
ಯೋನನು 2
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಮೀನಿನ ಒಳಗಿನಿಂದ, ಯೋನನು ಅಲೆಗಳು ಮತ್ತು ಕಳೆಗಳಿಂದ ಸುತ್ತುವರಿಯಲ್ಪಟ್ಟು ಮರಣವನ್ನು ಸಮೀಪಿಸುತ್ತಾ ಆಳಕ್ಕೆ ಮುಳುಗಿದ್ದನ್ನು ವಿವರಿಸುತ್ತಾನೆ. ಕರ್ತನನ್ನು ನೆನಪಿಸಿಕೊಂಡು ದೇವಾಲಯದ ಕಡೆಗೆ ಪ್ರಾರ್ಥನೆಯನ್ನು ನಿರ್ದೇಶಿಸಿ, ಖಾಲಿ ವಿಗ್ರಹಗಳನ್ನು ಸ್ಥಿರ ಕರುಣೆಯೊಂದಿಗೆ ಹೋಲಿಸುತ್ತಾನೆ. ಯೋನನು ಕೃತಜ್ಞತೆಯ ಹರಕೆ ಮಾಡಿ, ರಕ್ಷಣೆಯು ದೇವರದೆಂದು ಘೋಷಿಸಿ, ಬಿಡುಗಡೆಯಾಗುತ್ತಾನೆ.
ಪ್ರಾರ್ಥನೆವಿಮೋಚನೆಕೃತಜ್ಞತೆರಕ್ಷಣೆ
1ಆಗ ಯೋನನು ಮೀನಿನ ಹೊಟ್ಟೆಯೊಳಗಿಂದ ತನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು.
2ಅವನು ಹೀಗೆ ಹೇಳಿದನು: “ನಾನು ನನ್ನ ವ್ಯಥೆಯಲ್ಲಿ ಯೆಹೋವ ದೇವರಿಗೆ ಮೊರೆಯಿಟ್ಟೆನು. ಅವರು ನನ್ನ ಕೂಗನ್ನು ಕೇಳಿದರು. ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ನಾನು ಕೂಗಿದೆನು, ಆಗ ನನ್ನ ಕರೆಯನ್ನು ನೀವು ಕೇಳಿದಿರಿ.
3ನನ್ನನ್ನು ನೀವು ಅಗಾಧದಲ್ಲಿಯೂ, ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿರಿ. ಪ್ರವಾಹಗಳು ನನ್ನನ್ನು ಸುತ್ತಿಕೊಂಡವು. ನಿಮ್ಮ ಎಲ್ಲಾ ಅಲೆಗಳೂ ನಿಮ್ಮ ತೆರೆಗಳೂ ನನ್ನ ಮೇಲೆ ದಾಟಿಹೋದವು.
4ಆಗ ನಾನು ಹೇಳಿದ್ದು, ‘ನಿಮ್ಮ ಕಣ್ಣುಗಳ ಎದುರಿನಿಂದ ಬಹಿಷ್ಕೃತನಾಗಿದ್ದೇನೆ. ಆದರೂ ನಾನು ನಿಮ್ಮ ಪರಿಶುದ್ಧ ಮಂದಿರದ ಕಡೆಗೆ ಪುನಃ ನೋಡುವೆನು.’
5ನನ್ನನ್ನು ಸುತ್ತುತ್ತಿದ್ದ ನೀರು, ನನ್ನನ್ನು ಭಯಪಡಿಸಿತು. ಅಗಾಧವು ನನ್ನನ್ನು ಸುತ್ತಲೂ ಮುಚ್ಚಿಕೊಂಡಿತು. ಜಂಬು ಹುಲ್ಲು ನನ್ನ ತಲೆಗೆ ಸುತ್ತಲಾಗಿತ್ತು.
6ಬೆಟ್ಟಗಳ ಅಡಿಗಳ ಪರ್ಯಂತರ ಇಳಿದು ಹೋದೆನು. ಕೆಳಗಿನ ಭೂಮಿಯು ನನ್ನನ್ನು ಶಾಶ್ವತವಾಗಿ ನಿರ್ಬಂಧಿಸಿತು. ಆದರೂ ದೇವರಾದ ನನ್ನ ಯೆಹೋವ ದೇವರೇ, ನೀವು ನನ್ನ ಪ್ರಾಣವನ್ನು ತಗ್ಗಿನಿಂದ ಮೇಲಕ್ಕೆ ಎಬ್ಬಿಸಿದ್ದೀರಿ.
7“ನನ್ನ ಪ್ರಾಣವು ನನ್ನಲ್ಲಿ ಕುಂದಿ ಹೋದಾಗ, ಯೆಹೋವ ದೇವರೇ ನಿಮ್ಮನ್ನು ಜ್ಞಾಪಕಮಾಡಿಕೊಂಡೆನು. ನನ್ನ ಪ್ರಾರ್ಥನೆಯು ನಿಮ್ಮ ಬಳಿಗೆ ನಿಮ್ಮ ಪರಿಶುದ್ಧ ಮಂದಿರದೊಳಗೆ ಬಂದಿತು.
8“ನಿರುಪಯೋಗ ಮೂರ್ತಿಗಳಿಗೆ ಅಂಟಿಕೊಳ್ಳುವವರು, ಅವರದಾಗುವ ದೇವರ ಪ್ರೀತಿಯನ್ನು ಕಳೆದುಕೊಳ್ಳುವರು.
9ಆದರೆ ನಾನು ಸ್ತೋತ್ರದ ಗೀತೆಯಿಂದ ನಿಮಗೆ ಬಲಿ ಅರ್ಪಿಸುವೆನು. ನಾನು ಮಾಡಿದ ಹರಕೆಯನ್ನು ತೀರಿಸುವೆನು. ಆಗ ನಾನು, ‘ರಕ್ಷಣೆಯು ಯೆಹೋವ ದೇವರಿಂದಲೇ ಬರುವುದು,’ ಎಂದು ಹೇಳಿದನು.”
10ಆಗ ಯೆಹೋವ ದೇವರು ಮೀನಿಗೆ ಹೇಳಿದ್ದರಿಂದ, ಅದು ಯೋನನನ್ನು ಒಣಭೂಮಿಯ ಮೇಲೆ ಕಾರಿಬಿಟ್ಟಿತು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.