Micah stands above lowland towns as overwhelming light breaks through storm clouds and water streams down mountains toward Samaria and Jerusalem

ಮೀಕ 1

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕರ್ತನು ನ್ಯಾಯತೀರ್ಪಿನಲ್ಲಿ ಬರುವಾಗ ಸಾಕ್ಷಿಯಾಗಲು ಮೀಕನು ಎಲ್ಲಾ ಜನರನ್ನು ಕರೆಯುತ್ತಾನೆ, ಸಂಕೇತವಾಗಿ ಪರ್ವತಗಳು ಕರಗಿ ತಗ್ಗುಗಳು ಸೀಳುತ್ತವೆ. ಸಮಾರ್ಯದ ವಿಗ್ರಹಾರಾಧನೆಯು ನಾಶವನ್ನು ತರುತ್ತದೆ, ಮತ್ತು ವಿಪತ್ತು ಯೆರೂಸಲೇಮಿನ ಬಾಗಿಲನ್ನು ತಲುಪುತ್ತದೆ. ಪದಗಳ ಆಟವು ಯೆಹೂದದ ಪಟ್ಟಣಗಳ ಮೂಲಕ ದುಃಖ, ಅವಮಾನ ಮತ್ತು ದೇಶಭ್ರಷ್ಟತೆಯನ್ನು ಗುರುತಿಸುವಾಗ ಪ್ರವಾದಿಯು ಪ್ರಲಾಪಿಸುತ್ತಾನೆ.
ನ್ಯಾಯತೀರ್ಪುವಿಗ್ರಹಾರಾಧನೆಸಮಾರ್ಯಪ್ರಲಾಪ
1ಯೆಹೂದದ ಅರಸರಾದ ಯೋತಾಮನ ಆಹಾಜನ, ಹಿಜ್ಕೀಯನ, ದಿವಸಗಳಲ್ಲಿ ಮೊರೇಷೆತಿನವನಾದ ಮೀಕನಿಗೆ ಬಂದ ಯೆಹೋವ ದೇವರ ವಾಕ್ಯವು. ಅವನು ಸಮಾರ್ಯ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡ ದರ್ಶನ.
2ಎಲ್ಲಾ ಜನಗಳೇ ಕೇಳಿರಿ, ಭೂಮಿಯೇ, ಅದರಲ್ಲಿರುವವರೆಲ್ಲರೇ, ಕಿವಿಗೊಡಿರಿ. ಸಾರ್ವಭೌಮ ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದೊಳಗಿಂದ ನಿಮಗೆ ವಿರೋಧವಾಗಿ ಸಾಕ್ಷಿ ಹೇಳುವರು.
3ಯೆಹೋವ ದೇವರು ತಮ್ಮ ವಾಸಸ್ಥಾನದಿಂದ ಇಳಿದು ಬರುತ್ತಾರೆ. ಅವರು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ಸಂಚರಿಸುತ್ತಾರೆ.
4ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ರಭಸವಾಗಿ ಹರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವುವು; ತಗ್ಗುಗಳು ಸೀಳುವುವು.
5ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೇ ಇಸ್ರಾಯೇಲಿನ ಮನೆತನದವರ ಪಾಪದಿಂದಲೇ, ಯಾಕೋಬನ ಅಪರಾಧವೇನು? ಅದು ಸಮಾರ್ಯವಲ್ಲವೇ? ಯೆಹೂದದ ಉನ್ನತ ಪೂಜಾಸ್ಥಳ ಯಾವುದು? ಅದು ಯೆರೂಸಲೇಮು ಅಲ್ಲವೋ?
6ಹೀಗಿರುವುದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬವನ್ನಾಗಿಯೂ ದ್ರಾಕ್ಷಿಬಳ್ಳಿ ನೆಡುವ ಸ್ಥಳವನ್ನಾಗಿಯೂ ಮಾಡುವೆನು. ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು, ಅದರ ಅಸ್ತಿವಾರಗಳನ್ನು ಹೊರಗೆಡಹುವೆನು.
