Seven trumpet-bearing angels around a golden altar as fire, a burning mountain, a star, and darkness touch creation

ಪ್ರಕಟನೆ 8

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಏಳನೆಯ ಮುದ್ರೆಯು ಪರಲೋಕದ ಮೌನವನ್ನು ತೆರೆಯುತ್ತದೆ. ಯಜ್ಞವೇದಿಯ ಬೆಂಕಿ ಭೂಮಿಗೆ ತಲುಪುವ ಮುಂಚೆ ಧೂಪವು ಪರಿಶುದ್ಧರ ಪ್ರಾರ್ಥನೆಗಳೊಂದಿಗೆ ಏರುತ್ತದೆ; ಮೊದಲ ನಾಲ್ಕು ತುತ್ತೂರಿಗಳು ಭೂಮಿ, ಸಮುದ್ರ, ಸಿಹಿನೀರು ಮತ್ತು ಆಕಾಶದ ಬೆಳಕುಗಳನ್ನು ನಾಶಕರವಾದರೂ ಮಿತವಾದ ತೀರ್ಪುಗಳಿಂದ ಹೊಡೆಯುತ್ತವೆ.
ಏಳನೆಯ ಮುದ್ರೆಪ್ರಾರ್ಥನೆತುತ್ತೂರಿಗಳುತೀರ್ಪು
1ಕುರಿಮರಿ ಆಗಿರುವವರು ಏಳನೆಯ ಮುದ್ರೆಯನ್ನು ಒಡೆದಾಗ ಪರಲೋಕದಲ್ಲಿ ಸುಮಾರು ಅರ್ಧ ತಾಸಿನವರೆಗೂ ನಿಶ್ಶಬ್ದವಿತ್ತು.
2ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ದೇವದೂತರನ್ನು ಕಂಡೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಗಿತ್ತು.
3ಚಿನ್ನದ ಧೂಪಾರತಿಯಿದ್ದ ಮತ್ತೊಬ್ಬ ದೇವದೂತನು ಬಂದು ಬಲಿಪೀಠದ ಬಳಿ ನಿಂತನು. ಸಿಂಹಾಸನದ ಮುಂದಿನ ಚಿನ್ನದ ಧೂಪವೇದಿಯ ಮೇಲೆ ದೇವಜನರೆಲ್ಲರ ಪ್ರಾರ್ಥನೆಗಳೊಂದಿಗೆ ಅರ್ಪಿಸಲು ಅವನಿಗೆ ಬಹಳ ಧೂಪವು ಕೊಡಲಾಗಿತ್ತು.
4ದೇವದೂತನ ಕೈಯಿಂದ ಧೂಪದ ಹೊಗೆಯು, ದೇವಜನರ ಪ್ರಾರ್ಥನೆಗಳೊಂದಿಗೆ ಸೇರಿ, ದೇವಸನ್ನಿಧಿಗೆ ಏರಿಹೋಯಿತು.
5ಆಗ ದೇವದೂತನು ಧೂಪಾರತಿಯನ್ನು ತೆಗೆದುಕೊಂಡು ಬಲಿಪೀಠದ ಬೆಂಕಿಯಿಂದ ಅದನ್ನು ತುಂಬಿಸಿ, ಭೂಮಿಯ ಮೇಲೆ ಎಸೆದನು. ಆಗ ಗುಡುಗುಗಳೂ ಸಪ್ಪಳವೂ ಮಿಂಚುಗಳೂ ಮತ್ತು ಭೂಕಂಪವೂ ಉಂಟಾದವು.
6ಆಗ ಏಳು ತುತೂರಿಗಳನ್ನು ಹಿಡಿದಿರುವ ಏಳು ದೇವದೂತರು ಅವುಗಳನ್ನು ಊದಲು ಸಿದ್ಧರಾದರು.
7ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಲು, ರಕ್ತದೊಂದಿಗೆ ಮಿಶ್ರಿತವಾದ ಆಲಿಕಲ್ಲಿನ ಮಳೆಯೂ ಬೆಂಕಿಯೂ ಭೂಮಿಯ ಮೇಲೆ ಸುರಿದವು. ಭೂಮಿಯ ಮೂರರಲ್ಲಿ ಒಂದು ಭಾಗವು ಸುಟ್ಟುಹೋಯಿತು. ಮರಗಳಲ್ಲಿ ಮೂರನೆಯ ಒಂದು ಭಾಗ ಭಸ್ಮವಾಯಿತು ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋಯಿತು.
8ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಉರಿಯುತ್ತಿರುವ ದೊಡ್ಡ ಬೆಟ್ಟದಂಥದ್ದು ಸಮುದ್ರದಲ್ಲಿ ಎಸೆಯಲಾಯಿತು. ಸಮುದ್ರದ ಮೂರರಲ್ಲಿ ಒಂದು ಭಾಗವು ರಕ್ತವಾಯಿತು.
9ಸಮುದ್ರದ ಜೀವಿಗಳಲ್ಲಿ ಮೂರರಲ್ಲಿ ಒಂದು ಭಾಗ ಸತ್ತವು ಮತ್ತು ಹಡಗುಗಳಲ್ಲಿ ಮೂರರಲ್ಲಿ ಒಂದು ಭಾಗ ನಾಶವಾದವು.
10ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೀಪದಂತೆ ಉರಿಯುವ ದೊಡ್ಡ ನಕ್ಷತ್ರವು ಆಕಾಶದಿಂದ ನದಿಗಳ ಹಾಗೂ ನೀರಿನ ಬುಗ್ಗೆಗಳ ಮೂರರಲ್ಲಿ ಒಂದು ಭಾಗದ ಮೇಲೆ ಬಿದ್ದಿತು.
11ಆ ನಕ್ಷತ್ರದ ಹೆಸರು, ಮಾಚಿಪತ್ರೆ, ಆಗ ಮೂರರಲ್ಲಿ ಒಂದು ಭಾಗವು ಕಹಿಯಾಯಿತು ಮತ್ತು ಆ ನೀರು ಕಹಿಯಾದ್ದರಿಂದ ಅನೇಕ ಜನರು ಸತ್ತರು.
12ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು, ಆಗ ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಮೂರರಲ್ಲಿ ಒಂದು ಭಾಗವು ಬಡೆದಿದ್ದರಿಂದ ಮೂರನೇ ಭಾಗವು ಕತ್ತಲಾಯಿತು. ಹಗಲಿನೊಳಗೆ ಮೂರರಲ್ಲಿ ಒಂದು ಭಾಗವು ಬಡೆದಿದ್ದರಿಂದ, ಮೂರನೇ ಭಾಗವು ಕತ್ತಲಾಯಿತು. ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಹೋಯಿತು. ರಾತ್ರಿಯು ಹಾಗೆಯೇ ಆಯಿತು.
13ನಾನು ನೋಡಲಾಗಿ, ಆಕಾಶದ ಮಧ್ಯದಲ್ಲಿ ಹಾರುತ್ತಿರುವ ಒಂದು ಗರುಡ ಪಕ್ಷಿ ಮಹಾಧ್ವನಿಯಿಂದ: ಇನ್ನೂ ಊದಲಿರುವ ಮೂವರು ದೂತರ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿಗಳಿಗೆ, “ಅಯ್ಯೋ! ಅಯ್ಯೋ! ಅಯ್ಯೋ!” ಎಂದಿತು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.