Priests, rulers, and people stand trapped behind a hunter's net as a lion's shadow looms over the road ahead

ಹೋಶೇಯ 5

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ತಮ್ಮ ನಾಯಕತ್ವವು ಬಲೆಯಾದ ಕಾರಣ ಯಾಜಕರು, ಆಡಳಿತಗಾರರು ಮತ್ತು ಇಸ್ರಾಯೇಲನ್ನು ಲೆಕ್ಕಕ್ಕೆ ಕರೆಯಲಾಗುತ್ತದೆ. ಅಹಂಕಾರವು ನಿಜವಾದ ಮರಳುವಿಕೆಯನ್ನು ತಡೆಯುತ್ತದೆ, ಮತ್ತು ನ್ಯಾಯತೀರ್ಪು ಸಿಂಹದಂತೆ ಹೊಡೆಯುವ ಮೊದಲು ಕೊಳೆಯುವಿಕೆಯಂತೆ ಹರಡುತ್ತದೆ. ಇಸ್ರಾಯೇಲ್ ಮತ್ತು ಯೆಹೂದವು ಅಶ್ಶೂರದಿಂದ ಸಹಾಯವನ್ನು ಹುಡುಕುತ್ತವೆ, ಆದರೆ ಅನ್ಯ ಶಕ್ತಿಯು ಅವರನ್ನು ಸ್ವಸ್ಥಪಡಿಸಲಾರದು.
ನಾಯಕತ್ವಅಹಂಕಾರನ್ಯಾಯತೀರ್ಪುಸುಳ್ಳು ಭದ್ರತೆ
1“ಯಾಜಕರೇ, ಇದನ್ನು ನೀವು ಕೇಳಿರಿ; ಇಸ್ರಾಯೇಲಿನ ಮನೆತನದವರೇ ಕೇಳಿಸಿಕೊಳ್ಳಿರಿ; ಅರಸನ ಮನೆಯವರೇ ಕಿವಿಗೊಡಿರಿ. ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದ ಕಾರಣ ನಿಮಗೆ ವಿರುದ್ಧವಾಗಿ ಈ ನ್ಯಾಯತೀರ್ಪು ಬಂದಿದೆ.
2ನನಗೆ ತಿರುಗಿಬಿದ್ದವರು ಅಗಾಧವಾದ ಕೊಲೆಯನ್ನು ಮಾಡುವುದರಲ್ಲಿ ಮಗ್ನರಾಗಿದ್ದರೆ. ಆದರೂ ನಾನು ಅವರೆಲ್ಲರನ್ನು ಶಿಕ್ಷಿಸುವವನಾಗಿದ್ದೇನೆ.
3ನಾನು ಎಫ್ರಾಯೀಮನ್ನು ಬಲ್ಲೆನು, ಇಸ್ರಾಯೇಲು ನನಗೆ ಮರೆಯಾದದ್ದಲ್ಲ. ಏಕೆಂದರೆ ಎಫ್ರಾಯೀಮೇ, ನೀನು ಈಗಲೇ ವ್ಯಭಿಚಾರ ಮಾಡಲು ತಿರುಗಿಕೊಂಡಿದ್ದೀ. ಇಸ್ರಾಯೇಲು ಸಹ ಅಪವಿತ್ರವಾಯಿತು.
4“ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳದಂತೆ, ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರದ ಆತ್ಮವು ಅವರ ಹೃದಯದಲ್ಲಿದೆ. ಅವರು ಯೆಹೋವ ದೇವರನ್ನು ಸ್ವೀಕರಿಸಿಕೊಳ್ಳುವುದಿಲ್ಲ.
5ಇಸ್ರಾಯೇಲಿನ ಗರ್ವವು ಅವರ ಮುಖದ ಮುಂದೆ ಸಾಕ್ಷಿಕೊಡುತ್ತದೆ. ಇಸ್ರಾಯೇಲು ಮತ್ತು ಎಫ್ರಾಯೀಮು ತಮ್ಮ ಪಾಪದಲ್ಲಿ ಎಡವಿ ಬೀಳುವವು. ಯೆಹೂದವು ಸಹ ಅವರೊಂದಿಗೆ ಬೀಳುವುದು.
6ಅವರು ಯೆಹೋವ ದೇವರನ್ನು ಹುಡುಕುವುದಕ್ಕೆ ತಮ್ಮ ದನಕುರಿಗಳೊಂದಿಗೂ ಹೋಗುವರು. ಆದರೆ ಆತನು ಅವರಿಂದ ತನ್ನನ್ನು ಹಿಂದೆಗೆದುಕೊಂಡಿದ್ದರಿಂದ, ಅವರು ಆತನನ್ನು ಕಾಣುವುದೇ ಇಲ್ಲ.
