
ಯೋನನು 3
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಎರಡನೆಯ ಬಾರಿ ಕರೆಯಲ್ಪಟ್ಟ ಯೋನನು ನಿನೆವೆಗೆ ಪ್ರಯಾಣಿಸಿ ಅದರ ಮುಂಬರುವ ವಿನಾಶವನ್ನು ಘೋಷಿಸುತ್ತಾನೆ. ಜನರು ಎಚ್ಚರಿಕೆಯನ್ನು ನಂಬಿ, ಉಪವಾಸವನ್ನು ಘೋಷಿಸಿ, ದೊಡ್ಡವರಿಂದ ಚಿಕ್ಕವರವರೆಗೆ ಗೋಣಿತಟ್ಟು ಧರಿಸುತ್ತಾರೆ. ಅರಸನು ಹಿಂಸೆಯಿಂದ ತುರ್ತು ಪಶ್ಚಾತ್ತಾಪವನ್ನು ಆಜ್ಞಾಪಿಸುತ್ತಾನೆ, ಮತ್ತು ಪಟ್ಟಣದ ಬದಲಾದ ನಡತೆಯನ್ನು ನೋಡಿ ದೇವರು ಮನಸ್ಸು ಬದಲಿಸುತ್ತಾನೆ.
ಎರಡನೆಯ ಕರೆನಿನೆವೆಪಶ್ಚಾತ್ತಾಪಕರುಣೆ
1ಯೆಹೋವ ದೇವರ ವಾಕ್ಯವು ಎರಡನೆಯ ಸಾರಿ ಯೋನನಿಗೆ ಬಂದಿತು.
2“ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ, ನಾನು ನಿನಗೆ ಹೇಳಿದ ಸಂದೇಶವನ್ನು ಅದರ ನಿವಾಸಿಗಳಿಗೆ ಸಾರು,” ಎಂದು ಹೇಳಿದರು.
3ಹೀಗೆ ಯೋನನು ಯೆಹೋವ ದೇವರ ಮಾತಿಗೆ ವಿಧೇಯನಾಗಿ ನಿನೆವೆಗೆ ಹೋದನು. ನಿನೆವೆಯು ಮೂರು ದಿವಸದ ಪ್ರಯಾಣದ ಮಹಾ ದೊಡ್ಡ ಪಟ್ಟಣವಾಗಿತ್ತು.
4ಆಗ ಯೋನನು ಒಂದು ದಿವಸದ ಪ್ರಯಾಣಮಾಡಿ, ಪಟ್ಟಣದಲ್ಲಿ ಪ್ರವೇಶಿಸಿ, “ಇನ್ನು ನಾಲ್ವತ್ತು ದಿವಸಗಳಾದ ಮೇಲೆ ನಿನೆವೆ ನಾಶವಾಗುವುದು,” ಎಂದು ಕೂಗಿ ಹೇಳಿದನು.
5ನಿನೆವೆಯ ಮನುಷ್ಯರು, ದೇವರನ್ನು ನಂಬಿ, ಉಪವಾಸವನ್ನು ಸಾರಿ, ಅವರಲ್ಲಿ ದೊಡ್ಡವನು ಮೊದಲುಗೊಂಡು ಚಿಕ್ಕವನವರೆಗೂ ಗೋಣಿತಟ್ಟನ್ನು ಉಟ್ಟುಕೊಂಡರು.
6ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ, ಅವನು ತನ್ನ ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯಲ್ಲಿ ಕುಳಿತುಕೊಂಡನು.
7ಅವನು ನಿನೆವೆಯಲ್ಲಿ ಈ ಘೋಷಣೆಯನ್ನು ಮಾಡಿದನು: “ಅರಸನ ಮತ್ತು ಶ್ರೇಷ್ಠರ ತೀರ್ಪಿನ ಪ್ರಕಾರ: “ಮನುಷ್ಯರಾಗಲಿ, ಮೃಗಗಳಾಗಲಿ, ದನಗಳಾಗಲಿ, ಕುರಿಗಳಾಗಲಿ, ಏನನ್ನೂ ರುಚಿ ನೋಡದಿರಲಿ, ಮೇಯದಿರಲಿ, ನೀರನ್ನು ಕುಡಿಯದಿರಲಿ.
8ಆದರೆ ಮನುಷ್ಯರೂ ಮೃಗಗಳೂ ಗೋಣಿತಟ್ಟು ಹಾಕಿಕೊಂಡು, ಜೋರಾದ ಧ್ವನಿಯಿಂದ ದೇವರಿಗೆ ಮೊರೆಯಿಡಲಿ. ಎಲ್ಲರೂ ತಮ್ಮ ತಮ್ಮ ದುರ್ಮಾರ್ಗಗಳನ್ನೂ, ತಮ್ಮ ತಮ್ಮ ಕೈಗಳಲ್ಲಿರುವ ಹಿಂಸಾಚಾರವನ್ನೂ ಬಿಟ್ಟು ತಿರುಗಲಿ.
9ಹೀಗೆ ಮಾಡಿದರೆ, ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ಅನುಕಂಪದಿಂದ ತಮ್ಮ ಉಗ್ರಕೋಪವನ್ನು ತಡೆದು, ನಾವು ನಾಶವಾಗದೆ ಉಳಿಸುವರೇನೋ, ಯಾರು ಬಲ್ಲರು?”
10ಆಗ ದೇವರು, ನಿನೆವೆಯವರು ತಮ್ಮ ದುರ್ಮಾರ್ಗವನ್ನು ಬಿಟ್ಟು ತಿರುಗಿಕೊಂಡರೆಂದು ಕಂಡು, ತಾವು ವಿಧಿಸುವುದಾಗಿ ನುಡಿದ ವಿನಾಶವನ್ನು ಅವರ ಮೇಲೆ ಬರಮಾಡದೆ, ಅವರನ್ನು ಕನಿಕರಿಸಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.