
ಕೀರ್ತನೆಗಳು 12
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 12 ಜಂಬದ, ಮುಖಸ್ತುತಿಯ ಮಾತನ್ನು ಬೆಳ್ಳಿಯಂತೆ ಶುದ್ಧೀಕರಿಸಿದ ವಾಗ್ದಾನಗಳೊಂದಿಗೆ ಹೋಲಿಸುತ್ತದೆ. ಕುತಂತ್ರದ ಸಂಸ್ಕೃತಿಯಲ್ಲಿ ದುರ್ಬಲರು ಸಹಾಯಕ್ಕಾಗಿ ಮೊರೆಯಿಡುತ್ತಾರೆ, ಮತ್ತು ನಂಬಿಕೆಗೆ ಅರ್ಹವಾದ ಮಾತುಗಳು ಶಾಶ್ವತ ರಕ್ಷಣೆಯ ಮೂಲವಾಗುತ್ತವೆ.
ಮಾತುಸತ್ಯರಕ್ಷಣೆಬಡವರು
1ಯೆಹೋವ ದೇವರೇ, ರಕ್ಷಿಸಿರಿ, ಏಕೆಂದರೆ ದೇವಭಕ್ತರು ಮುಗಿದು ಹೋಗುತ್ತಿದ್ದಾರೆ; ಜನರಲ್ಲಿ ನಂಬಿಗಸ್ತರು ಇಲ್ಲದೆ ಹೋಗುತ್ತಿದ್ದಾರೆ.
2ಪ್ರತಿಯೊಬ್ಬರು ತಮ್ಮ ನೆರೆಯವರ ಸಂಗಡ ಸುಳ್ಳಾಡುತ್ತಾರೆ; ಅವರು ತಮ್ಮ ತುಟಿಯಿಂದ ಹೊಗಳಿ, ಹೃದಯದಲ್ಲಿ ವಂಚನೆಯನ್ನು ಮಾತನಾಡುತ್ತಾರೆ.
3ಹೊಗಳಿಕೆಯ ಎಲ್ಲಾ ತುಟಿಗಳನ್ನೂ ಗರ್ವ ಮಾತನಾಡುವ ಎಲ್ಲಾ ನಾಲಿಗೆಯನ್ನೂ ಯೆಹೋವ ದೇವರು ಮೌನವಾಗಿರಿಸಲಿ.
4ಅವರು ಹೀಗೆನ್ನುತ್ತಾರೆ, “ನಾವು ನಮ್ಮ ನಾಲಿಗೆಯಿಂದ ಜಯಿಸುವೆವು; ನಮ್ಮ ತುಟಿಗಳೇ ನಮಗೆ ಸಂರಕ್ಷಣೆ ನಮ್ಮ ಮೇಲೆ ಒಡೆಯನು ಯಾರು?”
5“ಬಡವರು ಹಿಂಸೆಗೆ ಒಳಗಾಗಿರುವುದರಿಂದಲೂ ಗತಿಯಿಲ್ಲದವರು ನರಳಾಡುವುದರಿಂದಲೂ ನಾನು ಈಗಲೇ ಏಳುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಪೀಡಿಸುವವರಿಂದ ನಾನು ಬಡವರನ್ನು ಕಾಪಾಡುವೆನು.”
6ಯೆಹೋವ ದೇವರ ವಾಕ್ಯಗಳು ದೋಷವಿಲ್ಲದ್ದು. ಅವು ಮಣ್ಣಿನ ಕುಲುಮೆಯಲ್ಲಿ ಶುದ್ಧೀಕರಿಸಿದ ಬೆಳ್ಳಿಯಂತೆಯೂ ಏಳು ಸಾರಿ ಪುಟಕ್ಕೆ ಹಾಕಿದ ಬಂಗಾರದಂತೆಯೂ ಇವೆ.
7ಯೆಹೋವ ದೇವರೇ, ನೀವು ಗತಿಯಿಲ್ಲದವರನ್ನು ದುಷ್ಟರಿಂದ ಯಾವಾಗಲೂ ಕಾಪಾಡಿ ಸಂರಕ್ಷಿಸುತ್ತೀರಿ,
8ಮನುಷ್ಯರು ಅಸಹ್ಯವಾದದ್ದನ್ನು ಗೌರವಿಸುವಾಗ, ಆ ದುಷ್ಟರು ಎಲ್ಲಾ ಕಡೆಗಳಲ್ಲಿಯೂ ಸ್ವತಂತ್ರವಾಗಿ ಅಲೆದಾಡುತ್ತಿರುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.