7ಅವರು ಯೆಹೋವ ದೇವರಿಗೆ ಅಪನಂಬಿಗಸ್ತರಾಗಿದ್ದಾರೆ. ಅವರು ವ್ಯಭಿಚಾರದ ಮಕ್ಕಳನ್ನು ಪಡೆದಿದ್ದಾರೆ. ಅವರು ತಮ್ಮ ಅಮಾವಾಸ್ಯೆ ಹಬ್ಬಗಳನ್ನು ಆಚರಿಸಿದಾಗ, ಅವರ ಹೊಲಗಳು ನುಂಗಿಬಿಡಲಾಗುವವು.
8“ಗಿಬೆಯದಲ್ಲಿ ತುತೂರಿಯನ್ನೂ ರಾಮದಲ್ಲಿ ಕೊಂಬನ್ನೂ ಊದಿರಿ. ಬೆನ್ಯಾಮೀನೇ, ನಿನ್ನ ಹಿಂದೆ ನೋಡು! ಬೇತಾವೆನಿನಲ್ಲಿ ಗಟ್ಟಿಯಾಗಿ ಕೂಗು.
9ಎಫ್ರಾಯೀಮು ಗದರಿಸುವ ದಿವಸದಲ್ಲೇ ಹಾಳಾಗುವುದು. ಇಸ್ರಾಯೇಲಿನ ಗೋತ್ರಗಳಲ್ಲಿ ನಾನು ನಿಶ್ಚಯವಾಗಿ ಆಗುವಂಥದ್ದನ್ನೇ ತಿಳಿಸಿದ್ದೇನೆ.
10ಯೆಹೂದದ ನಾಯಕರು ಮೇರೆಗಳನ್ನು ಸರಿಸುವವರ ಹಾಗೆ ಇದ್ದರು. ಅವರ ಮೇಲೆ, ನೀರಿನ ಪ್ರವಾಹದಂತೆ ನನ್ನ ಕೋಪವನ್ನು ಸುರಿಸುವೆನು.
11ಎಫ್ರಾಯೀಮು, ವಿಗ್ರಹಗಳನ್ನು ಅನುಸರಿಸಲು ಮನಸ್ಸು ಮಾಡಿದ ಕಾರಣ, ಅವನು ನ್ಯಾಯತೀರ್ಪಿಗೆ ಗುರಿಯಾಗಿ, ಹಿಂಸೆಗೆ ಒಳಗಾದನು.
12ನಾನು ಎಫ್ರಾಯೀಮಿಗೆ ನುಸಿಯ ಹಾಗೆಯೂ, ಯೆಹೂದದ ಮನೆತನದವರಿಗೆ ಕೊಳೆಯುವಿಕೆಯ ಹಾಗೆಯೂ ಇರುವೆನು.
13“ಎಫ್ರಾಯೀಮು ತನ್ನ ರೋಗವನ್ನು ಯೆಹೂದವು ತನ್ನ ಗಾಯವನ್ನು ನೋಡಿದಾಗ, ಎಫ್ರಾಯೀಮ್ ಅಸ್ಸೀರಿಯಕ್ಕೆ ತಿರುಗಿ, ಸಹಾಯಕ್ಕಾಗಿ ಮಹಾ ಅರಸನ ಬಳಿಗೆ ಕಳುಹಿಸಿತು. ಆದರೆ ನಿಮ್ಮನ್ನು ಗುಣಪಡಿಸಲು ಅವನು ಶಕ್ತನಲ್ಲ. ನಿಮ್ಮ ಗಾಯವನ್ನು ಗುಣಪಡಿಸಲಾರನು.
14ಏಕೆಂದರೆ ನಾನು ಎಫ್ರಾಯೀಮಿಗೆ ಸಿಂಹದ ಹಾಗೆಯೂ, ಯೆಹೂದದ ಮನೆತನದವರಿಗೆ ಪ್ರಾಯದ ಸಿಂಹದ ಹಾಗೆಯೂ ಇರುವೆನು. ನಾನೇ ಅವರನ್ನು ಸೀಳಿಬಿಟ್ಟು ಹೋಗುವೆನು. ನಾನು ಎತ್ತಿಕೊಂಡು ಹೋಗಲು, ಅವರನ್ನು ಯಾರೂ ಬಿಡಿಸಲಾರರು.
15ಅಪರಾಧಗಳನ್ನು ಅರಿಕೆಮಾಡಿ, ನನ್ನ ಮುಖವನ್ನು ಹುಡುಕುವವರೆಗೂ, ನಾನು ತಿರುಗಿಕೊಂಡು ನನ್ನ ಗುಹೆಗೆ ಹೋಗುವೆನು. ಅವರ ಕಷ್ಟದಲ್ಲಿ ಅವರು ನನ್ನನ್ನು ಬೇಗ ಹುಡುಕುವರು.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.