
ಜ್ಞಾನೋಕ್ತಿಗಳು 5
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಮೋಹಕ ಮಾತುಗಳು ಕಹಿ ಪರಿಣಾಮಗಳನ್ನು ಮರೆಮಾಡಬಹುದು ಎಂದು ಬೋಧಕನು ಎಚ್ಚರಿಸಿ, ವ್ಯಭಿಚಾರದಿಂದ ದೂರವಿರುವಂತೆ ಒತ್ತಾಯಿಸುತ್ತಾನೆ. ವಿವಾಹದೊಳಗಿನ ನಂಬಿಗಸ್ತ ಆನಂದವನ್ನು ಜೀವದಾಯಕ ಬುಗ್ಗೆಯಾಗಿ ಕೊಂಡಾಡಲಾಗಿದೆ, ಮತ್ತು ಪ್ರತಿಯೊಂದು ಮಾರ್ಗವು ಕರ್ತನ ಮುಂದೆ ಸಂಪೂರ್ಣವಾಗಿ ಕಾಣುತ್ತದೆ.
ವಿವಾಹನಿಷ್ಠೆಪ್ರಲೋಭನೆಪರಿಣಾಮಗಳು
1ಮಗನೇ, ನನ್ನ ಜ್ಞಾನಕ್ಕೆ ಗಮನಕೊಡು; ನನ್ನ ಒಳನೋಟದ ಮಾತುಗಳಿಗೆ ಕಿವಿಗೊಡು.
2ಆಗ ನಿನ್ನ ವಿವೇಚನೆಯನ್ನು ಉಳಿಸಿಕೊಳ್ಳುವೆ. ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಪಾಡುವವು.
3ಏಕೆಂದರೆ ಜಾರಿಣಿಯ ತುಟಿಗಳು ಜೇನುಗರೆಯುವುದು; ಅವಳ ಮಾತು ಎಣ್ಣೆಗಿಂತಲೂ ಮೃದು.
4ಆದರೆ ಅಂತ್ಯದಲ್ಲಿ ಅವಳು ಮಾಚಿಪತ್ರೆಯಂತೆ ಕಹಿಯೂ, ಇಬ್ಬಾಯಿ ಖಡ್ಗದಂತೆ ಹರಿತವೂ ಆಗಿರುವಳು.
5ಅವಳ ಪಾದಗಳು ಮರಣದ ಕಡೆಗೆ ಇಳಿದುಹೋಗುತ್ತವೆ; ಅವಳ ಹೆಜ್ಜೆಗಳು ನೇರವಾಗಿ ಪಾತಾಳಕ್ಕೆ ನಡೆಸುತ್ತವೆ.
6ಜೀವಮಾರ್ಗದ ವಿಚಾರ ಅವಳಿಗಿಲ್ಲ; ಆದ್ದರಿಂದ ಅವಳ ಮಾರ್ಗಗಳು ಚಂಚಲವಾಗಿವೆ, ಅದರ ಅರಿವೂ ಅವಳಿಗಿಲ್ಲ.
7ಮಕ್ಕಳಿರಾ, ನನ್ನ ಕಡೆಗೆ ಈಗ ಕಿವಿಗೊಡಿರಿ; ನನ್ನ ಬಾಯಿಯ ಮಾತುಗಳಿಂದ ದೂರವಾಗಬೇಡಿರಿ.
8ಅವಳ ಕಡೆಯಿಂದ ನಿನ್ನ ದಾರಿಯನ್ನು ದೂರಮಾಡು; ಅವಳ ಮನೆಯ ಬಾಗಿಲ ಹತ್ತಿರಕ್ಕೆ ಹೋಗದೆ ಇರು.
9ನೀನು ನಿನ್ನ ಗೌರವವನ್ನು ಬೇರೆಯವರಿಗೆ ಕಳೆಯಬೇಡ, ನಿನ್ನ ಘನತೆನ್ನು ಕ್ರೂರನಿಗೂ ಕೊಡಬೇಡ.
10ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳದಂತೆ ಎಚ್ಚರಿಕೆ, ನಿನ್ನ ಪ್ರಯಾಸದ ಫಲವು ಪರರ ಮನೆ ಸೇರದಂತೆ ನೋಡಿಕೋ.
