Timothy returning from a long road as Paul and a coworker greet him above a lamplit coastal town

1 ಥೆಸಲೋನಿಕದವರಿಗೆ 3

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಅನಿಶ್ಚಿತತೆಯನ್ನು ಸಹಿಸಲಾರದೆ ಪೌಲನು ಸಂಕಟದ ನಡುವೆ ಥೆಸಲೋನಿಕದವರನ್ನು ಬಲಪಡಿಸಲು ತಿಮೊಥೆಯನನ್ನು ಕಳುಹಿಸಿದನು. ತಿಮೊಥೆಯನು ಅವರ ನಂಬಿಕೆ, ಪ್ರೀತಿ ಮತ್ತು ವಾತ್ಸಲ್ಯದ ನೆನಪಿನ ಶುಭ ಸುದ್ದಿಯೊಂದಿಗೆ ಹಿಂದಿರುಗಿ, ಪೌಲನಿಗೆ ಆದರಣೆ ತಂದು, ಪುನರ್ಮಿಲನ, ಹೆಚ್ಚುವ ಪ್ರೀತಿ ಮತ್ತು ಸ್ಥಿರ ಹೃದಯಗಳಿಗಾಗಿ ಪ್ರಾರ್ಥನೆಗೆ ಪ್ರೇರೇಪಿಸಿದನು.
ತಿಮೊಥೆಯನ ಕಾರ್ಯಪ್ರೋತ್ಸಾಹಸ್ಥಿರವಾದ ನಂಬಿಕೆಪ್ರಾರ್ಥನೆ
1ಆದ್ದರಿಂದ ನಿಮ್ಮ ಅಗಲಿಕೆಯನ್ನು ಸಹಿಸಲಾಗದೆ, ನಾವು ಅಥೇನೆಯಲ್ಲಿ ಒಬ್ಬಂಟಿಗರಾಗಿಯೇ ಇರುವುದು ಒಳ್ಳೆಯದೆಂದು ಯೋಚಿಸಿದೆವು.
2ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ನಿಮ್ಮನ್ನು ಉತ್ತೇಜಿಸುವುದಕ್ಕೂ ನಮ್ಮ ಸಹೋದರನೂ ದೇವರ ಸೇವಕನೂ ಯೇಸುಕ್ರಿಸ್ತರ ಸುವಾರ್ತೆಯಲ್ಲಿ ನಮ್ಮ ಜೊತೆ ಸೇವಕನೂ ಆಗಿರುವ ತಿಮೊಥೆಯನನ್ನು ಕಳುಹಿಸಿದೆವು.
3ಹೀಗಿರುವಲ್ಲಿ ಈ ಸಂಕಟಗಳಿಂದ ಒಬ್ಬರೂ ಚಂಚಲರಾಗಬೇಡಿರಿ. ಏಕೆಂದರೆ ಇವುಗಳಿಗಾಗಿಯೇ ನಾವು ನೇಮಕವಾಗಿದ್ದೇವೆ ಎಂದು ನೀವೇ ಬಲ್ಲಿರಿ.
4ನಾವು ನಿಮ್ಮ ಬಳಿಯಲ್ಲಿದ್ದಾಗ ಸಂಕಟವನ್ನು ಅನುಭವಿಸಲೇಬೇಕೆಂದು ಮುಂದಾಗಿ ಹೇಳಿದೆವಲ್ಲಾ. ಹಾಗೆ ಆಯಿತೆಂದು ನೀವೂ ಚೆನ್ನಾಗಿ ಬಲ್ಲಿರಿ.
5ಈ ಕಾರಣದಿಂದ, ನಮ್ಮ ಪ್ರಯಾಸವು ವ್ಯರ್ಥವಾಗುವಂತೆ ಶೋಧಕನು ನಿಮ್ಮನ್ನು ಶೋಧಿಸುವನೋ ಎಂಬ ಭಯದ ದೆಸೆಯಿಂದ, ನಾನು ಸಹ ಸಹಿಸಲಾರದೆ ನಿಮ್ಮ ನಂಬಿಕೆಯ ವಿಷಯದಲ್ಲಿ ತಿಳಿದುಕೊಳ್ಳುವುದಕ್ಕೆ ತಿಮೊಥೆಯನನ್ನು ಕಳುಹಿಸಿದೆನು.