7ಅದರ ವಿಗ್ರಹಗಳೆಲ್ಲಾ ತುಂಡುಗಳಾಗುವಂತೆ ಮಾಡುವೆನು. ಅದರ ಆಲಯದ ಕಾಣಿಕೆಗಳೆಲ್ಲಾ ಬೆಂಕಿಯಿಂದ ಸುಟ್ಟುಹೋಗುವುದು. ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು. ಅದು ವೇಶ್ಯಾವೃತ್ತಿಯ ಕೂಲಿಯಿಂದ ಕೂಡಿಸಿಕೊಂಡವು. ವೇಶ್ಯಾವೃತ್ತಿಯ ಕೂಲಿಯನ್ನಾಗಿಯೇ ಅವುಗಳನ್ನು ಉಪಯೋಗಿಸಬೇಕಾಗುತ್ತದೆ.
8ಆದ್ದರಿಂದ ನಾನು ಗೋಳಾಡಿ ಅರಚುವೆನು. ಬರಿಗಾಲಿನಲ್ಲಿಯೂ ಬೆತ್ತಲೆಯಾಗಿಯೂ ಹೋಗುವೆನು. ನರಿಗಳ ಹಾಗೆ ಕೂಗುವೆನು, ಉಷ್ಟ್ರಪಕ್ಷಿಯಂತೆ ನರಳುವೆನು.
9ಸಮಾರ್ಯದ ಗಾಯವು ಗುಣವಾಗದಂಥದ್ದು, ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಿಲಿಗೂ ಯೆರೂಸಲೇಮಿನವರೆಗೂ ಅದು ತಲುಪಿತು.
10ಗತ್ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಬೇತ್ ಒಫ್‌ರಾಹದಲ್ಲಿ ಧೂಳಿನಲ್ಲಿ ಹೊರಳಾಡು.
11ಶಾಫೀರಿನ ನಿವಾಸಿಯೇ, ನಗ್ನತೆಯಿಂದಲೂ ನಾಚಿಕೆಯಿಂದಲೂ ಹಾದುಹೋಗಿರಿ, ಚಾನಾನಿನಲ್ಲಿ ವಾಸಿಸುವವರು ಹೊರಗೆ ಬರುವುದಿಲ್ಲ, ಬೇತ್ ಎಚೆಲು ನರಳುತ್ತಿದೆ. ಅದು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದಿಲ್ಲ.
12ಕೇಡು ಯೆಹೋವ ದೇವರಿಂದ ಇಳಿದು ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ಮೇಲುಂಟಾಗುವುದಿಲ್ಲವೋ ಎಂದು ವೇದನೆ ಪಡುತ್ತಾರೆ.
13ಲಾಕೀಷಿನ ನಿವಾಸಿಗಳೇ, ಕುದುರೆಗಳನ್ನು ರಥಕ್ಕೆ ಕಟ್ಟಿರಿ, ಚೀಯೋನ್ ಮಗಳ ಪಾಪವು ನಿನ್ನಿಂದ ಪ್ರಾರಂಭವಾಯಿತು ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿ ಬಂದವು.
14ಹೀಗಿರುವುದರಿಂದ ಮೋರೆಶತ್ ಗತ್ ಊರಿಗೆ ಅಗಲಿ ಹೋಗುವ ಕಾಣಿಕೆಗಳನ್ನು ಕೊಡುವೆ. ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಮೋಸಮಾಡುವುವು.
15ಮಾರೇಷದ ನಿವಾಸಿಯೇ, ನಿನಗೆ ವಿರೋಧವಾಗಿ ಜಯಶಾಲಿಗಳನ್ನು ನಾನು ತರುವೆನು. ಇಸ್ರಾಯೇಲಿನ ಮಹಿಮೆಯಾದಾತನು ಅದುಲ್ಲಾಮಿನ ಮಟ್ಟಿಗೂ ಬರುವನು.
16ನಿನ್ನ ಮುದ್ದುಮಕ್ಕಳಿಗೋಸ್ಕರ ತಲೆ ಬೋಳಿಸಿಕೊಂಡು ಕ್ಷೌರಮಾಡಿಸಿಕೋ. ನಿನ್ನ ಬೋಳುತನವನ್ನು ಹದ್ದಿನಂತೆ ಮಾಡಿಕೋ. ಏಕೆಂದರೆ ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.