Crowds gather before restored Jerusalem as the Mount of Olives splits into a valley and living waters flow east and west beneath enduring light

ಜೆಕರ್ಯ 14

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕರ್ತನ ದಿನವು ಮುತ್ತಿಗೆಯನ್ನೂ ಕದಡುವಿಕೆಯನ್ನೂ ತರುತ್ತದೆ, ಆದರೆ ಎಣ್ಣೆಮರಗಳ ಗುಡ್ಡವು ಸೀಳಿ ತಪ್ಪಿಸಿಕೊಳ್ಳಲು ದಾರಿ ಮಾಡುತ್ತದೆ. ಅನನ್ಯ ಬೆಳಕಿನ ಕೆಳಗೆ ಯೆರೂಸಲೇಮಿನಿಂದ ಜೀವಜಲಗಳು ಹರಿಯುತ್ತವೆ, ಮತ್ತು ಕರ್ತನು ಇಡೀ ಭೂಮಿಯ ಮೇಲೆ ಅರಸನಾಗಿದ್ದಾನೆ. ಉಳಿದ ಜನಾಂಗಗಳು ವಾರ್ಷಿಕವಾಗಿ ಆರಾಧಿಸುತ್ತವೆ, ಗಂಟೆಗಳಿಂದ ಅಡುಗೆ ಪಾತ್ರೆಗಳವರೆಗೆ ಎಲ್ಲವೂ ಪವಿತ್ರವಾಗುತ್ತದೆ.
ಕರ್ತನ ದಿನಜೀವಜಲಗಳುಸಾರ್ವತ್ರಿಕ ಅರಸುತನಪವಿತ್ರತೆ
1ಯೆಹೋವ ದೇವರ ದಿನವು ಬರುತ್ತದೆ. ಓ ಯೆರೂಸಲೇಮೇ, ಆ ದಿನದಲ್ಲಿ ನಿನ್ನ ಐಶ್ವರ್ಯವು ಸೂರೆಯಾಗುವುದು. ಮತ್ತು ಸೂರೆಯಾದದ್ದೆಲ್ಲ ನಿನ್ನ ಗೋಡೆಗಳ ಮಧ್ಯದಲ್ಲಿ ಹಂಚಿಹೋಗುವುದು.
2ನಾನು ಜನಾಂಗಗಳನ್ನೆಲ್ಲಾ ಯೆರೂಸಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು. ಪಟ್ಟಣವನ್ನು ಆಕ್ರಮಿಸಿ, ಮನೆಗಳನ್ನು ಸೂರೆಮಾಡಲಾಗುವುದು. ಹೆಂಗಸರು ಅತ್ಯಾಚಾರಕ್ಕೆ ಒಳಗಾಗುವರು. ಪಟ್ಟಣದ ಅರ್ಧ ಜನರು ಸೆರೆಗೆ ಹೋಗುವರು. ಆದರೆ ಉಳಿದ ಜನರೆಲ್ಲರು ಪಟ್ಟಣದಲ್ಲೇ ಉಳಿಯುವರು.
3ಆಗ ಯೆಹೋವ ದೇವರು ಹೊರಟು, ಯುದ್ಧದ ದಿವಸದಲ್ಲಿ ಹೋರಾಟ ಮಾಡಿದ ಪ್ರಕಾರವೇ, ಆ ಜನಾಂಗಗಳ ಸಂಗಡ ಅವರು ಹೋರಾಟ ಮಾಡುವರು.
4ಆ ದಿವಸದಲ್ಲಿ ಆತನ ಪಾದಗಳು ಯೆರೂಸಲೇಮಿನ ಮುಂದೆ ಪೂರ್ವದಿಕ್ಕಿನಲ್ಲಿರುವ ಓಲಿವ್ ಮರಗಳ ಗುಡ್ಡದ ಮೇಲೆ ನಿಲ್ಲುವುವು. ಆ ಗುಡ್ಡವು, ಅದರ ನಡುವೆಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಸೀಳಿ ಬಹುದೊಡ್ಡ ತಗ್ಗಾಗುವುದು. ಅರ್ಧ ಗುಡ್ಡವು ಉತ್ತರಕ್ಕೂ ಅರ್ಧ ದಕ್ಷಿಣಕ್ಕೂ ಸರಿದುಕೊಳ್ಳುವುದು.
5ನೀವು ಬೆಟ್ಟಗಳ ತಗ್ಗಿಗೆ ಓಡಿಹೋಗುವಿರಿ. ಏಕೆಂದರೆ ಬೆಟ್ಟಗಳ ತಗ್ಗು ಆಚೆಲಿನವರೆಗೂ ಮುಟ್ಟುವುದು. ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿ, ನೀವು ಭೂಕಂಪಕ್ಕೆ ಓಡಿ ಹೋದ ಹಾಗೆ, ಓಡಿಹೋಗುವಿರಿ. ನನ್ನ ದೇವರಾದ ಯೆಹೋವ ದೇವರು ಬರುವರು. ನಿಮ್ಮ ಸಂಗಡ ಪರಿಶುದ್ಧರೆಲ್ಲರು ಸಹ ಬರುವರು.
