A grieving musician prays at night while a distant people cross safely between towering waters

ಕೀರ್ತನೆಗಳು 77

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 77 ನಿದ್ರೆಯಿಲ್ಲದ ವೇದನೆ ಮತ್ತು ತೊರೆದ ಕರುಣೆಯ ಬಗ್ಗೆ ಪ್ರಶ್ನೆಗಳಿಂದ ಆರಂಭವಾಗುತ್ತದೆ. ಸಂದೇಹವನ್ನು ಅದುಮುವ ಬದಲು, ಕೀರ್ತನೆಗಾರನು ಚರಿತ್ರೆಯ ಮೂಲಕ ದೇವರ ಶಾಶ್ವತ ಶಕ್ತಿಯನ್ನು ಪ್ರಕಟಿಸುವ ವಿಮೋಚನೆ, ಬಿರುಗಾಳಿಗಳು, ನೀರುಗಳು ಮತ್ತು ಕಾಣದ ಮಾರ್ಗದರ್ಶನವನ್ನು ನೆನಪಿಸಿಕೊಳ್ಳುತ್ತಾನೆ.
ಪ್ರಲಾಪನೆನಪುವಿಮೋಚನೆನಿರೀಕ್ಷೆ
1ನನ್ನ ಸಹಾಯಕ್ಕಾಗಿ ದೇವರ ಕಡೆಗೆ ಕೂಗುತ್ತೇನೆ. ಹೌದು, ನನ್ನ ಸ್ವರದಿಂದ ದೇವರ ಕಡೆಗೆ ಕೂಗುತ್ತೇನೆ, ನನಗೆ ದೇವರು ಕಿವಿಗೊಡುವರು.
2ನನ್ನ ಇಕ್ಕಟ್ಟಿನ ದಿವಸದಲ್ಲಿ ಯೆಹೋವ ದೇವರನ್ನು ಹುಡುಕಿದೆನು. ನಾನು ರಾತ್ರಿಯೆಲ್ಲಾ ಬೇಸರವಿಲ್ಲದೆ ಕೈಚಾಚಿದೆ. ನನ್ನ ಮನಸ್ಸಿಗೆ ಶಾಂತಿ ಇರಲಿಲ್ಲ.
3ನಾನು ವ್ಯಥೆಪಡುತ್ತಿರುವಾಗ, ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿಸುವುದರಿಂದ ನನ್ನ ಆತ್ಮವು ಬಳಲಿ ಹೋಯಿತು.
4ನನ್ನ ಕಣ್ಣುಗಳನ್ನು ಮುಚ್ಚದಿರುವಾಗ, ನಾನು ಮಾತನಾಡಲಾರದಂತೆ ಕಳವಳಪಟ್ಟೆನು.
5ಪೂರ್ವದ ದಿವಸಗಳನ್ನೂ ಆದಿಕಾಲದ ವರ್ಷಗಳನ್ನೂ ಯೋಚಿಸಿದೆ.
6ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕಮಾಡಿಕೊಂಡೆನು. ನನ್ನ ಹೃದಯದಲ್ಲಿ ನಾನು ಧ್ಯಾನ ಮಾಡಿದೆ. ನನ್ನ ಆತ್ಮದಲ್ಲಿ ಪ್ರಶ್ನೆ ಹೀಗೆ ಮೂಡುತ್ತಿತ್ತು:
7“ನಿರಂತರವಾಗಿ ಯೆಹೋವ ದೇವರು ತಳ್ಳಿಬಿಡುವರೋ? ಇನ್ನೆಂದಿಗೂ ದಯೆತೋರದೆ ಇರುವರೋ?
8ದೇವರ ಒಡಂಬಡಿಕೆಯ ಪ್ರೀತಿಯು ಸದಾಕಾಲಕ್ಕೆ ನಿಂತು ಹೋಯಿತೋ? ತಲತಲಾಂತರಕ್ಕೂ ವಾಗ್ದಾನ ಮುಗಿದು ಹೋಯಿತೋ?
9ದೇವರು ಕರುಣಿಸುವುದನ್ನು ಮರೆತು ಬಿಟ್ಟಿದ್ದಾರೋ? ತಮ್ಮ ಅಂತಃಕರಣವನ್ನು ಬೇಸರದಿಂದ ತಡೆಹಿಡಿದಿದ್ದಾರೋ?”
