Friends pull a grateful man from a ravine as he carries a cup toward gathered sanctuary worshipers

ಕೀರ್ತನೆಗಳು 116

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 116 ಕೇಳಲ್ಪಟ್ಟ ಪ್ರಾರ್ಥನೆಗೆ ಪ್ರೀತಿ, ವಿಶ್ರಾಂತಿ, ಕೃತಜ್ಞತೆ ಮತ್ತು ಸಾರ್ವಜನಿಕ ಬದ್ಧತೆಯಿಂದ ಪ್ರತಿಕ್ರಿಯಿಸುತ್ತದೆ. ಮರಣ, ಕಣ್ಣೀರು ಮತ್ತು ಎಡವುವಿಕೆಯಿಂದ ವಿಮೋಚಿತನಾದ ಆರಾಧಕನು ರಕ್ಷಣೆಯ ಪಾತ್ರೆಯನ್ನು ಎತ್ತಿ, ಒಟ್ಟುಗೂಡಿದ ಜನರ ನಡುವೆ ಹರಕೆಗಳನ್ನು ಈಡೇರಿಸುತ್ತಾನೆ.
ವಿಮೋಚನೆಪ್ರಾರ್ಥನೆಕೃತಜ್ಞತೆಹರಕೆಗಳು
1ನಾನು ಯೆಹೋವ ದೇವರನ್ನು ಪ್ರೀತಿಸುತ್ತೇನೆ; ಏಕೆಂದರೆ ಅವರು ನನ್ನನ್ನು ಕರುಣಿಸಬೇಕೆಂಬ ನನ್ನ ವಿನಂತಿಯನ್ನೂ ಕೇಳಿದ್ದಾರೆ.
2ಅವರು ನನ್ನ ಸ್ವರಕ್ಕೆ ಕಿವಿಗೊಟ್ಟಿದ್ದರಿಂದ ನನ್ನ ಜೀವಮಾನಕಾಲವೆಲ್ಲಾ ಅವರನ್ನು ಬೇಡುವೆನು.
3ಮರಣದ ಪಾಶಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆಗಳು ನನ್ನ ಮೇಲೆ ಬಂದವು; ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು.
4ಆಗ ನಾನು, “ಓ ಯೆಹೋವ ದೇವರೇ, ನನ್ನನ್ನು ರಕ್ಷಿಸಿರಿ,” ಎಂದು ಯೆಹೋವ ದೇವರ ಹೆಸರಿನಲ್ಲಿ ಬೇಡಿದೆನು.
5ಯೆಹೋವ ದೇವರು ಕೃಪೆಯೂ ನೀತಿಯೂ ಉಳ್ಳವರು ನಮ್ಮ ದೇವರು ಅನುಕಂಪ ಭರಿತರು.
6ಯೆಹೋವ ದೇವರು ಸರಳ ಹೃದಯದವರನ್ನು ಕಾಪಾಡುತ್ತಾರೆ; ನಾನು ಕೊರತೆಯಲ್ಲಿದ್ದಾಗ, ಅವರು ನನ್ನನ್ನು ರಕ್ಷಿಸಿದರು.
7ನನ್ನ ಮನವೇ, ನೀನು ವಿಶ್ರಾಂತಿಯಿಂದಿರು; ಏಕೆಂದರೆ ಯೆಹೋವ ದೇವರು ನಿನಗೆ ಉಪಕಾರಿಯಾಗಿದ್ದಾರೆ.
8ಏಕೆಂದರೆ ಯೆಹೋವ ದೇವರೇ, ನೀವು ನನ್ನನ್ನು ಮರಣಕ್ಕೂ, ನನ್ನ ಕಣ್ಣುಗಳನ್ನು ಕಣ್ಣೀರಿಗೂ, ನನ್ನ ಪಾದಗಳನ್ನು ಬೀಳದಂತೆಯೂ ತಪ್ಪಿಸಿದ್ದೀರಿ.
9ಆದ್ದರಿಂದ ಜೀವಿತರ ಲೋಕದಲ್ಲಿ ಯೆಹೋವ ದೇವರ ಮುಂದೆ ನಡೆದುಕೊಳ್ಳುವೆನು.
10“ನಾನು ಬಹಳ ಕುಗ್ಗಿ ಹೋಗಿದ್ದೇನೆ,” ಎಂದು ನಾನು ದೇವರಲ್ಲಿ ಭರವಸೆ ಇಟ್ಟಾಗ ಹೇಳಿದೆ.
11“ಮನುಷ್ಯರೆಲ್ಲರು ಸುಳ್ಳುಗಾರರು,” ಎಂದು ನಾನು ನಿರಾಶೆಯಿಂದ ಹೇಳಿದ್ದೆನು.
12ದೇವರು ನನಗೆ ಮಾಡಿದ ಎಲ್ಲಾ ಉಪಕಾರಗಳಿಗೆ ಬದಲಾಗಿ ನಾನು ಯೆಹೋವ ದೇವರಿಗೆ ಏನು ಮಾಡಲಿ?
13ನಾನು ರಕ್ಷಣೆಯ ಪಾತ್ರೆಯನ್ನು ತೆಗೆದುಕೊಂಡು, ಯೆಹೋವ ದೇವರ ಹೆಸರನ್ನು ಕರೆಯುವೆನು.
14ನಾನು ಹೊತ್ತ ಹರಕೆಗಳನ್ನು ದೇವಜನರೆಲ್ಲರ ಮುಂದೆಯೇ ದೇವರಿಗೆ ಸಲ್ಲಿಸುವೆನು.
15ದೇವರ ಭಕ್ತರ ಮರಣವು ಯೆಹೋವ ದೇವರ ದೃಷ್ಟಿಯಲ್ಲಿ ಅಮೂಲ್ಯವಾಗಿದೆ.
16ಯೆಹೋವ ದೇವರೇ, ನಿಜವಾಗಿ ನಾನು ನಿಮ್ಮ ಸೇವಕನು; ಹೌದು, ನನ್ನ ತಾಯಿ ನಿಮಗೆ ಸೇವೆಮಾಡಿದಂತೆ ನಾನು ಸಹ ನಿಮ್ಮ ಸೇವಕನು; ನೀವು ನನ್ನ ಬಂಧನಗಳಿಂದ ನನ್ನನ್ನು ಬಿಡಿಸಿದ್ದೀರಿ.
17ನಾನು ನಿಮಗೆ ಕೃತಜ್ಞತೆಯ ಬಲಿಯನ್ನು ಅರ್ಪಿಸುವೆನು; ಯೆಹೋವ ದೇವರ ಹೆಸರನ್ನು ಕರೆಯುವೆನು.
18ಯೆರೂಸಲೇಮೇ, ನನ್ನ ಹರಕೆಗಳನ್ನು ದೇವಜನರೆಲ್ಲರ ಮುಂದೆಯೇ ಸಲ್ಲಿಸುವೆನು,
19ಯೆಹೋವ ದೇವರ ಆಲಯದ ಅಂಗಳಗಳಲ್ಲಿ ಯೆರೂಸಲೇಮ ಮಧ್ಯದಲ್ಲಿಯೇ ಯೆಹೋವ ದೇವರಿಗೆ ಸಲ್ಲಿಸುವೆನು. ಯೆಹೋವ ದೇವರನ್ನು ಸ್ತುತಿಸಿರಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.