6ಆ ದಿವಸದಲ್ಲಿ, ಬೆಳಕು ಇಲ್ಲವೆ ಕತ್ತಲೆಯು ಸ್ಪಷ್ಟವಾಗಿರದು.
7ಆದರೆ ಅದು ಒಂದು ವಿಶಿಷ್ಟ ದಿವಸವಾಗಿರುವುದು. ಯೆಹೋವ ದೇವರಿಗೆ ಮಾತ್ರ ತಿಳಿದಿರುವ ಒಂದು ದಿನ ಇರುವುದು. ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ. ಆದರೆ, ಸಾಯಂಕಾಲದ ಸಮಯದಲ್ಲಿ ಬೆಳಕು ಇರುವುದು.
8ಆ ದಿವಸದಲ್ಲಿ ಆಗುವುದೇನೆಂದರೆ: ಯೆರೂಸಲೇಮಿನೊಳಗಿಂದ ಜೀವವುಳ್ಳ ಪ್ರವಾಹವು ಹೊರಡುವುದು. ಅದರಲ್ಲಿ ಅರ್ಧಭಾಗವು ಪೂರ್ವದ ಉಪ್ಪು ಸಮುದ್ರಕ್ಕೆ ಮತ್ತು ಅರ್ಧಭಾಗವು ಪಶ್ಚಿಮದ ಮೆಡಿಟರೇನಿಯನ್ ಸಮುದ್ರಕ್ಕೆ ಹರಿಯುತ್ತದೆ. ಅದು ಬೇಸಿಗೆ ಕಾಲದಲ್ಲಿಯೂ, ಚಳಿಗಾಲದಲ್ಲಿಯೂ ಇರುವುದು.
9ಯೆಹೋವ ದೇವರು ಭೂಮಿಗೆಲ್ಲಾ ಅರಸನಾಗಿರುವರು. ಆ ದಿವಸದಲ್ಲಿ ಯೆಹೋವ ದೇವರು ಒಬ್ಬರೇ ಇರುವರು. ಆತನ ಹೆಸರು ಒಂದೇ ಹೆಸರಾಗಿರುವುದು.
10ಗೆಬ ಮೊದಲುಗೊಂಡು ಯೆರೂಸಲೇಮಿನ ದಕ್ಷಿಣದಲ್ಲಿರುವ ರಿಮ್ಮೋನಿನವರೆಗೂ ದೇಶವೆಲ್ಲಾ ಅರಾಬಾದ ಹಾಗೆ ಮಾರ್ಪಡುವುದು. ಯೆರೂಸಲೇಮ್ ತನ್ನ ಸ್ಥಳದಲ್ಲಿ ಬೆನ್ಯಾಮೀನನ ಬಾಗಿಲು ಮೊದಲುಗೊಂಡು, ಮೊದಲನೆಯ ಬಾಗಿಲಿನ ಸ್ಥಳದವರೆಗೂ, ಮೂಲೆ ಬಾಗಿಲಿನವರೆಗೂ, ಹನನೇಲನ ಗೋಪುರ ಮೊದಲುಗೊಂಡು ಅರಸನ ದ್ರಾಕ್ಷಿ ಆಲೆಗಳವರೆಗೂ ಎತ್ತರದಲ್ಲಿ ನಿವಾಸವಾಗುವುದು.
11ಅದರಲ್ಲಿ ಜನರು ವಾಸವಾಗಿರುವರು. ಅಲ್ಲಿ ಇನ್ನು ಮೇಲೆ ಸಂಪೂರ್ಣವಾದ ನಾಶವಿರದು. ಆದರೆ ಯೆರೂಸಲೇಮು ಭದ್ರವಾಗಿರುವುದು.
12ಯೆರೂಸಲೇಮಿಗೆ ವಿರೋಧವಾಗಿ ದಂಡು ಕಟ್ಟಿಕೊಂಡಿರುವ ಎಲ್ಲಾ ಜನರನ್ನು ಯೆಹೋವ ದೇವರು ವ್ಯಾಧಿಯಿಂದ ಬಾಧಿಸುವರು. ಹೀಗೆಯೇ, ಅವರು ನಿಂತಿರುವಾಗ, ಅವರ ಮಾಂಸವು ಕ್ಷಯಿಸಿ ಹೋಗುವುವು. ಅವರ ಕಣ್ಣುಗಳು ಕುಣಿಗಳಲ್ಲಿ ಇಂಗಿ ಹೋಗುವುವು. ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವುದು.
