
ಪ್ರಕಟನೆ 4
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಯೋಹಾನನು ತೆರೆದ ಪರಲೋಕದ ಬಾಗಿಲಿನ ಮೂಲಕ ಪ್ರವೇಶಿಸಿ, ಪಚ್ಚೆಯ ಕಾಮನಬಿಲ್ಲು, ಇಪ್ಪತ್ನಾಲ್ಕು ಹಿರಿಯರು, ಏಳು ದೀಪಗಳು, ಸ್ಫಟಿಕದ ಸಮುದ್ರ ಮತ್ತು ನಾಲ್ಕು ಜೀವಿಗಳಿಂದ ಸುತ್ತುವರಿದ ಪ್ರಕಾಶಮಾನ ಸಿಂಹಾಸನವನ್ನು ಕಾಣುತ್ತಾನೆ. ಅವರ ನಿರಂತರ ಆರಾಧನೆಯು ಎಲ್ಲವನ್ನೂ ಸೃಷ್ಟಿಸಿದ ನಿತ್ಯ ದೇವರನ್ನು ಗೌರವಿಸುತ್ತದೆ.
ಪರಲೋಕದ ಸಿಂಹಾಸನಸೃಷ್ಟಿಪವಿತ್ರತೆಆರಾಧನೆ
1ಇವುಗಳಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿದ್ದ ಒಂದು ದ್ವಾರವು ಕಾಣಿಸಿತು. ನನ್ನೊಂದಿಗೆ ತುತೂರಿಯ ಧ್ವನಿಯಂತೆ ಮಾತನಾಡಿದ, ನಾನು ಮೊದಲು ಕೇಳಿದ ಧ್ವನಿಯಿಂದ, “ಬಾ, ಮುಂದೆ ಸಂಭವಿಸಲಿಕ್ಕೆ ಇರುವವುಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.
2ಕೂಡಲೇ ನಾನು ಆತ್ಮವಶನಾದೆನು. ಆಗ ನನ್ನೆದುರಿನಲ್ಲಿ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬರು ಕುಳಿತಿದ್ದರು.
3ಆಸೀನರಾದವರು ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದರು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆಬಿಲ್ಲು ಹೊಳೆಯುತ್ತಿತ್ತು.
4ಇದಲ್ಲದೆ ಸಿಂಹಾಸನದ ಸುತ್ತ ಇತರ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಬಿಳಿವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಬಂಗಾರದ ಕಿರೀಟಗಳಿದ್ದವು.
5ಸಿಂಹಾಸನದೊಳಗಿಂದ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಹರಡಿದವು. ಸಿಂಹಾಸನದ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಬೆಳಗುತ್ತಿದ್ದವು.
6ಇದಲ್ಲದೆ ಸಿಂಹಾಸನದ ಮುಂದೆ ಸ್ಪಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ, ಅದರ ಸುತ್ತಲೂ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.
7ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯದು ಮನುಷ್ಯನಂತಿತ್ತು, ನಾಲ್ಕನೆಯದು ಹಾರುವ ಹದ್ದಿನಂತಿತ್ತು.
8ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಆ ಜೀವಿಗಳ ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ ಹೀಗೆ ಹೇಳುತ್ತಿದ್ದವು: “ ‘ದೇವರು ಆಗಿರುವ ಕರ್ತ ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು, ಅವರು ಸರ್ವಶಕ್ತರು,’ ಗತಕಾಲ, ವರ್ತಮಾನ ಭವಿಷ್ಯತ್ಕಾಲಗಳಲ್ಲಿ ಇರುವವರು.”
9ಯುಗಯುಗಾಂತರಗಳಲ್ಲಿಯೂ ಜೀವಿಸುವವರಾಗಿ, ಸಿಂಹಾಸನದ ಮೇಲೆ ಆಸೀನರಾದವರಿಗೆ ಆ ನಾಲ್ಕು ಜೀವಿಗಳು ಮಹಿಮೆ, ಮಾನ, ಕೃತಜ್ಞತಾ ಸ್ತುತಿಗಳನ್ನು ಸಲ್ಲಿಸುವಾಗ,
10ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಆಸೀನರಾದವರ ಎದುರಿಗೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ,
11“ನಮ್ಮ ಕರ್ತ ಆಗಿರುವ ದೇವರೇ, ನೀವು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ಸಮಸ್ತವನ್ನು ಸೃಷ್ಟಿಸಿದವರು ನೀವೇ. ಎಲ್ಲವೂ ನಿಮ್ಮ ಚಿತ್ತದಿಂದಲೇ ನಿರ್ಮಿತವಾದವು, ನಿಮ್ಮ ಚಿತ್ತದಿಂದಲೇ ಇದ್ದವು,” ಎಂದು ಹೇಳುತ್ತಾ, ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಿದ್ದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.