10ನಂತರ ನಾನು ಯೋಚಿಸಿದ್ದೇನಂದರೆ, “ಹೀಗೆ ನೆನಸಿದ್ದು ನನ್ನ ಬಲಹೀನತೆಯೇ. ಮಹೋನ್ನತ ದೇವರ ಬಲಗೈಯ ಪರಾಕ್ರಮದ ವರ್ಷಗಳನ್ನು ನಾನು ಸ್ಮರಿಸುವೆನು.
11ಯೆಹೋವ ದೇವರ ಕ್ರಿಯೆಗಳನ್ನು ಜ್ಞಾಪಕಮಾಡಿಕೊಳ್ಳುವೆನು. ಹೌದು, ಆದಿಯಿಂದಲೂ ನೀವು ನಡೆಸಿದ ಅದ್ಭುತಗಳನ್ನು ನೆನಪುಮಾಡಿಕೊಳ್ಳುವೆನು.
12ನಿಮ್ಮ ಮಹಾಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು, ನಿಮ್ಮ ಕೃತ್ಯಗಳನ್ನು ಯೋಚಿಸುವೆನು.”
13ದೇವರೇ, ನಿಮ್ಮ ಮಾರ್ಗಗಳು ಪರಿಶುದ್ಧವಾದವುಗಳು. ನಮ್ಮ ದೇವರ ಹಾಗೆ ಮಹಾ ದೇವರು ಯಾರು?
14ಅದ್ಭುತಗಳನ್ನು ಮಾಡುವ ದೇವರು ನೀವೇ. ಜನರಲ್ಲಿ ನಿಮ್ಮ ಬಲವನ್ನು ತಿಳಿಯಮಾಡಿದ್ದೀರಿ.
15ಯಾಕೋಬನ ಮತ್ತು ಯೋಸೇಫನ ಸಂತತಿಯವರಾದ ನಿಮ್ಮ ಜನರನ್ನು ನಿಮ್ಮ ಬಲವಾದ ತೋಳಿನಿಂದ ವಿಮೋಚಿಸಿದ್ದೀರಿ.
16ಜಲರಾಶಿಗಳು ನಿಮ್ಮನ್ನು ಕಂಡವು. ದೇವರೇ, ಜಲರಾಶಿಗಳು ನಿಮ್ಮನ್ನು ಕಂಡು ಹೊರಳಾಡಿದವು. ಅಗಾಧ ಸಾಗರಗಳು ಅಲ್ಲಕಲ್ಲೋಲವಾದವು.
17ಮೋಡಗಳು ನೀರನ್ನು ಸುರಿಸಿದವು. ಆಕಾಶಗಳು ಗುಡುಗಿನಿಂದ ಶಬ್ದಮಾಡಿದವು. ನಿಮ್ಮ ಬಾಣಗಳು ಹಿಂದೆಯೂ ಮುಂದೆಯೂ ಹಾರಿ ಬಂದವು.
18ನಿಮ್ಮ ಗುಡುಗಿನ ಶಬ್ದವು ಸುಂಟರಗಾಳಿಯಲ್ಲಿ ಕೇಳುತ್ತಿತ್ತು. ಮಿಂಚುಗಳು ಜಗತ್ತನ್ನು ಬೆಳಗಿಸಿದವು. ಭೂಮಿಯು ನಡುಗಿ ಕದಲಿತು.
19ನೀವು ಸಮುದ್ರದಲ್ಲಿ ಮಾರ್ಗಮಾಡಿದಿರಿ. ಮಹಾಜಲರಾಶಿಗಳನ್ನು ದಾಟಿದಿರಿ. ಆದರೂ ನಿಮ್ಮ ಹೆಜ್ಜೆಯ ಗುರುತು ಕಾಣಲಿಲ್ಲ.
20ಮೋಶೆ ಆರೋನರ ಕೈಯಿಂದ ನಿಮ್ಮ ಜನರನ್ನು ಮಂದೆಯ ಹಾಗೆ ನಡೆಸಿದಿರಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.