13ಆ ದಿವಸದಲ್ಲಿ, ಯೆಹೋವ ದೇವರಿಂದಾದ ದೊಡ್ಡ ಕೋಲಾಹಲದಿಂದ ಜನರು ಭಯಭೀತಿಗೆ ಒಳಗಾಗುವರು. ಆಗ ಒಬ್ಬೊಬ್ಬನು ತನ್ನ ತನ್ನ ನೆರೆಯವನ ಕೈಯನ್ನು ಹಿಡಿಯುವನು ಮತ್ತು ಒಬ್ಬರ ಮೇಲೊಬ್ಬರು ಕೈಯೆತ್ತುವರು.
14ಯೆಹೂದವೂ ಸಹ ಯೆರೂಸಲೇಮಿನಲ್ಲಿ ಯುದ್ಧಮಾಡುವುದು. ಸುತ್ತಲಿರುವ ಎಲ್ಲಾ ಜನಾಂಗಗಳ ಸಂಪತ್ತು, ಚಿನ್ನ, ಬೆಳ್ಳಿ ವಸ್ತ್ರಗಳು ಬಹು ಹೇರಳವಾಗಿ ಕೂಡಿಸಲಾಗುವುದು.
15ಆ ಗುಡಾರಗಳಲ್ಲಿರುವ ಕುದುರೆ, ಹೇಸರಗತ್ತೆ, ಒಂಟೆ, ಕತ್ತೆ ಮೊದಲಾದ ಎಲ್ಲಾ ಪಶುಗಳಿಗೆ ಈ ವ್ಯಾಧಿಯೇ ತಗಲುವದು.
16ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗಗಳಲ್ಲಿ ಉಳಿದವರೆಲ್ಲಾ ವರ್ಷ ವರ್ಷಕ್ಕೆ ಅರಸನಾದ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸುವುದಕ್ಕೂ, ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೂ ಹೋಗುವರು.
17ಭೂಮಿಯ ಜನಾಂಗಗಳಲ್ಲಿ ಅರಸನಾದ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸುವುದಕ್ಕೆ ಯೆರೂಸಲೇಮಿಗೆ ಹೋಗದಿದ್ದರೆ, ಅವರ ಮೇಲೆ ಮಳೆ ಬರುವುದಿಲ್ಲ.
18ಈಜಿಪ್ಟಿನವರು ಹೋಗದಿದ್ದರೆ ಮತ್ತು ಹಬ್ಬವನ್ನು ಆಚರಿಸುವುದಕ್ಕೆ ಬರದಿದ್ದರೆ ಅವರಿಗೂ ಮಳೆ ಬರುವುದಿಲ್ಲ. ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೆ ಬಾರದ ಇತರ ಜನಾಂಗಗಳಿಗೆ ಯೆಹೋವ ದೇವರು ಬಾಧಿಸುವ ವ್ಯಾಧಿಯು ಅವರ ಮೇಲೆ ತಗಲುವುದು.
19ಇದೇ ಈಜಿಪ್ಟಿನ ದಂಡನೆಯೂ, ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವುದು.
20ಆ ದಿವಸದಲ್ಲಿ, ಕುದುರೆಗಳ ಘಂಟೆಗಳ ಮೇಲೆ ಯೆಹೋವ ದೇವರಿಗೆ ಪರಿಶುದ್ಧವು ಎಂದಿರುವುದು. ಯೆಹೋವ ದೇವರ ಆಲಯದ ಪಾತ್ರೆಗಳು ಬಲಿಪೀಠದ ಮುಂದಿನ ಪಾತ್ರೆಗಳ ಹಾಗಿರುವುವು.
21ಯೆರೂಸಲೇಮಿನಲ್ಲಿಯೂ, ಯೆಹೂದದಲ್ಲಿಯೂ ಇರುವ ಪ್ರತಿಯೊಂದು ಪಾತ್ರೆಯು ಸೇನಾಧೀಶ್ವರ ಯೆಹೋವ ದೇವರಿಗೆ ಪರಿಶುದ್ಧವಾಗಿರುವುವು. ಯಜ್ಞಗಳನ್ನು ಅರ್ಪಿಸುವವರೆಲ್ಲರು ಬಂದು ಅವುಗಳನ್ನು ತೆಗೆದುಕೊಂಡು ಅವುಗಳಲ್ಲಿ ಬೇಯಿಸುವರು. ಆ ದಿವಸದಲ್ಲಿ, ಕಾನಾನ್ಯನು ಸೇನಾಧೀಶ್ವರ ಯೆಹೋವ ದೇವರ ಆಲಯದಲ್ಲಿ ಇನ್ನು ಮೇಲೆ ಇರುವುದೇ ಇಲ್ಲ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.