
ಕೀರ್ತನೆಗಳು 118
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 118 ರಕ್ಷಣೆ, ತಿರುವು ಮತ್ತು ಆನಂದದ ಮೆರವಣಿಗೆಯ ಮೂಲಕ ಸ್ಥಿರ ಪ್ರೀತಿಯನ್ನು ಕೊಂಡಾಡುತ್ತದೆ. ಸುತ್ತುವರಿದ ಅಪಾಯವು ತೆರೆದ ಬಾಗಿಲುಗಳಿಗೆ ದಾರಿ ಮಾಡುತ್ತದೆ; ತಿರಸ್ಕೃತ ಕಲ್ಲು ಮುಖ್ಯವಾಗುತ್ತದೆ, ಮತ್ತು ಸಮುದಾಯವು ಹೊಸ ದಿನವನ್ನು ಕೃತಜ್ಞತೆಯಿಂದ ಸ್ವಾಗತಿಸುತ್ತದೆ.
ಕೃತಜ್ಞತೆತಿರುವುಮೂಲೆಗಲ್ಲುರಕ್ಷಣೆ
1ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು. ಅವರ ಪ್ರೀತಿ ಶಾಶ್ವತವಾಗಿರುವುದು.
2“ದೇವರ ಪ್ರೀತಿಯು ಯುಗಯುಗಕ್ಕೂ ಇದೆ,” ಎಂದು ಇಸ್ರಾಯೇಲ್ ಹೇಳಲಿ.
3“ದೇವರ ಪ್ರೀತಿಯು ಸದಾಕಾಲವೂ ಇರುವುದು,” ಎಂದು ಆರೋನನ ಮನೆಯವರು ಹೇಳಲಿ.
4“ದೇವರ ಪ್ರೀತಿಯು ಸದಾಕಾಲವೂ ಇರುವುದು,” ಎಂದು ಯೆಹೋವ ದೇವರಿಗೆ ಭಯಪಡುವವರು ಹೇಳಲಿ.
5ಇಕ್ಕಟ್ಟಿನೊಳಗಿಂದ ಯೆಹೋವ ದೇವರಿಗೆ ಕೂಗಿದೆನು; ಯೆಹೋವ ದೇವರು ಉತ್ತರಕೊಟ್ಟು, ನನ್ನನ್ನು ವಿಶಾಲವಾದ ಸ್ಥಳಕ್ಕೆ ತಂದರು.
6ಯೆಹೋವ ದೇವರು ನನ್ನ ಪರವಾಗಿದ್ದಾರೆ, ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?
7ಯೆಹೋವ ದೇವರು ನನ್ನೊಂದಿಗಿದ್ದಾರೆ, ಅವರು ನನಗೆ ಸಹಾಯಕರು; ನಾನು ವೈರಿಗಳ ಮೇಲೆ ಜಯ ಸಾಧಿಸುವೆನು.
8ಮನುಷ್ಯರಲ್ಲಿ ಭರವಸೆ ಇಡುವುದಕ್ಕಿಂತ ಯೆಹೋವ ದೇವರಲ್ಲಿ ಆಶ್ರಯ ಪಡೆಯುವುದು ಒಳ್ಳೆಯದು.
9ಅಧಿಪತಿಗಳಲ್ಲಿ ಭರವಸೆ ಇಡುವುದಕ್ಕಿಂತ ಯೆಹೋವ ದೇವರ ಆಶ್ರಯ ಪಡೆಯುವುದು ಒಳ್ಳೆಯದು.
10ಎಲ್ಲಾ ರಾಷ್ಟ್ರದವರು ನನ್ನನ್ನು ಸುತ್ತಿಕೊಂಡರು; ಆದರೆ ನಾನು ಯೆಹೋವ ದೇವರ ಹೆಸರಿನಲ್ಲಿ ಅವರನ್ನು ದಂಡಿಸುವೆನು.
11ಅವರು ನನ್ನನ್ನು ಎಲ್ಲಾ ದಿಕ್ಕುಗಳಿಂದ ಸುತ್ತಿಕೊಂಡರು; ಯೆಹೋವ ದೇವರ ಹೆಸರಿನಲ್ಲಿ ಅವರನ್ನು ಸೋಲಿಸುವೆನು.
12ಜೇನುನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ, ಅವರು ಮುಳ್ಳಿನ ಬೆಂಕಿಯ ಹಾಗೆ ಕ್ಷಣಮಾತ್ರದಲ್ಲಿ ಇಲ್ಲವಾಗಿ ಹೋದರು; ಯೆಹೋವ ದೇವರ ಹೆಸರಿನಲ್ಲಿ ನಾನು ಅವರನ್ನು ಸೋಲಿಸುವೆನು.
