Hosea and Gomer stand solemnly with their three children between a sunlit valley and a city beneath gathering storm

ಹೋಶೇಯ 1

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವರು ಹೋಶೇಯನಿಗೆ ಗೋಮೆರಳನ್ನು ಮದುವೆಯಾಗುವಂತೆ ಆಜ್ಞಾಪಿಸುತ್ತಾನೆ, ಮತ್ತು ಅವರ ಕುಟುಂಬವು ಇಸ್ರಾಯೇಲಿಗೆ ಜೀವಂತ ಸೂಚನೆಯಾಗುತ್ತದೆ. ಅವರ ಮೂವರು ಮಕ್ಕಳ ಹೆಸರುಗಳು ನ್ಯಾಯತೀರ್ಪು, ಹಿಂತೆಗೆದ ಕರುಣೆ ಮತ್ತು ಮುರಿದ ಸೇರುವಿಕೆಯನ್ನು ಘೋಷಿಸುತ್ತವೆ, ಆದರೂ ನವೀಕೃತ ಐಕ್ಯತೆ ಮತ್ತು ಅಸಂಖ್ಯಾತ ವಂಶಜರ ವಾಗ್ದಾನದೊಂದಿಗೆ ಅಧ್ಯಾಯ ಕೊನೆಗೊಳ್ಳುತ್ತದೆ.
ಪ್ರವಾದನಾ ಸೂಚನೆಒಡಂಬಡಿಕೆಯ ಅಪನಂಬಿಗಸ್ತಿಕೆನ್ಯಾಯತೀರ್ಪುಪುನಃಸ್ಥಾಪನೆ
1ಯೆಹೂದದ ಅರಸರಾದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ದಿನಗಳಲ್ಲಿಯೂ ಬೆಯೇರಿಯನ ಮಗ ಹೋಶೇಯನಿಗೆ ಯೆಹೋವ ದೇವರ ವಾಕ್ಯವು ಬಂದಿತು.
2ಯೆಹೋವ ದೇವರು ಹೋಶೇಯನೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಯೆಹೋವ ದೇವರು ಹೋಶೇಯನಿಗೆ, “ನೀನು ಹೋಗಿ ವ್ಯಭಿಚಾರಿಣಿಯೊಬ್ಬಳನ್ನು ಮದುವೆ ಮಾಡಿಕೋ ಮತ್ತು ಆಕೆಗೆ ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ. ಏಕೆಂದರೆ ಈ ದೇಶವು ನನ್ನನ್ನು ತೊರೆದುಬಿಟ್ಟು, ವ್ಯಭಿಚಾರಿಣಿಯಾದ ಹೆಂಡತಿಯಂತೆ ಯೆಹೋವ ದೇವರಿಗೆ ದ್ರೋಹ ಬಗೆದಿದೆ,” ಎಂದು ಹೇಳಿದರು.
3ಆಗ ಅವನು ಹೋಗಿ ದಿಬ್ಲಯಿಮನ ಮಗಳಾದ ಗೋಮೆರಳನ್ನು ಮದುವೆಯಾದನು. ಅವಳು ಗರ್ಭಿಣಿಯಾಗಿ ಅವನಿಗೆ ಒಬ್ಬ ಮಗನನ್ನು ಹೆತ್ತಳು.
4ಆಗ ಯೆಹೋವ ದೇವರು ಹೋಶೇಯನಿಗೆ, “ಈ ಮಗುವಿಗೆ ಇಜ್ರೆಯೇಲ್ ಎಂದು ಹೆಸರಿಡು. ಏಕೆಂದರೆ ಶೀಘ್ರದಲ್ಲಿಯೇ ನಾನು ಇಜ್ರೆಯೇಲ್ ಕಣಿವೆಯಲ್ಲಿ ರಕ್ತವನ್ನು ಸುರಿಸಿದ ಯೇಹುವಿನ ಮನೆತನದವರ ಮೇಲೆ ಮುಯ್ಯಿತೀರಿಸಿಕೊಳ್ಳುವೆನು. ಇಸ್ರಾಯೇಲ್ ರಾಜ್ಯವನ್ನು ಅಂತ್ಯಗೊಳಿಸುವೆನು.
