Micah watches dawn break over the sea while a shepherd gathers a flock on green hills and shadowed city officials exchange bribes behind him

ಮೀಕ 7

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಅಧಿಕಾರಿಗಳು ಸಂಚು ಹೂಡಿ ಆಪ್ತ ಸಂಬಂಧಗಳೂ ಅಸುರಕ್ಷಿತವಾಗುವ ನಂಬಿಗಸ್ತಿಕೆಯಿಲ್ಲದ ಸಮಾಜಕ್ಕಾಗಿ ಮೀಕನು ಪ್ರಲಾಪಿಸುತ್ತಾನೆ. ಆದರೂ ಅವನು ದೇವರಿಗಾಗಿ ಕಾಯುತ್ತಾ ಕತ್ತಲೆಯು ಬೆಳಕಾಗುವುದೆಂದು ನಂಬುತ್ತಾನೆ. ಮುಕ್ತಾಯದ ಪ್ರಾರ್ಥನೆಯು ಕುರುಬತನದ ಪುನಃಸ್ಥಾಪನೆಯನ್ನು ಕೇಳಿ ಕ್ಷಮೆ, ಕರುಣೆ ಮತ್ತು ಒಡಂಬಡಿಕೆಯ ನಂಬಿಗಸ್ತಿಕೆಯನ್ನು ಕೊಂಡಾಡುತ್ತದೆ.
ಭ್ರಷ್ಟತೆಎಚ್ಚರದ ನಿರೀಕ್ಷೆಕುರುಬತನಕರುಣೆಕ್ಷಮೆ
1ಎಂತಹ ಸಂಕಟ ನನ್ನದು! ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವವರ ಹಾಗೆಯೂ ದ್ರಾಕ್ಷಿ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ. ತಿನ್ನುವುದಕ್ಕೆ ಗೊಂಚಲೇ ಇಲ್ಲ. ನನಗೆ ಪ್ರಿಯವಾದ ಮೊದಲು ಮಾಗಿದ ಅಂಜೂರದ ಹಣ್ಣುಗಳೂ ಇಲ್ಲ.
2ನಿಷ್ಠಾವಂತರು ಭೂಮಿಯೊಳಗಿಂದ ನಾಶವಾಗಿದ್ದಾರೆ. ಮನುಷ್ಯರಲ್ಲಿ ಯಥಾರ್ಥನು ಒಬ್ಬನು ಉಳಿದಿಲ್ಲ; ಎಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾ, ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ.
3ಕೆಟ್ಟದ್ದನ್ನು ಎರಡು ಕೈಗಳಿಂದ ಚೆನ್ನಾಗಿ ಮಾಡುವಂತೆ ಆಡಳಿತಗಾರರು ಉಡುಗೊರೆಗಳನ್ನು ಕೇಳುತ್ತಾರೆ. ನ್ಯಾಯಾಧಿಪತಿಗಳು ಲಂಚವನ್ನು ತೆಗೆದುಕೊಳ್ಳುತ್ತಾರೆ. ಶಕ್ತಿಶಾಲಿ ಮನುಷ್ಯನು ತನ್ನ ಕೇಡಿನ ಆಸೆಯನ್ನು ತಾನೇ ಹೇಳುತ್ತಾನೆ; ಅವರೆಲ್ಲರೂ ಒಟ್ಟಾಗಿ ಒಳಸಂಚುಮಾಡುತ್ತಾರೆ.
4ಅವರಲ್ಲಿ ಉತ್ತಮನು ದತ್ತೂರಿಯ ಹಾಗೆಯೂ ಬಹು ಯಥಾರ್ಥನು ಮುಳ್ಳಿನ ಬೇಲಿಯ ಹಾಗೆಯೂ ಇದ್ದಾನೆ. ದೇವರು ನಿನ್ನನ್ನು ಭೇಟಿಮಾಡುವ ದಿನ ಬಂದಿದೆ, ನಿನ್ನ ಕಾವಲುಗಾರರು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಾರೆ. ಈಗ ನೀವು ಭಯಭೀತರಾಗುವ ಸಮಯ.
5ನೆರೆಯವನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸೆ ಇಡಬೇಡಿರಿ; ನಿನ್ನ ಎದೆಯಲ್ಲಿ ಮಲಗುವವಳಿಗೆ ನಿನ್ನ ಬಾಯಿಯ ಬಾಗಿಲುಗಳನ್ನು ಕಾಯಿ.
6ಏಕೆಂದರೆ ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ. ಮಗಳು ತನ್ನ ತಾಯಿಗೂ, ಸೊಸೆಗೂ ಆಕೆಯ ಅತ್ತೆಗೂ ವಿರೋಧವಾಗಿ ಏಳುತ್ತಾರೆ. ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.
7ಆದರೆ ನಾನು ಯೆಹೋವ ದೇವರನ್ನು ಎದುರು ನೋಡುವೆನು. ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು. ನನ್ನ ದೇವರು ನನ್ನ ಕಡೆಗೆ ಕಿವಿಗೊಡುವರು.
8ನನ್ನ ಶತ್ರುವೇ, ನನ್ನ ಮೇಲೆ ಸಂತೋಷ ಪಡಬೇಡ, ನಾನು ಬಿದ್ದಿದ್ದರೂ ತಿರುಗಿ ಏಳುವೆನು. ನಾನು ಕತ್ತಲೆಯಲ್ಲಿ ಕುಳಿತುಕೊಂಡರೂ ಯೆಹೋವ ದೇವರೇ ನನಗೆ ಬೆಳಕಾಗಿರುವರು.
9ನಾನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದರಿಂದ ಅವರು ನನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡೆಸುವ ತನಕ ಅವರ ಕೋಪವನ್ನು ತಾಳುವೆನು. ಆತನು ನನ್ನನ್ನು ಬೆಳಕಿಗೆ ತರುವನು. ಆತನ ನೀತಿಯನ್ನು ನೋಡುವೆನು.
10ಆಗ ನನ್ನ ಶತ್ರು ಇದನ್ನು ನೋಡುವನು. ಅವನ ಮುಖವನ್ನು ಅವಮಾನದಿಂದ ಮುಚ್ಚಿಕೊಳ್ಳುವನು, “ನಿನ್ನ ಯೆಹೋವ ದೇವರು ಎಲ್ಲಿ?” ಎಂದು ನನ್ನನ್ನು ಜರೆದವರೇ ನಾಚಿಕೆಪಡುವರು. ಇದನ್ನು ನಾನು ಕಣ್ಣಾರೆ ಕಾಣುವೆನು. ಆ ಶತ್ರುಗಳಾದರೋ ಬೀದಿಯ ಕಸದಂತೆ ದಾರಿಹೋಕರ ತುಳಿತಕ್ಕೆ ಈಡಾಗುವರು.
11ನಿನ್ನ ಗೋಡೆಗಳು ಪುನಃ ಕಟ್ಟುವ ಆ ದಿವಸ ಬರುವುದು. ಮತ್ತು ನಿಮ್ಮ ಮಿತಿಗಳನ್ನು ಹೆಚ್ಚಿಸುವ ದಿನ ಬರುತ್ತದೆ.
12ಆ ದಿವಸದಲ್ಲಿ ಅಸ್ಸೀರಿಯರಿಂದಲೂ ಈಜಿಪ್ಟ್ ಪಟ್ಟಣಗಳಿಂದಲೂ ಯೂಫ್ರೇಟೀಸ್ ನದಿಯವರೆಗೂ ಸಮುದ್ರದಿಂದ ಸಮುದ್ರದವರೆಗೂ ಬೆಟ್ಟದಿಂದ ಬೆಟ್ಟದವರೆಗೂ ಜನರೆಲ್ಲರು ನಿನ್ನ ಬಳಿಗೆ ಬರುವರು.
13ಆದರೂ ದೇಶವು ಅದರ ನಿವಾಸಿಗಳ ನಿಮಿತ್ತ ಅವರ ದುಷ್ಕ್ರಿಯೆಗಳ ಫಲದಿಂದ ಹಾಳಾಗುವುದು.
14ನಿನ್ನ ಜನರನ್ನೂ ಏಕಾಂತವಾಗಿ ಅಡವಿಯಲ್ಲಿ ಕರ್ಮೆಲಿನ ನಡುವೆ ವಾಸವಾಗಿರುವ ನಿನ್ನ ಬಾಧ್ಯತೆಯ ಮಂದೆಯನ್ನೂ ನಿನ್ನ ಕೋಲಿನಿಂದ ಮೇಯಿಸು. ಅವರು ಪೂರ್ವದ ದಿವಸಗಳಲ್ಲಾದ ಹಾಗೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.
15ನೀನು ಈಜಿಪ್ಟ್ ದೇಶದೊಳಗಿಂದ ಹೊರಡುವ ದಿವಸಗಳ ಹಾಗೆ ಅವರಿಗೆ ಆಶ್ಚರ್ಯವಾದವುಗಳನ್ನು ತೋರಿಸುವೆನು.
16ಜನಾಂಗಗಳು ನೋಡಿ ನಾಚಿಕೊಳ್ಳುವರು ತಮ್ಮ ತಮ್ಮ ಶಕ್ತಿಗೆ ವಂಚಿತರಾಗಿ ನಾಚಿಕೆಪಡುವರು. ತಮ್ಮ ಕೈಗಳನ್ನು ಬಾಯಿಯ ಮೇಲೆ ಇಡುವರು; ಅವರ ಕಿವಿಗಳು ಕಿವುಡಾಗಿ ಹೋಗುವುವು.
17ಅವರು ಹಾವಿನಂತೆ, ನೆಲದ ಮೇಲೆ ತೆವಳುವ ಜೀವಿಗಳಂತೆ ಧೂಳನ್ನು ನೆಕ್ಕುತ್ತಾರೆ. ಅವರು ರಂಧ್ರಗಳಿಂದ ಹೊರಗೆ ಬರುವರು. ನಮ್ಮ ದೇವರಾದ ಯೆಹೋವ ದೇವರಿಗೆ ಅವರು ಹೆದರುವರು. ನಿನಗೆ ಭಯಪಡುವರು.
18ಪಾಪಗಳನ್ನು ಮತ್ತು ಅಪರಾಧಗಳನ್ನು ಮನ್ನಿಸುವವನೂ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ಲಕ್ಷಿಸದವನೂ, ನಿನ್ನ ಹಾಗೆ ಇರುವ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವುದಿಲ್ಲ. ಏಕೆಂದರೆ ನೀವು ಕರುಣೆಯಲ್ಲಿ ಸಂತೋಷಪಡುತ್ತೀರಿ.
19ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ನಮ್ಮ ಪಾಪಗಳನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವನು.
20ನೀನು ಪುರಾತನ ಕಾಲದಿಂದಲೂ ನಮ್ಮ ಪಿತೃಗಳಿಗೆ ಪ್ರಮಾಣಮಾಡಿರುವಂತೆ ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ, ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.