
1 ತಿಮೊಥೆಯನಿಗೆ 4
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವರ ವರಗಳನ್ನು ಕೃತಜ್ಞತೆಯಿಂದ ಸ್ವೀಕರಿಸಬೇಕಾದರೂ ಕೆಲವರು ಮೋಸದ ಮತ್ತು ಕಠಿಣ ಬೋಧನೆಗಳನ್ನು ಅಪ್ಪಿಕೊಳ್ಳುವರೆಂದು ಪೌಲನು ಎಚ್ಚರಿಸುತ್ತಾನೆ. ತಿಮೊಥೆಯನು ಭಕ್ತಿಯಲ್ಲಿ ಸಾಧನೆ ಮಾಡಿ, ಬೋಧನೆಗೆ ಸಮರ್ಪಿಸಿಕೊಂಡು, ನಂಬಿಗಸ್ತ ನಡತೆಯ ಮಾದರಿಯಾಗಿ, ತನ್ನ ಕರೆಯಲ್ಲಿ ಸ್ಥಿರವಾಗಿರಬೇಕು.
ಸುಳ್ಳು ಬೋಧನೆಭಕ್ತಿಮಾದರಿಸ್ಥಿರತೆ
1ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಗೊಟ್ಟು ವಿಶ್ವಾಸದಲ್ಲಿ ಬಿದ್ದುಹೋಗುವರೆಂದು ಪವಿತ್ರಾತ್ಮ ದೇವರು ಸ್ಪಷ್ಟವಾಗಿ ಹೇಳುತ್ತಾರೆ.
2ಅವರು ಕಪಟಿಗಳೂ ಸುಳ್ಳಾಡುವವರೂ ತಮ್ಮ ಮನಸ್ಸಾಕ್ಷಿಯ ಮೇಲೆ ಬರೆಯುಳ್ಳವರಾದರೂ ಆಗಿದ್ದು
3ಮದುವೆಯಾಗಬಾರದೆಂತಲೂ ಯಾರು ನಂಬುವವರಾಗಿದ್ದು ಸತ್ಯವನ್ನು ತಿಳಿದುಕೊಂಡಿದ್ದಾರೋ ಅವರು ಕೃತಜ್ಞತಾಸ್ತುತಿ ಮಾಡಿ ತಿನ್ನುವುದಕ್ಕೋಸ್ಕರ ದೇವರು ಸೃಷ್ಟಿಸಿದ ಆಹಾರವನ್ನು ತಿನ್ನಬಾರದೆಂತಲೂ ಆಜ್ಞಾಪಿಸುತ್ತಾರೆ.
4ದೇವರು ಸೃಷ್ಟಿಸಿದ್ದೆಲ್ಲವೂ ಒಳ್ಳೆಯದಾಗಿದೆ. ಕೃತಜ್ಞತೆ ಮಾಡಿ ಸ್ವೀಕರಿಸುವ ಯಾವುದನ್ನೂ ತಿರಸ್ಕರಿಸಬೇಕಾಗಿಲ್ಲ.
5ಅದು ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಪವಿತ್ರವಾಗುತ್ತದೆ.
6ಈ ವಿಷಯಗಳನ್ನು ಸಹೋದರರಿಗೆ ತಿಳಿಸುವವನಾದರೆ ನೀನು ಅನುಸರಿಸುತ್ತಿರುವ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಪೋಷಣೆ ಹೊಂದುವವನಾಗಿ ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ.
7ಪ್ರಾಪಂಚಿಕ ಹಾಗೂ ಅಜ್ಜಿ ಕಥೆಗಳನ್ನು ನಿರಾಕರಿಸಿ ನೀನು ದೇವಭಕ್ತಿಯನ್ನು ಅಭ್ಯಾಸ ಮಾಡಿಕೋ.
8ದೇಹ ಸಾಧನೆಯೂ ಸ್ವಲ್ಪಮಟ್ಟಿಗೆ ಲಾಭಕರವಾಗಿದೆ. ಭಕ್ತಿಯಾದರೋ ಎಲ್ಲಾ ವಿಧದಲ್ಲಿಯೂ ಲಾಭಕರವಾದದ್ದು. ಅದಕ್ಕೆ ಈಗಲೂ ಮುಂದೆಯೂ ಜೀವ ವಾಗ್ದಾನ ಉಂಟು.
9ಈ ಮಾತು ನಂಬತಕ್ಕದ್ದೂ ಪೂರ್ಣ ಅಂಗೀಕಾರಕ್ಕೆ ಯೋಗ್ಯವಾದದ್ದೂ ಆಗಿದೆ.
10ಇದಕ್ಕಾಗಿ ನಾವು ಕಷ್ಟಪಡುತ್ತೇವೆ ಮತ್ತು ಪ್ರಯಾಸ ಪಡುತ್ತೇವೆ. ಏಕೆಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕ ಆಗಿರುವ ಜೀವಸ್ವರೂಪರಾದ ದೇವರನ್ನು ನಾವು ನಿರೀಕ್ಷಿಸಿದ್ದೇವೆ.
11ಈ ವಿಷಯಗಳನ್ನು ಆಜ್ಞಾಪಿಸಿ ಬೋಧಿಸು.
12ನಿನ್ನ ಯೌವನವನ್ನೂ ಯಾರೂ ತಾತ್ಸಾರ ಮಾಡದಿರಲಿ. ಆದರೆ ನಂಬುವವರಿಗೆ ನುಡಿಯಲ್ಲಿ, ನಡೆಯಲ್ಲಿ, ಪ್ರೀತಿಯಲ್ಲಿ, ವಿಶ್ವಾಸದಲ್ಲಿ, ಶುದ್ಧತ್ವದಲ್ಲಿ ನೀನೇ ಆದರ್ಶನಾಗಿರು.
13ನಾನು ಬರುವ ತನಕ ಓದುವುದರಲ್ಲಿಯೂ ಎಚ್ಚರಿಸುವುದರಲ್ಲಿಯೂ ಬೋಧಿಸುವುದರಲ್ಲಿಯೂ ಲಕ್ಷ್ಯಕೊಡು.
14ನಿನ್ನಲ್ಲಿರುವ ವರವನ್ನು ಅಲಕ್ಷ್ಯ ಮಾಡಬೇಡ. ಅದು ಸಭೆಯ ಹಿರಿಯರು ಪ್ರವಾದನೆಯ ಮೂಲಕ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ನಿನಗೆ ಕೊಡಲಾಯಿತಲ್ಲವೇ?
15ಈ ವಿಷಯಗಳನ್ನು ಧ್ಯಾನಿಸುವವನಾಗಿರು. ಇವುಗಳಲ್ಲಿಯೇ ನೆಲೆಗೊಂಡಿರು. ಹೀಗೆ ನಿನ್ನ ಪ್ರಗತಿಯು ಎಲ್ಲರಿಗೂ ಪ್ರಕಟವಾಗುವುದು.
16ನಿನ್ನ ವಿಷಯದಲ್ಲಿಯೂ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿಯೇ ನಿರತನಾಗಿರು. ಹೀಗೆ ಮಾಡುವುದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.