Worshipers praise near storm clouds, Egyptian memories, inherited land, and a heap of lifeless idols

ಕೀರ್ತನೆಗಳು 135

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 135 ಪ್ರಕೃತಿಯಲ್ಲಿಯೂ ಚರಿತ್ರೆಯಲ್ಲಿಯೂ ಸಾರ್ವಭೌಮ ಕರ್ತೃವನ್ನು ಸ್ತುತಿಸಲು ಯಾಜಕರನ್ನೂ ಜನರನ್ನೂ ಕರೆಯುತ್ತದೆ. ಹವಾಮಾನ, ವಿಮೋಚನೆ, ಸೋಲಿಸಿದ ಅರಸರು, ಬಾಧ್ಯತೆಯ ನಾಡು ಮತ್ತು ಕರುಣೆಯು ಅಂಗಗಳಿದ್ದರೂ ಜೀವವಿಲ್ಲದ ವಿಗ್ರಹಗಳೊಂದಿಗೆ ತೀವ್ರವಾಗಿ ವ್ಯತಿರಿಕ್ತವಾಗಿ ನಿಲ್ಲುತ್ತವೆ.
ಸ್ತುತಿಸಾರ್ವಭೌಮತ್ವವಿಗ್ರಹಗಳುಚರಿತ್ರೆ
1ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರ ಹೆಸರನ್ನು ಸ್ತುತಿಸಿರಿ; ಯೆಹೋವ ದೇವರ ಆಲಯದಲ್ಲಿಯೂ,
2ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವ ಯೆಹೋವ ದೇವರ ಸೇವಕರೇ, ಸ್ತುತಿಸಿರಿ.
3ಯೆಹೋವ ದೇವರನ್ನು ಸ್ತುತಿಸಿರಿ, ಯೆಹೋವ ದೇವರು ಒಳ್ಳೆಯವರು; ದೇವರ ಹೆಸರಿಗೆ ಸ್ತುತಿಗಳನ್ನು ಹಾಡಿರಿ, ಏಕೆಂದರೆ ಅದು ರಮ್ಯವಾದದ್ದು.
4ಯೆಹೋವ ದೇವರು ಯಾಕೋಬನನ್ನು ತಮಗೋಸ್ಕರ ಆಯ್ದುಕೊಂಡರು, ಇಸ್ರಾಯೇಲನ್ನು ತಮ್ಮ ಶ್ರೇಷ್ಠ ಸಂಪತ್ತಾಗಿಯೂ ಆಯ್ದುಕೊಂಡಿದ್ದಾರೆ.
5ಯೆಹೋವ ದೇವರು ದೊಡ್ಡವರು; ನಮ್ಮ ಯೆಹೋವ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವರೆಂದು ನಾನು ತಿಳಿದಿದ್ದೇನೆ.
6ಯೆಹೋವ ದೇವರು ಆಕಾಶದಲ್ಲಿಯೂ, ಭೂಮಿಯಲ್ಲಿಯೂ, ಸಮುದ್ರದಲ್ಲಿಯೂ, ಎಲ್ಲಾ ಅಗಾಧಗಳಲ್ಲಿಯೂ ತಾವು ಅಪೇಕ್ಷಿಸುವುದನ್ನೆಲ್ಲಾ ಮಾಡುತ್ತಾರೆ.
7ಭೂಮಿಯ ಎಲ್ಲಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಯನ್ನೂ ಮಿಂಚನ್ನೂ ಕಳುಹಿಸುತ್ತಾರೆ. ಗಾಳಿಯನ್ನು ತಮ್ಮ ಉಗ್ರಾಣಗಳಿಂದ ಬೀಸುವಂತೆ ಮಾಡುತ್ತಾರೆ.
8ದೇವರು ಈಜಿಪ್ಟ್ ಜನರನ್ನು ಮೊದಲುಗೊಂಡು ಪಶುಗಳವರೆಗೂ ಚೊಚ್ಚಲುಗಳನ್ನೆಲ್ಲಾ ದಂಡಿಸಿದರು.
9ಈಜಿಪ್ಟೇ, ನಿಮ್ಮ ಮಧ್ಯದಲ್ಲಿ ಸೂಚಕಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ದೇವರು ಫರೋಹನಿಗೂ, ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.
10ದೇವರು ದೊಡ್ಡ ಜನಾಂಗಗಳನ್ನೂ, ಬಲವಾದ ಅರಸರನ್ನೂ ದಂಡಿಸಿದರು.
11ಅಮೋರಿಯರ ಅರಸನಾದ ಸೀಹೋನನನ್ನು, ಬಾಷಾನಿನ ಅರಸನಾದ ಓಗನನ್ನೂ, ಕಾನಾನಿನ ಎಲ್ಲಾ ಅರಸರನ್ನೂ ದಂಡಿಸಿದರು.
12ದೇವರು ದೇಶವನ್ನು ಸೊತ್ತಾಗಿ ತಮ್ಮ ಪ್ರಜೆಯಾದ ಇಸ್ರಾಯೇಲಿಗೆ ಕೊಟ್ಟರು.
13ಯೆಹೋವ ದೇವರೇ, ನಿಮ್ಮ ನಾಮವೂ, ನಿಮ್ಮ ಪ್ರಭಾವವೂ ತಲತಲಾಂತರಕ್ಕೂ ಸ್ಮರಣೆಯಾಗಿರುವುದು.
14ಯೆಹೋವ ದೇವರು ತಮ್ಮ ಜನರಿಗೆ ನ್ಯಾಯವನ್ನು ಸ್ಥಾಪಿಸುವರು, ತಮ್ಮ ಸೇವಕರ ಮೇಲೆ ಅನುಕಂಪವನ್ನೂ ತೋರಿಸುವರು.
15ವಿಗ್ರಹಗಳು ಬೆಳ್ಳಿ, ಬಂಗಾರದವುಗಳು, ಅವು ಮನುಷ್ಯರ ಕೈಯಿಂದ ಮಾಡಲಾಗಿವೆ.
16ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ; ಕಣ್ಣುಗಳಿವೆ, ಕಾಣುವುದಿಲ್ಲ.
17ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ; ಅವುಗಳ ಬಾಯಲ್ಲಿ ಶ್ವಾಸ ಇಲ್ಲ.
18ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ; ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು.
19ಇಸ್ರಾಯೇಲ್ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ; ಆರೋನನ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ.
20ಲೇವಿಯ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ; ದೇವರಲ್ಲಿ ಭಯಭಕ್ತಿಯುಳ್ಳವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ.
21ಯೆರೂಸಲೇಮಿನಲ್ಲಿ ವಾಸಿಸುವವ ಯೆಹೋವ ದೇವರನ್ನು ಕೊಂಡಾಡಿ ಸ್ತುತಿಸಿರಿ; ಅವರ ಕೀರ್ತಿಯು ಚೀಯೋನಿನಿಂದ ಹೊರಗೂ ಹಬ್ಬಲಿ. ಯೆಹೋವ ದೇವರಿಗೆ ಸ್ತೋತ್ರ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.