
ಯೋಬ 26
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ತನ್ನ ಸ್ನೇಹಿತರು ಶಕ್ತಿಹೀನರಿಗೆ ಹೇಗೆ ಸಹಾಯ ಮಾಡಿದ್ದಾರೆ ಎಂದು ಯೋಬನು ಕೇಳುತ್ತಾನೆ, ನಂತರ ತನ್ನ ಸ್ವಂತ ವರ್ಣನೆಗಳಿಂದ ಅವರನ್ನು ಮೀರಿಸುತ್ತಾನೆ. ಸತ್ತವರು ನೀರುಗಳ ಕೆಳಗೆ ನಡುಗುತ್ತಾರೆ, ಭೂಮಿ ಶೂನ್ಯದ ಮೇಲೆ ನೇತಾಡುತ್ತದೆ, ಮೋಡಗಳು ಒಡೆಯದೆ ನೀರನ್ನು ಹಿಡಿದಿಡುತ್ತವೆ, ಮತ್ತು ದೇವರ ಶಕ್ತಿಯಿಂದ ಸಮುದ್ರ ಶಾಂತವಾಗುತ್ತದೆ. ಇದೆಲ್ಲವೂ ಅವನ ಮಾರ್ಗಗಳ ಹೊರ ಅಂಚು ಮಾತ್ರ ಎಂದು ಅವನು ಹೇಳುತ್ತಾನೆ.
ಸೃಷ್ಟಿದೈವಿಕ ಶಕ್ತಿರಹಸ್ಯಜ್ಞಾನ
1ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು:
2“ಶಕ್ತಿ ಇಲ್ಲದವನಿಗೆ ನೀನು ಹೇಗೆ ಸಹಾಯ ಮಾಡಿದೆ? ತ್ರಾಣವಿಲ್ಲದ ಕೈಯನ್ನು ಹೇಗೆ ರಕ್ಷಿಸಿದೆ?
3ಜ್ಞಾನವಿಲ್ಲದವನಿಗೆ ಏನು ಬುದ್ಧಿವಾದ ಹೇಳಿರುವೆ? ನೀನು ಯಾವ ವಿವೇಕದ ಮಾತುಗಳನ್ನು ಬಹಳವಾಗಿ ಪ್ರದರ್ಶಿಸಿದೆ.
4ಈ ಮಾತುಗಳನ್ನು ಹೇಳಲು ನಿನಗೆ ಯಾರು ಸಹಾಯ ಮಾಡಿದರು? ಯಾರ ಆತ್ಮವು ನಿನ್ನ ಬಾಯಿಂದ ಮಾತಾಡಿದ್ದು?
5“ಸಾಗರದ ಕೆಳಗಿನ ಲೋಕದಲ್ಲಿ ವಾಸಿಸುವ ಸತ್ತವರ ಆತ್ಮಗಳು ಆಳವಾದ ಯಾತನೆಯಲ್ಲಿವೆ.
6ಪಾತಾಳವು ದೇವರ ದೃಷ್ಟಿಗೆ ತೆರೆದಿದೆ; ನಾಶಲೋಕವು ದೇವರಿಗೆ ಮರೆಯಾಗಿಲ್ಲ.
7ದೇವರು ಉತ್ತರ ದಿಕ್ಕಿನ ಆಕಾಶವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾರೆ; ದೇವರು ಭೂಮಿಯನ್ನು ಏನೂ ಇಲ್ಲದರ ಮೇಲೆ ತೂಗು ಹಾಕಿದ್ದಾರೆ.
8ತಮ್ಮ ಮೇಘಗಳಲ್ಲಿ ನೀರನ್ನು ತುಂಬಿ ಕಟ್ಟುತ್ತಾರೆ; ಆದರೂ ಮೋಡವು ಅದರ ಭಾರದಿಂದ ಒಡೆದುಹೋಗುವುದಿಲ್ಲ.
9ದೇವರು ತಮ್ಮ ಪೂರ್ಣಚಂದ್ರ ಸಿಂಹಾಸನವನ್ನು ಮರೆಮಾಡುತ್ತಾರೆ. ಅದರ ಮುಂದೆ ಮೋಡವನ್ನು ಕವಿಸುತ್ತಾರೆ.
10ಬೆಳಕು ಮತ್ತು ಕತ್ತಲುಗಳ ಸಂಧಿಸುವ ಸ್ಥಾನದಲ್ಲಿ, ಸಮುದ್ರದ ಮೇಲೆ ಸುತ್ತಲೂ ವೃತ್ತ ಮೇರೆಯನ್ನು ಹಾಕಿದ್ದಾರೆ.
11ಆಕಾಶಮಂಡಲದ ಸ್ತಂಭಗಳು ಕಂಪಿಸುತ್ತವೆ; ದೇವರ ಗದರಿಕೆಗೆ ಅವು ಬೆರಗಾಗಿ ಕದಲುತ್ತವೆ.
12ದೇವರು ತಮ್ಮ ಶಕ್ತಿಯಿಂದ ಸಮುದ್ರವನ್ನು ಕಲಕಿದ್ದಾರೆ; ದೇವರು ತಮ್ಮ ಜ್ಞಾನದಿಂದ ಘಟಸರ್ಪನಾದ ರಹಾಬನನ್ನು ಹೊಡೆದುಹಾಕುತ್ತಾರೆ.
13ದೇವರ ಶ್ವಾಸದಿಂದ ಆಕಾಶಮಂಡಲವು ಶುಭ್ರವಾಗಿದೆ; ದೇವರು ಹಸ್ತವು ಹರಿದೋಡುವ ಸರ್ಪವನ್ನು ಇರಿಯುತ್ತದೆ.
14ಇಗೋ, ಇವು ದೇವರ ಕಾರ್ಯಗಳಲ್ಲಿ ಕೆಲವು ಮಾತ್ರ; ದೇವರನ್ನು ಕುರಿತು ಪಿಸುಧ್ವನಿ ಮಾತ್ರ ಕೇಳಿದ್ದೇವೆ; ಹಾಗಾದರೆ, ದೇವರ ಪರಾಕ್ರಮದ ಗುಡುಗನ್ನು ಯಾರು ಗ್ರಹಿಸಿಕೊಳ್ಳುವರು?”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.