6ತಿಮೊಥೆಯನು ಈಗಲೇ ನಿಮ್ಮಿಂದ ನಮ್ಮ ಬಳಿಗೆ ಬಂದು ನಿಮ್ಮ ವಿಶ್ವಾಸ ಹಾಗೂ ಪ್ರೀತಿಯ ವಿಷಯವಾಗಿ ಒಳ್ಳೆಯ ವರ್ತಮಾನವನ್ನು ತಂದಿದ್ದಾನೆ. ನೀವು ನಮ್ಮನ್ನು ಯಾವಾಗಲೂ ಚೆನ್ನಾಗಿ ನೆನಪಿಸಿಕೊಂಡು, ನಾವು ನಿಮ್ಮನ್ನು ಹೇಗೋ ಹಾಗೆಯೇ ನೀವೂ ನಮ್ಮನ್ನು ನೋಡುವುದಕ್ಕೆ ಹಾರೈಸುತ್ತೀರೆಂಬುದನ್ನು ತಿಳಿಸಿದ್ದಾನೆ.
7ಈ ಕಾರಣದಿಂದ ಪ್ರಿಯರೇ, ನಮ್ಮ ಎಲ್ಲಾ ಇಕ್ಕಟ್ಟು ಹಾಗೂ ಹಿಂಸೆಗಳಲ್ಲಿಯೂ ನಿಮ್ಮ ನಂಬಿಕೆಯ ಮೂಲಕ ನಮಗೆ ಆದರಣೆಯಾಯಿತು.
8ಏಕೆಂದರೆ ನೀವು ಕರ್ತ ಯೇಸುವಿನಲ್ಲಿ ದೃಢವಾಗಿ ನಿಂತಿರುವುದರಿಂದಲೇ ಈಗ ನಾವು ನಿಜವಾಗಿಯೂ ಜೀವಿಸುತ್ತಿದ್ದೇವೆ.
9ನಿಮ್ಮ ನಿಮಿತ್ತ ನಮ್ಮ ದೇವರ ಮುಂದೆ ನಮಗಿರುವ ಎಲ್ಲಾ ಆನಂದಕ್ಕೆ ಬದಲಾಗಿ ದೇವರಿಗೆ ಹೇಗೆ ಸಾಕಷ್ಟು ಕೃತಜ್ಞತೆಯನ್ನು ಸಲ್ಲಿಸಬಹುದು?
10ನಿಮ್ಮ ಮುಖವನ್ನು ನೋಡುವುದಕ್ಕಾಗಿಯೂ ನಿಮ್ಮ ನಂಬಿಕೆಯಲ್ಲಿರುವ ಕೊರತೆಯನ್ನು ನಿವಾರಿಸುವುದಕ್ಕೂ ನಾವು ಹಗಲಿರುಳು ಆಸಕ್ತಿಯಿಂದ ಪ್ರಾರ್ಥಿಸುತ್ತಿದ್ದೇವೆ.
11ನಮ್ಮ ತಂದೆಯಾದ ದೇವರೂ ನಮಗೆ ಕರ್ತ ಆಗಿರುವ ಯೇಸುವೂ ನಾವು ನಿಮ್ಮಲ್ಲಿಗೆ ಬರುವಂತೆ ಮಾರ್ಗವನ್ನು ಸುಗಮಗೊಳಿಸಲಿ.
12ನಮ್ಮ ಪ್ರೀತಿಯು ನಿಮ್ಮ ಕಡೆಗೆ ಸಮೃದ್ಧಿಯಾಗಿರುವಂತೆಯೇ ನಿಮ್ಮ ಪ್ರೀತಿಯೂ ಒಬ್ಬರಿಂದೊಬ್ಬರಿಗೂ ಎಲ್ಲರ ಮೇಲೆಯೂ ತುಂಬಿರುವಂತೆ ಕರ್ತ ಯೇಸು ನಿಮಗೆ ಅನುಗ್ರಹಿಸಲಿ.
13ನಮಗೆ ಕರ್ತ ಆಗಿರುವ ಯೇಸುವು ತಮ್ಮ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ, ನೀವು ತಂದೆ ದೇವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ಬಲಪಡಿಸಲಿ!

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.