
ಜೆಕರ್ಯ 5
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ವಿಶಾಲವಾದ ಹಾರುವ ಸುರುಳಿಯು ಕಳ್ಳರ ಮತ್ತು ಸುಳ್ಳು ಆಣೆಯಿಡುವವರ ವಿರುದ್ಧ ಶಾಪವನ್ನು ಹೊತ್ತು, ಅವರ ಮನೆಗಳನ್ನು ಪ್ರವೇಶಿಸಿ ಅಪರಾಧವನ್ನು ನುಂಗುತ್ತದೆ. ನಂತರ ದುಷ್ಟತನವನ್ನು ಧಾನ್ಯದ ಬುಟ್ಟಿಯೊಳಗೆ ಸ್ತ್ರೀಯಾಗಿ ಚಿತ್ರಿಸಿ, ಸೀಸದ ಮುಚ್ಚಳದ ಕೆಳಗೆ ಮುದ್ರೆ ಹಾಕಿ, ಇಬ್ಬರು ರೆಕ್ಕೆಯ ಸ್ತ್ರೀಯರು ಶಿನಾರಿನಲ್ಲಿ ಸಿದ್ಧಪಡಿಸಿದ ಸ್ಥಳಕ್ಕೆ ಒಯ್ಯುತ್ತಾರೆ.
ಹಾರುವ ಸುರುಳಿನ್ಯಾಯತೀರ್ಪುದುಷ್ಟತನದ ತೆಗೆಯುವಿಕೆಶಿನಾರ್
1ಆಗ ನಾನು ತಿರುಗಿಕೊಂಡು ನನ್ನ ಕಣ್ಣುಗಳನ್ನೆತ್ತಿ ನೋಡಲು, ಹಾರುವ ಸುರುಳಿ ಕಾಣಿಸಿತು.
2ಆಗ ದೂತನು ನನಗೆ, “ಏನು ನೋಡುತ್ತೀ?” ಎಂದಾಗ, ನಾನು, “ಹಾರುವ ಸುರುಳಿಯನ್ನು ನೋಡುತ್ತಿದ್ದೇನೆ. ಅದರ ಉದ್ದವು ಒಂಬತ್ತು ಮೀಟರ್, ಅದರ ಅಗಲವು ನಾಲ್ಕುವರೆ ಮೀಟರ್ ಇದೆ,” ಎಂದೆನು.
3ಆಗ ದೂತನು ನನಗೆ, “ಭೂಮಿಯ ಮೇಲೆಲ್ಲಾ ಹರಡುವ ಶಾಪವು ಇದೇ. ಈ ದಿಕ್ಕಿನಲ್ಲಿ ಬರೆದಿರುವ ಪ್ರಕಾರ ಕಳ್ಳತನ ಮಾಡುವವರೆಲ್ಲರನ್ನು ತೆಗೆದುಹಾಕಲಾಗುವುದು. ಸುಳ್ಳಾಣೆ ಇಡುವವರೆಲ್ಲರನ್ನು ಆ ಕಡೆಯಲ್ಲಿ ಬರೆದಿರುವ ಪ್ರಕಾರ ತೆಗೆದುಹಾಕಲಾಗುವುದು.
4‘ನಾನು ಶಾಪವನ್ನು ಕಳುಹಿಸುತ್ತೇನೆ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಅದು ಕಳ್ಳನ ಮನೆಯಲ್ಲಿಯೂ, ನನ್ನ ಹೆಸರಿನಿಂದ ಸುಳ್ಳಾಗಿ ಆಣೆ ಇಡುವವನ ಮನೆಯಲ್ಲಿಯೂ ಪ್ರವೇಶಿಸಿ, ಅವನ ಮನೆಯಲ್ಲಿ ನಿಂತು, ಅದನ್ನೂ, ಅದರ ಮರಗಳನ್ನೂ, ಅದರ ಕಲ್ಲುಗಳನ್ನೂ ನಾಶಮಾಡುವುದು.’ ”
5ಆಗ ನನ್ನ ಸಂಗಡ ಮಾತನಾಡುತ್ತಿದ್ದ ದೂತನು ಬಂದು, “ನಿನ್ನ ಕಣ್ಣೆತ್ತಿ ಹೊರಡುವಂಥದ್ದು ಏನೆಂದು ನೋಡು,” ಎಂದು ನನಗೆ ಹೇಳಿದನು.
6ನಾನು, “ಇದೇನು?” ಎಂದು ಕೇಳಿದಾಗ, ಅವನು, “ಇದು ಅಳೆಯುವ ಬುಟ್ಟಿ,” ಎಂದನು. ಇದಲ್ಲದೆ ಅವನು, “ಇದೇ ಸಮಸ್ತ ಭೂಮಿಯಲ್ಲಿಯ ಜನರ ಅಧರ್ಮವು,” ಎಂದನು.
7ಸೀಸದ ಮುಚ್ಚಳವು ತೆಗೆಯಲಾಯಿತು. ಆ ಬುಟ್ಟಿಯಲ್ಲಿ ಒಬ್ಬ ಸ್ತ್ರೀ ಕುಳಿತುಕೊಂಡಿದ್ದಳು.
8ಆತನು, “ಇದು ದುಷ್ಟತ್ವವು,” ಎಂದು ಹೇಳಿ ಆಕೆಯನ್ನು ಬುಟ್ಟಿಯಲ್ಲಿ ಪುನಃ ಅದುಮಿ, ಆ ಬುಟ್ಟಿಯ ಮುಚ್ಚಳವನ್ನು ಮುಚ್ಚಿದನು.
9ಆಗ ನಾನು ಕಣ್ಣೆತ್ತಿ ನೋಡಿದಾಗ, ಇಬ್ಬರು ಸ್ತ್ರೀಯರು ಇದ್ದರು. ಅವರ ರೆಕ್ಕೆಗಳು ರಭಸವಾಗಿದ್ದವು. ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು. ಅವರು ಆಕಾಶ ಮತ್ತು ಭೂಮಿಯ ನಡುವೆ ಬುಟ್ಟಿಯನ್ನು ಎತ್ತಿದರು.
10ಆಗ ನಾನು ನನ್ನ ಸಂಗಡ ಮಾತನಾಡಿದ ದೂತನಿಗೆ, “ಇವರು ಅಳತೆಯ ಬುಟ್ಟಿಯನ್ನು ಎಲ್ಲಿಗೆ ಹೊತ್ತುಕೊಂಡು ಹೋಗುತ್ತಾರೆ?” ಎಂದೆನು.
11ದೂತನು ನನಗೆ, “ಶಿನಾರ್ ದೇಶದಲ್ಲಿ ಅದಕ್ಕೆ ಮನೆ ಕಟ್ಟುವುದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಅದು ಸ್ಥಾಪಿತವಾಗಿ, ತನ್ನ ಸ್ಥಾನದಲ್ಲಿ ಇರಿಸಲಾಗುವುದು,” ಎಂದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.