11ನಿನ್ನ ಜೀವನದ ಅಂತ್ಯದಲ್ಲಿ ನಿನ್ನ ದೇಹವೂ ಕ್ಷೀಣಿಸಿದಾಗ, ನೀನು ನರಳಬೇಕಾದೀತು.
12ಆಗ ನೀನು, “ಶಿಸ್ತನ್ನು ನಾನು ಎಷ್ಟೋ ಹಗೆ ಮಾಡಿದೆ; ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು.
13ನನ್ನ ಬೋಧಕರ ಸ್ವರಕ್ಕೆ ನಾನು ವಿಧೇಯನಾಗದೆ ಹೋದೆ. ನನ್ನ ಉಪದೇಶಕರಿಗೆ ನಾನು ಕಿವಿಗೊಡದೆ ಹೋದೆ.
14ನಾನು ದೇವರ ಸಭೆಯಲ್ಲಿ ಗಂಭೀರ ಸಮಸ್ಯೆಗೆ ಒಳಗಾದೆ,” ಎಂದು ಹೇಳುವೆ.
15ನಿನ್ನ ಸ್ವಂತ ಕೊಳದ ನೀರನ್ನು ಕುಡಿ, ನಿನ್ನ ಸ್ವಂತ ಬಾವಿಯೊಳಗಿಂದ ಉಕ್ಕಿಬರುವ ಜಲವನ್ನು ಕುಡಿ.
16ನಿನ್ನ ಬುಗ್ಗೆಗಳು ಬೀದಿಗಳಲ್ಲಿ ಹರಡುವುದು ಯುಕ್ತವೋ? ನೀರಿನ ಒರತೆಗಳು ಬೀದಿಚೌಕಗಳಲ್ಲಿ ಹರಿಯುವುದು ಸರಿಯೇ?
17ಅವು ನಿನಗೆ ಸ್ವಂತವಾಗಿರಲಿ; ಪರರು ಭಾಗಿಗಳಾಗಿರಬಾರದು.
18ನಿನ್ನ ಬುಗ್ಗೆಯು ಆಶೀರ್ವಾದ ಹೊಂದಲಿ; ನಿನ್ನ ಆನಂದವು ಯೌವನದ ಕಾಲದ ಹೆಂಡತಿಯೊಂದಿಗಿರಲಿ.
19ಆಕೆಯು ಮನೋಹರವಾದ ಹರಿಣಿ, ಅಂದವಾದ ಜಿಂಕೆಯ ಹಾಗೆಯೂ; ಆಕೆಯ ಎದೆಯು ನಿನ್ನನ್ನು ಸದಾ ತೃಪ್ತಿಪಡಿಸಲಿ; ಆಕೆಯ ಪ್ರೀತಿಯಿಂದ ನೀನು ಸದಾ ಪರವಶನಾಗಿರು.
20ಮಗನೇ, ಬೇರೆಯವನ ಹೆಂಡತಿಗೆ ವಶವಾಗುವುದೇಕೆ? ಅನ್ಯಳ ಎದೆಯನ್ನೇಕೆ ಅಪ್ಪಿಕೊಳ್ಳುವೆ?
21ನಿನ್ನ ಮಾರ್ಗಗಳು ಯೆಹೋವ ದೇವರ ಮುಂದೆಯೇ ಇವೆ. ಅವರು ನಿನ್ನ ಮಾರ್ಗಗಳನ್ನೆಲ್ಲಾ ಪರೀಕ್ಷಿಸುತ್ತಾರೆ.
22ದುಷ್ಟನನ್ನು ಅವನ ಸ್ವಂತ ದ್ರೋಹಗಳೇ ಹಿಡಿಯುತ್ತವೆ; ತನ್ನ ಪಾಪಗಳ ಪಾಶಗಳೇ ಅವನನ್ನು ಬಂಧಿಸುತ್ತದೆ.
23ಶಿಸ್ತುಪಾಲನೆಯಿಲ್ಲದೆ ಅವನು ನಾಶವಾಗುವನು; ತನ್ನ ಅತಿಮೂರ್ಖತನದಿಂದಲೇ ತಪ್ಪಿಹೋಗುವನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.