
3 ಯೋಹಾನನು 1
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಸತ್ಯದಲ್ಲಿ ನಡೆದು ಪ್ರಯಾಣಿಸುವ ವಿಶ್ವಾಸಿಗಳಿಗೆ ಉದಾರವಾಗಿ ಸಹಾಯ ಮಾಡುವ ಗಾಯನನ್ನು ಹಿರಿಯನು ಶ್ಲಾಘಿಸುತ್ತಾನೆ. ಮೊದಲ ಸ್ಥಾನವನ್ನು ಬಯಸಿ ಇತರರನ್ನು ತಿರಸ್ಕರಿಸುವ ದಿಯೊತ್ರೇಫನು ವಿರುದ್ಧ ಉದಾಹರಣೆಯಾಗಿದ್ದಾನೆ; ದೇಮೇತ್ರಿಯನು ಅನುಕರಣೆಗೆ ಯೋಗ್ಯವಾದ ಒಳ್ಳೆಯ ಸಾಕ್ಷಿಯನ್ನು ಪಡೆಯುತ್ತಾನೆ.
ಅತಿಥಿಸತ್ಕಾರಸತ್ಯಸೇವಕ ನಾಯಕತ್ವಒಳ್ಳೆಯ ಸಾಕ್ಷಿ
1ಹಿರಿಯನು, ಸತ್ಯದಲ್ಲಿ ಬಹಳವಾಗಿ ಪ್ರೀತಿಸುವ ಗಾಯನಿಗೆ ಬರೆಯುವುದು:
2ಪ್ರಿಯ ಸ್ನೇಹಿತನೇ, ನಿನ್ನ ಆತ್ಮವು ಅಭಿವೃದ್ಧಿ ಹೊಂದಿರುವ ಪ್ರಕಾರವೇ, ಎಲ್ಲಾ ವಿಷಯಗಳಲ್ಲಿಯೂ ನೀನು ಆರೋಗ್ಯವೂ ಅಭಿವೃದ್ಧಿಯೂ ಹೊಂದಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ.
3ನಿನ್ನಲ್ಲಿ ಸತ್ಯಕ್ಕಾಗಿರುವ ನಂಬಿಗಸ್ತಿಕೆಯ ಕುರಿತು ಸಹೋದರರು ಬಂದು ಸಾಕ್ಷೀಕರಿಸಿದ್ದರಿಂದ ನಾನು ಬಹಳವಾಗಿ ಸಂತೋಷಪಟ್ಟೆನು.
4ನನ್ನ ಮಕ್ಕಳು ಸತ್ಯವನ್ನು ಅನುಸರಿಸಿ ಬಾಳುತ್ತಿದ್ದಾರೆಂದು ಕೇಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.
5ಪ್ರಿಯ ಸ್ನೇಹಿತನೇ, ಸಹೋದರರಿಗೂ ಪರಿಚಯವಿಲ್ಲದವರಿಗೂ ನೀನು ಮಾಡುವುದನ್ನೆಲ್ಲಾ ನಂಬಿಗಸ್ತನಾಗಿ ಮಾಡುತ್ತೀ.
6ಅವರು ಸಭೆಯ ಮುಂದೆ ನಿನ್ನ ಪ್ರೀತಿಗೆ ಸಾಕ್ಷಿ ಹೇಳಿದರು. ಅವರನ್ನು ನೀನು ದೇವರು ಮೆಚ್ಚುವ ರೀತಿಯಲ್ಲಿ ಸಾಗಕಳುಹಿಸಿದರೆ ನೀನು ಒಳ್ಳೆಯದನ್ನು ಮಾಡುತ್ತೀ.
7ಏಕೆಂದರೆ ಅವರು ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತವಾಗಿ ಹೊರಟು ಹೋಗಿದ್ದಾರೆ. ಅವಿಶ್ವಾಸಿಗಳಿಂದ ಏನೂ ತೆಗೆದುಕೊಳ್ಳುವವರಲ್ಲ.
8ಆದ್ದರಿಂದ ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ ಅಂಥವರನ್ನು ಉಪಚರಿಸಬೇಕು.
9ಸಭೆಗೆ ನಾನು ಬರೆದಿದ್ದೆನು. ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮನ್ನು ಅಂಗೀಕರಿಸುವುದಿಲ್ಲ.
10ಆದಕಾರಣ ನಾನು ಬಂದಾಗ ನಮ್ಮನ್ನು ದೂಷಿಸಿ ನಮ್ಮ ವಿಷಯದಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನಾಡುವ ಅವನ ಕೃತ್ಯಗಳನ್ನು ಜ್ಞಾಪಕ ಮಾಡುವೆನು. ಅವನು ಇದರಲ್ಲಿ ತೃಪ್ತನಾಗದೆ, ಸಹೋದರರನ್ನು ತಾನೂ ಸೇರಿಸಿಕೊಳ್ಳದೆ, ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿ ಮಾಡುತ್ತಾ, ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಿದ್ದಾನೆ.
11ಪ್ರಿಯ ಸ್ನೇಹಿತನೇ, ನೀನು ಕೆಟ್ಟದ್ದನ್ನು ಅನುಸರಿಸದೆ ಒಳ್ಳೆಯದನ್ನು ಅನುಸರಿಸು. ಒಳ್ಳೆಯದನ್ನು ಮಾಡುವವನು ದೇವರಿಗೆ ಸೇರಿದವನಾಗಿದ್ದಾನೆ, ಕೆಟ್ಟದ್ದನ್ನು ಮಾಡುವವನು ದೇವರನ್ನು ಕಂಡವನಲ್ಲ.
12ದೇಮೇತ್ರಿಯನನ್ನು ಕುರಿತಾಗಿ ಎಲ್ಲರೂ ಒಳ್ಳೆಯದನ್ನೇ ಮಾತನಾಡುತ್ತಾರೆ. ಅಷ್ಟೇ ಅಲ್ಲದೆ ಸತ್ಯವೇ ಅವನ ಪರವಾಗಿ ಸಾಕ್ಷಿಕೊಡುತ್ತದೆ. ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀವು ಬಲ್ಲಿರಿ.
13ನಾನು ಬರೆಯತಕ್ಕ ಅನೇಕ ವಿಷಯಗಳಿವೆ. ಆದರೆ ಮಸಿ ಮತ್ತು ಲೇಖನಿಗಳಿಂದ ಬರೆಯುವುದಕ್ಕೆ ನನಗಿಷ್ಟವಿಲ್ಲ.
14ಬೇಗನೆ ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ. ಆಗ ಮುಖಾಮುಖಿಯಾಗಿ ನಾವು ಮಾತನಾಡುವೆವು.
15ನಿನಗೆ ಶಾಂತಿ ಇರಲಿ. ನಮ್ಮ ಸ್ನೇಹಿತರು ನಿನಗೆ ವಂದನೆ ಹೇಳುತ್ತಾರೆ. ಸ್ನೇಹಿತರನ್ನು ಹೆಸರು ಹೆಸರಾಗಿ ವಂದಿಸು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.