ಟೋ ಹಿತ!
20ಅವರು ನಿಮಗೆ ವಿರೋಧವಾಗಿ ಮಾತಾಡುತ್ತಾರೆ; ನಿಮ್ಮ ವೈರಿಗಳು ನಿಮ್ಮ ಹೆಸರನ್ನು ದುರುಪಯೋಗ ಮಾಡುತ್ತಾರೆ.
21ಯೆಹೋವ ದೇವರೇ, ನಿಮ್ಮನ್ನು ದ್ವೇಷಿಸುವವರನ್ನು ನಾನು ದ್ವೇಷಿಸದಿರುವೆನೋ? ನಿಮಗೆ ವಿರೋಧವಾಗಿ ತಿರುಗಿ ಬಿದ್ದವರನ್ನು ನಾನು ಹೀನೈಸದಿರುವೆನೋ?
22ನಾನು ಪೂರ್ಣ ದ್ವೇಷದಿಂದ ಅವರನ್ನು ಹಗೆಮಾಡುತ್ತೇನೆ; ನಾನು ಅವರನ್ನು ನನ್ನ ಶತ್ರುಗಳಂತೆ ಪರಿಗಣಿಸುತ್ತೇನೆ.
23ದೇವರೇ, ನನ್ನನ್ನು ಪರಿಶೋಧಿಸಿ, ನನ್ನ ಹೃದಯವನ್ನು ತಿಳಿದುಕೊಳ್ಳಿರಿ; ನನ್ನನ್ನು ಪರೀಕ್ಷಿಸಿ, ನನ್ನ ಚಿಂತಾಲೋಚನೆಗಳನ್ನು ತಿಳಿದುಕೊಳ್ಳಿರಿ.
24ನನ್ನಲ್ಲಿ ಕೇಡಿನ ಮಾರ್ಗವಿದೆಯೋ ಎಂದು ನೋಡಿರಿ, ನನ್ನನ್ನು ನಿತ್ಯ ಮಾರ್ಗದಲ್ಲಿ ನಡೆಸಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.