
ಜ್ಞಾನೋಕ್ತಿಗಳು 4
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ತಂದೆಯು ಪಡೆದ ಜ್ಞಾನವನ್ನು ಮುಂದಿನ ತಲೆಮಾರಿಗೆ ದಾಟಿಸುತ್ತಾನೆ, ತಿಳುವಳಿಕೆಯನ್ನು ಎಲ್ಲಕ್ಕಿಂತ ಹೆಚ್ಚು ಬೆಲೆಬಾಳುವಂತೆ ಒತ್ತಾಯಿಸುತ್ತಾನೆ. ನೀತಿವಂತರ ಮಾರ್ಗವು ಪೂರ್ಣ ಹಗಲಿನವರೆಗೆ ಪ್ರಕಾಶಮಾನವಾಗಿ ಬೆಳೆಯುತ್ತದೆ, ಆದ್ದರಿಂದ ಕಲಿಯುವವರು ಹೃದಯ, ಮಾತು, ಕಣ್ಣುಗಳು ಮತ್ತು ಹೆಜ್ಜೆಗಳನ್ನು ಕಾಪಾಡಬೇಕು.
ತಲೆಮಾರುಗಳ ಜ್ಞಾನಹೃದಯದ ಕಾವಲುನೀತಿವಂತರ ಮಾರ್ಗಉಪದೇಶ
1ಮಕ್ಕಳೇ, ತಂದೆಯ ಶಿಕ್ಷಣವನ್ನು ಕೇಳಿರಿ; ತಿಳುವಳಿಕೆಯನ್ನು ಗ್ರಹಿಸಲಿಕ್ಕೆ ಗಮನಕೊಡಿರಿ.
2ಏಕೆಂದರೆ ನಾನು ನಿಮಗೆ ಸದುಪದೇಶವನ್ನು ಮಾಡುವೆನು, ನನ್ನ ಉಪದೇಶವನ್ನು ಬಿಟ್ಟುಬಿಡಬೇಡಿರಿ.
3ನಾನೂ ಕೂಡ ನನ್ನ ತಂದೆಗೆ ನೆಚ್ಚಿನ ಮಗನೂ ನನ್ನ ತಾಯಿಗೆ ಮುದ್ದು ಮಗನೂ ಆಗಿದ್ದೆನು.
4ನನ್ನ ತಂದೆ ನನಗೆ ಬೋಧಿಸಿ ಹೇಳಿದ್ದೇನೆಂದರೆ, “ನನ್ನ ಮಾತುಗಳನ್ನು ಮನಃಪೂರ್ವಕವಾಗಿ ಪಾಲಿಸು; ನನ್ನ ಆಜ್ಞೆಗಳನ್ನು ಕೈಗೊಳ್ಳು, ಆಗ ನೀನು ಬಾಳುವೆ.
5ಜ್ಞಾನವನ್ನು ಪಡೆ, ತಿಳುವಳಿಕೆಯನ್ನು ಸಂಪಾದಿಸು; ನನ್ನ ಮಾತುಗಳನ್ನು ಮರೆಯದಿರು, ಅವುಗಳಿಂದ ದೂರವಾಗಬೇಡ.
6ಜ್ಞಾನವನ್ನು ಬಿಟ್ಟುಬಿಡಬೇಡ, ಆಕೆ ನಿನ್ನನ್ನು ಕಾಪಾಡುವಳು; ಆಕೆಯನ್ನು ಪ್ರೀತಿಸು, ಆಕೆ ನಿನ್ನನ್ನು ಕಾಯುವಳು.
7ಜ್ಞಾನವೇ ಮುಖ್ಯವಾದದ್ದು, ಆದ್ದರಿಂದ ಜ್ಞಾನವನ್ನು ಸಂಪಾದಿಸು; ನಿನ್ನಲ್ಲಿರುವ ಎಲ್ಲಾ ಸಂಪತ್ತನ್ನು ವ್ಯಯಮಾಡಿದರೂ ತಿಳುವಳಿಕೆಯನ್ನು ಪಡೆದುಕೋ.
8ಜ್ಞಾನವನ್ನು ನೀನು ಅಮೂಲ್ಯವೆಂದು ಎಣಿಸು, ಆಕೆಯು ನಿನ್ನನ್ನು ಮೇಲೆತ್ತುವಳು; ಆಕೆಯನ್ನು ನೀನು ಅಪ್ಪಿಕೊ, ಆಕೆಯು ನಿನ್ನನ್ನು ಘನಪಡಿಸುವಳು.
9ಆಕೆಯನ್ನು ನಿನ್ನ ತಲೆಗೆ ಮಹಿಮೆಯ ಕಿರೀಟವಾಗಿರುವಳು; ಆಕೆಯನ್ನು ನಿನಗೆ ಘನತೆಯ ಕಿರೀಟವನ್ನು ಸಮರ್ಪಿಸುವಳು.”
10ಮಗನೇ, ಆಲಿಸಿ ನನ್ನ ಮಾತುಗಳನ್ನು ಸ್ವೀಕರಿಸು, ಆಗ ನಿನ್ನ ಜೀವನದ ವರ್ಷಗಳು ಹೆಚ್ಚುವವು.
