
ಕೀರ್ತನೆಗಳು 52
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 52 ಹಾನಿ, ಮೋಸ ಮತ್ತು ಕದ್ದ ಭದ್ರತೆಯಲ್ಲಿ ಹೆಮ್ಮೆಪಡುವ ಬಲಿಷ್ಠ ಚಾಡಿಕೋರನನ್ನು ಎದುರಿಸುತ್ತದೆ. ವಿನಾಶಕಾರಿ ಮಾತು ಉಳಿಯುವುದಿಲ್ಲ, ಆದರೆ ನಂಬಿಗಸ್ತ ವ್ಯಕ್ತಿಯು ಸ್ಥಿರ ಭರವಸೆ ಮತ್ತು ಕೃತಜ್ಞತೆಯ ಸಾರ್ವಜನಿಕ ಸಾಕ್ಷಿಯ ಮೂಲಕ ಎಣ್ಣೆಮರದಂತೆ ಬೆಳೆಯುತ್ತಾನೆ.
ಮೋಸಭರವಸೆನ್ಯಾಯತೀರ್ಪುಕೃತಜ್ಞತೆ
1ಬಲಿಷ್ಠನೇ, ನೀನು ಕೆಟ್ಟತನದಲ್ಲಿ ಹೆಚ್ಚಳ ಪಡುವುದೇಕೆ? ದೇವರ ದೃಷ್ಟಿಯಲ್ಲಿ ಅಪಕೀರ್ತಿಯಾದವನೇ, ದೇವರ ಅನಂತ ಕೃಪೆಯು ಯಾವಾಗಲೂ ಇರುವದು.
2ಮೋಸ ಮಾಡುವವನೇ, ಹದವಾದ ಕ್ಷೌರ ಕತ್ತಿಯ ಹಾಗೆ ನಿನ್ನ ನಾಲಿಗೆಯು ಕೇಡನ್ನು ಕಲ್ಪಿಸುತ್ತದೆ.
3ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ನೀನು ಪ್ರೀತಿಸುತ್ತಿ. ಸತ್ಯವನಾಡುವುದಕ್ಕಿಂತ ಸುಳ್ಳನ್ನೇ ನೀನು ಮಾತನಾಡುತ್ತಿ.
4ಮೋಸದ ನಾಲಿಗೆಯೇ, ನಿನಗೆ ಹಾನಿಕರವಾದ ಮಾತುಗಳೇ ಇಷ್ಟ.
5ಆದ್ದರಿಂದ ದೇವರು ನಿಶ್ಚಯವಾಗಿ ನಿನ್ನನ್ನು ನಿತ್ಯ ನಾಶಕ್ಕೆ ತರುವರು. ದೇವರು ನಿನ್ನನ್ನು ನಿನ್ನ ವಾಸಸ್ಥಳದಿಂದ ಕಿತ್ತುಹಾಕುವರು. ಜೀವಿತರ ದೇಶದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವರು.
6ನೀತಿವಂತರು ಇದನ್ನು ಕಂಡು ಭಯಪಡುವರು. ಅವರು ನಿನ್ನ ಬಗ್ಗೆ ನಗಾಡಿ ಹೀಗನ್ನುವರು,
7“ಇಗೋ, ದೇವರನ್ನು ತನ್ನ ಬಲವನ್ನಾಗಿ ಮಾಡಿಕೊಳ್ಳದೆ, ತನ್ನ ಅಧಿಕ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡು ಇತರರನ್ನು ನಾಶಮಾಡಿದ ಮನುಷ್ಯನು ಇವನೇ!”
8ನಾನಾದರೋ ದೇವರ ಆಲಯದಲ್ಲಿರುವ ಅಭಿವರ್ದಿಸುವ ಓಲಿವ್ ಮರದ ಹಾಗೆ ಇರುವೆನು. ದೇವರ ಒಡಂಬಡಿಕೆಯ ಪ್ರೀತಿಯಲ್ಲಿ ಯುಗಯುಗಾಂತರವೂ ಭರವಸವಿಟ್ಟಿರುವೆನು.
9ದೇವರೇ ನಿಮ್ಮ ಉಪಕಾರಕ್ಕಾಗಿ ಯಾವಾಗಲೂ ನಿಮ್ಮ ಭಕ್ತರ ಮುಂದೆ ನಿಮ್ಮನ್ನು ಸ್ತುತಿಸುತ್ತಿರುವೆನು. ನಿಮ್ಮ ಹೆಸರು ಒಳ್ಳೆಯದು. ಆದುದರಿಂದ ನಿಮ್ಮ ಹೆಸರನ್ನೇ ನಿರೀಕ್ಷಿಸಿಕೊಂಡಿರುವೆನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.