5ಆ ದಿನದಲ್ಲಿ, ನಾನು ಇಸ್ರಾಯೇಲಿನ ಬಿಲ್ಲು ಶಕ್ತಿಯನ್ನು ಇಜ್ರೆಯೇಲ್ ಕಣಿವೆಯಲ್ಲಿ ಮುರಿದು ಹಾಕುವೆನು,” ಎಂದು ಹೇಳಿದರು.
6ಗೋಮೆರಳು ಪುನಃ ಗರ್ಭಿಣಿಯಾಗಿ ಹೆಣ್ಣು ಮಗುವನ್ನು ಹೆತ್ತಳು. ಆಗ ಯೆಹೋವ ದೇವರು ಹೋಶೇಯನಿಗೆ, “ಅವಳನ್ನು ‘ಲೋರುಹಾಮಾ ’ ಎಂಬ ಹೆಸರಿನಿಂದ ಕರೆ. ಏಕೆಂದರೆ ನಾನು ಇನ್ನು ಮೇಲೆ ಇಸ್ರಾಯೇಲಿನ ಮನೆತನದವರಿಗೆ ಪ್ರೀತಿ ತೋರಿಸುವುದೇ ಇಲ್ಲ, ಅವರನ್ನು ಯಾವ ರೀತಿಯೂ ಕ್ಷಮಿಸುವದಿಲ್ಲ.
7ಆದರೆ ನಾನು ಯೆಹೂದದ ಮನೆತನದವರನ್ನು ಪ್ರೀತಿಸಿ ಅವರನ್ನು ಬಿಲ್ಲುಬಾಣ, ಖಡ್ಗ, ಕಾಳಗ, ಕುದುರೆ ರಾಹುತರು ಇವುಗಳಿಂದಲ್ಲ, ಅವರನ್ನು ಅವರ ದೇವರಾದ ನಾನೇ ಯೆಹೋವ ದೇವರೇ ರಕ್ಷಿಸುವೆನು,” ಎಂದು ಹೇಳಿದರು.
8ಗೋಮೆರಳು ಲೋರುಹಾಮಾಳನ್ನು ಎದೆಹಾಲಿನ ಸೇವನೆಯಿಂದ ಬಿಡಿಸಿದ ಮೇಲೆ ಪುನಃ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.
9ಆಗ ಯೆಹೋವ ದೇವರು, “ ‘ಅವನ ಹೆಸರನ್ನು ಲೋ ಅಮ್ಮಿ ಎಂದು ಕರೆ. ಏಕೆಂದರೆ ನೀವು ನನ್ನ ಜನರಲ್ಲ, ನಾನು ನಿಮ್ಮ ದೇವರಾಗಿರುವುದಿಲ್ಲ,’ ಎಂದು ಹೇಳಿದರು.
10“ಆದರೂ ಇಸ್ರಾಯೇಲ್ ಜನರು ಅಳೆಯುವುದಕ್ಕೂ ಎಣಿಸುವುದಕ್ಕೂ ಅಸಾಧ್ಯವಾದ ಕಡಲತೀರದ ಮರಳಿನಂತಾಗುವರು. ದೇವರು ಯಾವ ಸ್ಥಳದಲ್ಲಿ ಅವರನ್ನು, ‘ನೀವು ನನ್ನ ಜನರಲ್ಲ’ ಎಂದಿದ್ದಾರೋ ಆ ಸ್ಥಳದಲ್ಲಿಯೇ, ‘ನೀವು ಜೀವಸ್ವರೂಪಿಯಾದ ದೇವರ ಮಕ್ಕಳು’ ಎನಿಸಿಕೊಳ್ಳುವ ದಿನ ಬರುವುದು.
11ಆಗ ಯೆಹೂದದ ಜನರು ಮತ್ತು ಇಸ್ರಾಯೇಲ್ ಜನರು ಒಟ್ಟುಗೂಡಿಕೊಂಡು ತಮಗೆ ಒಬ್ಬ ನಾಯಕನನ್ನು ನೇಮಕ ಮಾಡಿಕೊಂಡು, ದೇಶದೊಳಗಿಂದ ಹೊರಗೆ ಬರುವರು. ಏಕೆಂದರೆ ಇಜ್ರೆಯೇಲಿನ ಆ ದಿನವು ಮಹಾದಿನವಾಗಿರುವುದು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.