11ಜ್ಞಾನ ಮಾರ್ಗದಲ್ಲಿ ನಾನು ನಿನಗೆ ಶಿಕ್ಷಣಕೊಡುವೆನು, ನೇರ ಮಾರ್ಗಗಳಲ್ಲಿ ನಿನ್ನನ್ನು ಮುನ್ನಡಿಸುವೆನು.
12ನೀನು ನಡೆಯುವಾಗ ನಿನ್ನ ಹೆಜ್ಜೆಗೆ ತಡೆಯಾಗದು; ನೀನು ಓಡುವಾಗ ಮುಗ್ಗರಿಸಿ ಬೀಳುವುದಿಲ್ಲ.
13ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೋ, ಅದು ನಿನ್ನಿಂದ ತೊಲಗದೆ ಇರಲಿ; ಸದುಪದೇಶವನ್ನು ಕಾಪಾಡಿಕೋ, ಏಕೆಂದರೆ ಅದು ನಿನ್ನ ಜೀವವಾಗಿದೆ.
14ದುಷ್ಟರ ದಾರಿಯೊಳಗೆ ನೀನು ಪ್ರವೇಶಿಸದಿರು ಕೆಟ್ಟವರ ಮಾರ್ಗದಲ್ಲಿ ನೀನು ಹೋಗಬೇಡ.
15ಆ ದಾರಿಯಿಂದ ತೊಲಗು, ಅದರ ಪಕ್ಕದಲ್ಲಿ ಹಾದು ಹೋಗಬೇಡ; ಅದರಿಂದ ತಪ್ಪಿಸಿಕೊಂಡು, ನಿನ್ನ ಮಾರ್ಗದಲ್ಲಿ ಮುಂದೆ ನಡೆ.
16ಕೇಡು ಮಾಡದಿದ್ದರೆ ದುಷ್ಟರಿಗೆ ನಿದ್ರೆಬಾರದು; ಯಾರನ್ನಾದರೂ ಬೀಳಿಸದಿದ್ದರೆ, ಅವರಿಗೆ ನಿದ್ರೆ ಹತ್ತುವುದಿಲ್ಲ.
17ಅವರಿಗೆ ದುಷ್ಟತನವೇ ಆಹಾರ, ಬಲಾತ್ಕಾರವೇ ಅವರಿಗೆ ದ್ರಾಕ್ಷಾರಸ.
18ನೀತಿವಂತರ ಮಾರ್ಗವು ಮುಂಜಾನೆಯ ಸೂರ್ಯನ ಬೆಳಕಿನಂತೆ ಇದ್ದು, ದಿನದ ಪೂರ್ಣ ಬೆಳಕಿನವರೆಗೂ ಪ್ರಕಾಶಿಸಿ ಹೊಳೆಯುತ್ತಾ ಇರುವುದು.
19ಆದರೆ, ದುಷ್ಟರ ಮಾರ್ಗವು ಕಗ್ಗತ್ತಲಿನಂತಿದೆ. ಅವರು ಯಾವುದಕ್ಕೆ ಎಡವಿ ಬೀಳುತ್ತಾರೋ ಅದು ಅವರಿಗೆ ಗೊತ್ತಾಗದು.
20ಮಗನೇ, ನನ್ನ ಮಾತುಗಳಿಗೆ ಗಮನಕೊಡು; ನನ್ನ ನುಡಿಗಳಿಗೆ ಕಿವಿಗೊಡು.
21ಆ ನುಡಿಗಳು ನಿನ್ನ ಕಣ್ಣುಗಳಿಂದ ತಪ್ಪಿ ಹೋಗದಿರಲಿ; ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ.
22ಏಕೆಂದರೆ ಆ ನುಡಿಗಳನ್ನು ಕಂಡುಕೊಳ್ಳುವವರಿಗೆ ಅವು ಜೀವವೂ, ದೇಹಕ್ಕೆಲ್ಲಾ ಆರೋಗ್ಯವೂ ಆಗಿವೆ.
23ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಏಕೆಂದರೆ ಅದರೊಳಗಿಂದ ನಿನ್ನ ಕೃತ್ಯಗಳು ಜೀವಧಾರೆಯಾಗಿ ಹೊರಡುತ್ತವೆ.
24ವಕ್ರಮಾತುಗಳನ್ನು ನಿನ್ನ ಬಾಯಿಂದ ತೊಲಗಿಸಿ; ಕೆಟ್ಟ ಮಾತುಗಳು ನಿನ್ನ ತುಟಿಗಳಿಂದ ದೂರವಿರಲಿ.
25ನಿನ್ನ ದೃಷ್ಟಿ ನೇರವಾಗಿಯೇ ನೋಡಲಿ; ನಿನ್ನ ನೋಟವು ನೇರವಾಗಿ ನಿನ್ನ ಮುಂದೆಯೇ ನಾಟಿರಲಿ.
26ನೀನು ನಡೆಯುವ ದಾರಿಯ ಬಗ್ಗೆ ಗಮನವಿರಲಿ; ನೀನು ಕೈಗೊಳ್ಳುವ ಹಾದಿ ಸ್ಥಿರವಾಗಿರಲಿ.
27ನಿನ್ನ ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಕಾಲುಗಳು ದೂರವಿರಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.