13ನಾನು ಬೀಳುವ ಹಾಗೆ ವೈರಿಯು ನನ್ನನ್ನು ನೂಕಿದನು; ಆದರೆ ಯೆಹೋವ ದೇವರು ನನಗೆ ಸಹಾಯ ಮಾಡಿದರು.
14ನನ್ನ ಬಲವೂ, ಬೆಂಬಲವೂ ಯೆಹೋವ ದೇವರೇ; ಅವರೇ ನನಗೆ ರಕ್ಷಣೆಯಾದರು.
15ಜಯಘೋಷವೂ ಹರ್ಷಧ್ವನಿಯೂ ನೀತಿವಂತರ ಗುಡಾರಗಳಲ್ಲಿ ಪ್ರತಿಧ್ವನಿಸುತ್ತಿರುವುದು; ಯೆಹೋವ ದೇವರ ಬಲಗೈ ಪರಾಕ್ರಮವನ್ನು ನಡೆಸಿದೆ.
16ಯೆಹೋವ ದೇವರ ಬಲಗೈ ಎತ್ತರವಾಗಿ ಎತ್ತಲಾಗಿದೆ; ಯೆಹೋವ ದೇವರ ಬಲಗೈ ಪರಾಕ್ರಮವನ್ನು ನಡೆಸಿದೆ.
17ನಾನು ಸಾಯದೆ ಬದುಕಿರುವೆನು, ಯೆಹೋವ ದೇವರು ಮಾಡಿದ್ದನ್ನು ಸಾರುವೆನು.
18ಏಕೆಂದರೆ ಯೆಹೋವ ದೇವರು ನನ್ನನ್ನು ಕಠಿಣವಾಗಿ ಶಿಕ್ಷಿಸಿದರು; ಆದರೆ ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.
19ನೀತಿಯ ಬಾಗಿಲುಗಳನ್ನು ನನಗೆ ತೆರೆಯಿರಿ; ಅವುಗಳೊಳಗೆ ಪ್ರವೇಶಿಸಿ ಯೆಹೋವ ದೇವರಿಗೆ ಧನ್ಯವಾದ ಸಲ್ಲಿಸು.
20ಇದೇ ಯೆಹೋವ ದೇವರ ಬಾಗಿಲು; ನೀತಿವಂತರು ಇದರಲ್ಲಿ ಪ್ರವೇಶಿಸುವರು.
21ನಿಮಗೆ ಕೃತಜ್ಞತಾವಂದನೆ ಸಲ್ಲಿಸುವೆನು; ಏಕೆಂದರೆ ನನಗೆ ನೀವು ಉತ್ತರಕೊಟ್ಟು, ನನಗೆ ರಕ್ಷಣೆಯಾದಿರಿ.
22ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
23ಇದು ಯೆಹೋವ ದೇವರಿಂದಲೇ ಉಂಟಾಯಿತು; ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಯಿತು.
24ಯೆಹೋವ ದೇವರು ಮಾಡಿದ ದಿನವು ಇದೇ; ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡೋಣ.
25ಯೆಹೋವ ದೇವರೇ ನಮ್ಮನ್ನು ರಕ್ಷಿಸಿರಿ, ಯೆಹೋವ ದೇವರೇ ನಮಗೆ ಜಯಕೊಡಿರಿ.
26ಯೆಹೋವ ದೇವರ ಹೆಸರಿನಲ್ಲಿ ಬರುವವನು ಧನ್ಯನು; ಯೆಹೋವ ದೇವರ ಆಲಯದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸುವೆವು.
27ಯೆಹೋವ ದೇವರು ದೇವರಾಗಿದ್ದಾನೆ; ನಮ್ಮ ಮೇಲೆ ಅವರ ಬೆಳಕನ್ನು ಪ್ರಕಾಶಿಸುವಂತೆ ಮಾಡಿದ್ದಾರೆ. ಕೊಂಬೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬಲಿಪೀಠದ ಕೊಂಬುಗಳವರೆಗೆ ಮೆರವಣಿಗೆಯಾಗಿ ಬನ್ನಿರಿ.
28ನೀವು ನನ್ನ ದೇವರಾಗಿದ್ದೀರಿ, ನಿಮಗೆ ಉಪಕಾರ ಸಲ್ಲಿಸುವೆನು; ನೀವು ನನ್ನ ದೇವರು; ನಿಮ್ಮನ್ನು ನಾನು ಉನ್ನತಪಡಿಸುವೆನು.
29ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ; ಅವರು ಒಳ್ಳೆಯವರು; ಅವರ ಪ್ರೀತಿ ಶಾಶ್ವತವಾಗಿರುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.