Women distributing food to older widows while community leaders listen carefully at a nearby table

1 ತಿಮೊಥೆಯನಿಗೆ 5

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಸಭೆಯ ಸದಸ್ಯರನ್ನು ಕುಟುಂಬದವರಂತೆ ನೋಡಿಕೊಳ್ಳಲು, ವಿಧವೆಯರಿಗೆ ಜವಾಬ್ದಾರಿಯುತ ಆಧಾರವನ್ನು ವ್ಯವಸ್ಥೆಗೊಳಿಸಲು ಮತ್ತು ಮನೆತನಗಳು ಬಂಧುಗಳನ್ನು ಆರೈಕೆ ಮಾಡುವಂತೆ ಪ್ರೇರೇಪಿಸಲು ತಿಮೊಥೆಯನಿಗೆ ಸೂಚಿಸಲಾಗಿದೆ. ಹಿರಿಯರ ಗೌರವ ಮತ್ತು ಉತ್ತರದಾಯಿತ್ವ, ಪಕ್ಷಪಾತವಿಲ್ಲದ ತೀರ್ಪು ಮತ್ತು ವಿವೇಕದ ವೈಯಕ್ತಿಕ ನಡತೆಯನ್ನೂ ಪೌಲನು ಸಂಬೋಧಿಸುತ್ತಾನೆ.
ವಿಧವೆಯರುಕುಟುಂಬದ ಜವಾಬ್ದಾರಿಹಿರಿಯರುನಿಷ್ಪಕ್ಷಪಾತ
1ವೃದ್ಧನನ್ನು ಗದರಿಸದೆ ತಂದೆಯಂತೆಯೂ ಯೌವನಸ್ಥರನ್ನು ಸಹೋದರರಂತೆಯೂ
2ವೃದ್ಧ ಸ್ತ್ರೀಯರನ್ನು ತಾಯಿಯಂತೆಯೂ ಯೌವನ ಸ್ತ್ರೀಯರನ್ನು ಪೂರ್ಣ ಪವಿತ್ರತೆಯಿಂದ ಸಹೋದರಿಯರಂತೆಯೂ ಅವರವರಿಗೆ ಬುದ್ಧಿ ಹೇಳು.
3ನಿಜವಾಗಿಯೂ ಕಷ್ಟದಲ್ಲಿರುವ ವಿಧವೆಯರನ್ನು ಗುರುತಿಸಿ ಅವರಿಗೆ ಸಹಾಯಮಾಡು.
4ಆದರೆ ಯಾವ ವಿಧವೆಗಾದರೂ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯಲ್ಲಿ ಭಕ್ತಿಯಿಂದಿರುವುದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.
5ನಿಜವಾಗಿಯೂ ಕಷ್ಟದಲ್ಲಿರುವ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲು ಇರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು.
6ಆದರೆ ಭೋಗಿಯಾಗಿರುವ ವಿಧವೆಯು ಬದುಕಿರುವಾಗಲೂ ಸತ್ತವಳೇ.
7ವಿಧವೆಯರು ನಿಂದೆಗೆ ಗುರಿಯಾಗದಂತೆ ಇವುಗಳನ್ನು ಆಜ್ಞಾಪಿಸು.
8ಯಾವನಾದರೂ ಸ್ವಂತದವರನ್ನು ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ನಂಬಿಕೆಯನ್ನು ಅಲ್ಲಗಳೆದವನೂ ಅವಿಶ್ವಾಸಿಗಿಂತ ನೀಚನೂ ಆಗಿದ್ದಾನೆ.
9ವಯಸ್ಸಿನಲ್ಲಿ ಅರವತ್ತಕ್ಕೆ ಕಡಿಮೆಯಿಲ್ಲದ ವಿಧವೆಯರನ್ನು ಮಾತ್ರ ವಿಧವೆಯರ ಪಟ್ಟಿಯಲ್ಲಿ ಸೇರಿಸು. ಅಂಥವಳು ಗಂಡನಿಗೆ ನಂಬಿಗಸ್ತಳಾಗಿದ್ದಿರಬೇಕು.
10ಆಕೆಯು ಮಕ್ಕಳನ್ನು ಸಾಕಿದವಳೂ ಅತಿಥಿ ಸತ್ಕಾರ ಮಾಡಿದವಳೂ ಭಕ್ತರ ಪಾದಗಳನ್ನು ತೊಳೆದವಳೂ ಸಂಕಟದಲ್ಲಿದ್ದವರಿಗೆ ಸಹಾಯ ಮಾಡಿದವಳೂ ಆಗಿರಬೇಕು. ಹೀಗೆ ಪ್ರತಿಯೊಂದು ಸತ್ಕ್ರಿಯೆಗಳಿಗೆ ಹೆಸರಾದವಳೂ ಆಗಿರಬೇಕು.
11ಆದರೆ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ. ಏಕೆಂದರೆ ಅವರಲ್ಲಿ ದೈಹಿಕ ಅಪೇಕ್ಷೆಗಳು ಕ್ರಿಸ್ತ ಯೇಸುವಿನ ಮೇಲಿಟ್ಟ ಅವರ ಪ್ರತಿಷ್ಠೆಯನ್ನು ಸೋಲಿಸಿ, ಅವರು ಮದುವೆ ಮಾಡಿಕೊಳ್ಳುವಂತೆ ಮಾಡುವವು.
12ಅಂಥವರು ತಮ್ಮ ಮೊದಲಿನ ನಂಬಿಕೆಯನ್ನು ಬಿಟ್ಟಿದ್ದರಿಂದ ತೀರ್ಪಿಗೆ ಗುರಿಯಾಗುವರು.
13ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಸೋಮಾರಿತನವನ್ನು ಕಲಿಯುತ್ತಾರೆ. ಸೋಮಾರಿಗಳಾಗುವುದಷ್ಟೇ ಅಲ್ಲ, ಹರಟೆ ಮಾತನಾಡುವವರೂ ಇತರರ ಕೆಲಸದಲ್ಲಿ ತಲೆಹಾಕುವವರಾಗಿ ಆಡಬಾರದ ಮಾತುಗಳನ್ನಾಡುವವರೂ ಆಗುತ್ತಾರೆ.
14ಆದ್ದರಿಂದ ಯೌವನಸ್ಥ ವಿಧವೆಯರು ಮದುವೆಮಾಡಿಕೊಂಡು, ಮಕ್ಕಳನ್ನು ಹೆತ್ತು, ಮನೆಯ ಕೆಲಸಮಾಡಿ, ವಿರೋಧಿಯ ನಿಂದೆಗೆ ಆಸ್ಪದ ಕೊಡಬಾರದೆಂಬುದೇ ನನ್ನ ಅಪೇಕ್ಷೆ.
15ಈಗಾಗಲೇ ಕೆಲವರು ದಾರಿತಪ್ಪಿ ಸೈತಾನನನ್ನು ಹಿಂಬಾಲಿಸಿದ್ದಾರೆ.
16ವಿಶ್ವಾಸಿಯಾದ ಸ್ತ್ರೀಯ ಕುಟುಂಬದಲ್ಲಿ ವಿಧವೆಯರಿದ್ದರೆ, ಆಕೆ ಇಂಥವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸಬೇಕಾಗಿರುವುದರಿಂದ ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.
17ಸಭಾಕಾರ್ಯಗಳನ್ನು ಸರಿಯಾಗಿ ನಡೆಸುತ್ತಿರುವ ಹಿರಿಯರು, ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆಯಲ್ಲಿಯೂ ಶ್ರಮಿಸುತ್ತಿರುವವರು ಇಮ್ಮಡಿಯಾದ ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು.
18ಏಕೆಂದರೆ, “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು!” ಎಂತಲೂ, “ಕೆಲಸದವನು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ!” ಎಂತಲೂ ಪವಿತ್ರ ವೇದದಲ್ಲಿ ಹೇಳಿದೆಯಲ್ಲಾ.
19ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ, ಇಬ್ಬರ ಇಲ್ಲವೆ ಮೂವರ ಸಾಕ್ಷಿ ಇಲ್ಲದೆ ಅದನ್ನು ಅಂಗೀಕರಿಸಬೇಡ.
20ಪಾಪಮಾಡುವ ಹಿರಿಯರನ್ನು ಎಲ್ಲರ ಮುಂದೆಯೇ ಗದರಿಸು. ಇದರಿಂದ ಇತರರಿಗೂ ಎಚ್ಚರಿಕೆಯಾಗುವುದು.
21ನೀನು ವಿಚಾರಿಸುವುದಕ್ಕೆ ಮೊದಲೇ ತೀರ್ಮಾನಿಸದೆಯೂ ಪಕ್ಷಪಾತದಿಂದ ಏನೂ ಮಾಡದೆಯೂ ಇವುಗಳನ್ನು ಕೈಗೊಳ್ಳಬೇಕೆಂದು ದೇವರ ಮುಂದೆಯೂ ಕ್ರಿಸ್ತ ಯೇಸುವಿನ ಮುಂದೆಯೂ ಆಯ್ಕೆಯಾದ ದೂತರ ಮುಂದೆಯೂ ಖಂಡಿತವಾಗಿ ನಾನು ಹೇಳುತ್ತೇನೆ.
22ಅವಸರದಿಂದ ಯಾರ ಮೇಲೆಯೂ ಹಸ್ತವನ್ನಿಟ್ಟು, ಸಭಾ ಹಿರಿಯರನ್ನಾಗಿ ನೇಮಿಸಬೇಡ. ಇತರರ ಪಾಪಗಳಲ್ಲಿ ಪಾಲುಗಾರನಾಗಬೇಡ. ನಿನ್ನನ್ನು ಶುದ್ಧನಾಗಿ ಕಾಪಾಡಿಕೋ.
23ನೀರನ್ನು ಮಾತ್ರ ಕುಡಿಯದೆ ನಿನ್ನ ಹೊಟ್ಟೆಯ ನಿಮಿತ್ತವಾಗಿಯೂ ನಿನಗೆ ಆಗಾಗ್ಗೆ ಉಂಟಾಗುವ ಬಲಹೀನತೆಗಳಿಗಾಗಿಯೂ ಸ್ವಲ್ಪ ದ್ರಾಕ್ಷಾರಸವನ್ನು ಉಪಯೋಗಿಸು.
24ಕೆಲವರ ಪಾಪಗಳು ತೀರ್ಪಿಗೆ ಮುಂಚೆಯೇ ಬಹಿರಂಗವಾಗುತ್ತವೆ. ಇನ್ನು ಕೆಲವರ ಪಾಪಗಳು ಕ್ರಮೇಣವಾಗಿ ಕಂಡುಬರುತ್ತವೆ.
25ಅದರಂತೆಯೇ ಕೆಲವರ ಒಳ್ಳೆಯ ಕ್ರಿಯೆಗಳು ಮುಂಚೆಯೇ ಪ್ರತ್ಯಕ್ಷವಾಗಿರುತ್ತವೆ. ಪ್ರತ್ಯಕ್ಷವಾಗದಿರುವ ಒಳ್ಳೆಯ ಕ್ರಿಯೆಗಳು ನಿರಂತರವಾಗಿ ಮರೆಯಾಗಿರಲಾರವು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.